ಚಿಕಿತ್ಸೆಗಾಗಿ ರೋಗಿಗಳು ಕಾಯುತ್ತಿದ್ದರೆ ವೈದ್ಯ ಮಾಡಿದ್ದೇನು ಗೊತ್ತೆ..?

ತುಮಕೂರು ಮಾ.7 : ಆಸ್ಪತ್ರೆಯಲ್ಲಿ ಹೊರ ರೋಗಿಗಳು ಚಿಕಿತ್ಸೆಗಾಗಿ ಕಾಯುತ್ತಿದ್ದರೆ ವೈದ್ಯನೋರ್ವ ತನ್ನ ಕೊಠಡಿಯಲ್ಲಿ ಪಾನಮತ್ತನಾಗಿ ಮಲಗಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಚಿಕಿತ್ಸೆಗೆ ಬಂದವರೊಬ್ಬರು ಮೊಬೈಲ್‍ನಲ್ಲಿ ಈ ದೃಶ್ಯ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

ಇಲ್ಲಿನ ಆಸ್ಪತ್ರೆಯಲ್ಲಿ ಮಧ್ಯಾಹ್ನ ಹೊರ ರೋಗಿಗಳು ಚಿಕಿತ್ಸೆಗಾಗಿ ಕಾಯುತ್ತಿದ್ದಾಗಲೇ ದಂತ ವಿಭಾಗದ ಡಾ.ಜಯಪ್ರಕಾಶ್ ಎಂಬವರು ಮದ್ಯಪಾನ ಮಾಡಿ ಟೇಬಲ್ ಮೇಲೆ ಕಾಲಿಟ್ಟು ಕುರ್ಚಿಯಲ್ಲಿಯೇ ಮಲಗಿದ್ದರು. ಮಾತನಾಡಲು ಪ್ರಯತ್ನಿಸಿದ ರೋಗಿಗಳನ್ನು ಹೊರ ಹೋಗುವಂತೆ ವೈದ್ಯ ಹೇಳಿರುವುದು ಈ ವೈರಲ್ ವಿಡಿಯೋದಲ್ಲಿ ಕಾಣಬಹುದಾಗಿದೆ.

ಈ ಬಗ್ಗೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಡಿ.ಎಚ್.ಒ ಡಾ.ಡಿ.ಎನ್. ಮಂಜುನಾಥ್ ಅವರು, `ವೈದ್ಯರ ವರ್ತನೆಯನ್ನು ಆರೋಗ್ಯ ಇಲಾಖೆಯ ಆಯುಕ್ತರ ಗಮನಕ್ಕೆ ತರಲಾಗಿದೆ. ಈ ಕುರಿತು ತನಿಖೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು’ ಎಂದು ತಿಳಿಸಿದ್ದಾರೆ.

ಈ ಮೊದಲು ನೆಲಮಂಗಲ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಇವರು ಮದ್ಯಪಾನ ಮಾಡಿದ ಆರೋಪದ ಮೇಲೆ ಅಮಾನತುಗೊಂಡಿದ್ದರು. ವರ್ಷದ ಹಿಂದೆ ಅವರನ್ನು ತಿಪಟೂರು ಸಾರ್ವಜನಿಕ ಆಸ್ಪತ್ರೆಗೆ ವರ್ಗಾವಣೆ ಮಾಡಲಾಗಿತ್ತು ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!