ವಿಮಾನದ ತುರ್ತು ನಿರ್ಗಮನದ ದ್ವಾರ ತೆರೆಯಲು ಯತ್ನಿಸಿದ ಪ್ರಯಾಣಿಕನ ಬಂಧನ

ವಾಷಿಂಗ್ಟನ್ ಮಾ.7 : ಲಾಸ್ ಏಂಜಲೀಸ್‍ನಿಂದ ಬೋಸ್ಟನ್‍ಗೆ ಪ್ರಯಾಣಿಸುತ್ತಿದ್ದ ಯುನೈಟೆಡ್ ಏರ್‍ಲೈನ್ಸ್ ವಿಮಾನದಲ್ಲಿ ತುರ್ತು ನಿರ್ಗಮನ ದ್ವಾರ ತೆರೆಯಲು ಪ್ರಯತ್ನಿಸಿದ್ದ ವ್ಯಕ್ತಿಯನ್ನು ತಡೆಯಲು ಹೋದ ಗಗನಸಖಿಯ ಮೇಲೆ ಹಲ್ಲೆ ನಡೆಸಿರುವ ಘಟನೆಯೊಂದು ವರದಿಯಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಅಮೆರಿಕ ನ್ಯಾಯಾಂಗ ಇಲಾಖೆಯು, ಘಟನೆಗೆ ಸಂಬಂಧಿಸಿದಂತೆ ಆರೋಪಿ ಲಿಯೋಮಿನ್‍ಸ್ಟರ್‍ನ ಟೊರಸ್(33) ಎಂಬಾತನನ್ನು ಬೋಸ್ಟನ್ ಲೋಗನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ. ಫ್ರಾನ್ಸಿಸ್ಕೊ ಟೊರಸ್ ಅಪಾಯಕಾರಿ ಆಯುಧ ಬಳಸಿ ವಿಮಾನ ಸಿಬ್ಬಂದಿಯನ್ನು ಇರಿಯಲು ಯತ್ನಿಸಿದ್ದಾನೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಮಾ. 9 ರಂದು ಪ್ರಕರಣ ವಿಚಾರಣೆ ನಡೆಯಲಿದ್ದು, ಅಲ್ಲಿವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.

ಟೊರಸ್ ಲಾಸ್ ಏಂಜಲೀಸ್ ನಿಂದ ಬೋಸ್ಟನ್‍ಗೆ ಯುನೈಟೆಡ್ ಏರ್‍ಲೈನ್ಸ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಲ್ಯಾಂಡಿಂಗ್‍ಗೆ ಸುಮಾರು 45 ನಿಮಿಷಗಳ ಮೊದಲು, ವಿಮಾನ ಸಿಬ್ಬಂದಿಗೆ ಕಾಕ್‍ಪಿಟ್‍ನಲ್ಲಿ ಎಚ್ಚರಿಕೆಯ ಶಬ್ದ ಕೇಳಿಸಿತು, ವಿಮಾನದ ತುರ್ತು ನಿರ್ಗಮನ ದ್ವಾರ ತೆರೆಯಲು ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಯಿತು. ಬಳಿಕ ಬಾಗಿಲಿನ ಲಾಕ್ ಹ್ಯಾಂಡಲ್ ತೆರೆಯಲು ಪ್ರಯತ್ನಿಸಿರುವುದನ್ನು ಗಗನಸಖಿ ಗಮನಿಸಿದರು. ತಕ್ಷಣ ಈ ವಿಷಯವನ್ನು ಪೈಲೆಟ್ ಗಮನಕ್ಕೆ ತರಲಾಗಿದೆ. ಇದೇ ವೇಳೆ ಟೊರಸ್ ಈ ಕೃತ್ಯ ನಡೆಸಿರುವುದು ಗೊತ್ತಾಗಿ ವಿಮಾನ ಸಿಬ್ಬಂದಿ ಆತನನ್ನು ಪ್ರಶ್ನಿಸಲು ಹೋಗಿದ್ದಾರೆ. ಆಗ ಆತ ತನ್ನ ಬಳಿಯಿದ್ದ ಅಪಾಯಕಾರಿ ಸಾಧನದಿಂದ ಗಗನಸಖಿಗೆ ತಿವಿಯಲು ಯತ್ನಿಸಿದ್ದಾನೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!