ಕಾರವಾರ: ಕಳಪೆ ಗುಣಮಟ್ಟದ ಆಹಾರ- ವಸತಿ ನಿಲಯದ ವಿದ್ಯಾರ್ಥಿಗಳ ಪ್ರತಿಭಟನೆ

ಕಾರವಾರ, ಫೆ.22: ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ಬರುವ ಕಾರವಾರದ ಬಾಡದಲ್ಲಿರುವ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಊಟ ಸರಿಯಿಲ್ಲ ಎಂದು ಆರೋಪಿಸಿ ಕೆಲ ವಿದ್ಯಾರ್ಥಿಗಳು ಊಟದ ತಟ್ಟೆಯೊಂದಿಗೆ ರಸ್ತೆಗಿಳಿದು ಪ್ರತಿಭಟನೆ ನಡೆಸಿದ ಘಟನೆ ನಿನ್ನೆ ರಾತ್ರಿ ನಡೆದಿದೆ.

ವಸತಿ ನಿಲಯದಲ್ಲಿ ಮೀನನ್ನು ಸರಿಯಾಗಿ ಸ್ವಚ್ಛ ಮಾಡುವುದಿಲ್ಲ. ಸಾಂಬಾರ್ ಮಾಡಿದರೆ ಮಸಾಲೆಯನ್ನು ಸರಿಯಾಗಿ ಹಾಕುವುದಿಲ್ಲ. ಶೌಚಾಲಯವನ್ನು ಸ್ವಚ್ಛ ಮಾಡುವುದಿಲ್ಲ ಎಂದು ಆರೋಪಿಸಿ ಮೆಟ್ರಿಕ್, ಪದವಿ ಪೂರ್ವ ವಿದ್ಯಾರ್ಥಿಗಳು ಊಟದ ತಟ್ಟೆ ಹಿಡಿದುಕೊಂಡು ರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸಿದರು.

ಈ ಬಗ್ಗೆ ವಿಷಯ ತಿಳಿದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಅಜ್ಜಪ್ಪ ಸೊಲಗದ್ ಅವರು ಸ್ಥಳಕ್ಕೆ ಆಗಮಿಸಿ ಅರ್ಧಗಂಟೆಗೂ ಅಧಿಕ ಕಾಲ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿ ಬಳಿಕ ವಸತಿ ನಿಲಯ ಪರಿಶೀಲನೆ ನಡೆಸಿದರು. ಈ ವೇಳೆ ಅಡುಗೆ ಸಹಾಯಕ ಹಾಗೂ ಸೆಕ್ಯುರಿಟಿ ಗಾರ್ಡ್ ಅವರ ಬೇಜವಾಬ್ದಾರಿ ಬಗ್ಗೆ ಮಕ್ಕಳು ದೂರಿದರು. ಆಗ ಅಡುಗೆ ಸಹಾಯಕರನ್ನು  ತರಾಟೆಗೆ ತೆಗೆದುಕೊಂಡ ಅಜ್ಜಪ್ಪ ಸೊಲಗದ್ ಅವರು ಸಮಸ್ಯೆ ಮರುಕಳಿಸದಂತೆ ಕ್ರಮ ಕೈಗೊಳ್ಳುವುದಾಗಿ ವಿದ್ಯಾರ್ಥಿಗಳಿಗೆ ಭರವಸೆ ನೀಡಿದರು. ಬಳಿಕ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ಹಿಂಪಡೆದರು.

ಇದೇ ವೇಳೆ ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ ನೀಡುವಂತೆ, ಸ್ವಚ್ಛತೆಯನ್ನ ಮಾಡುವಂತೆ ವಾರ್ಡನ್‌ಗೆ ಸೂಚನೆ ನೀಡಿದರು. ಹಾಗೂ  ಮುಂದೆ ತಾವು ಧಿಡೀರ್ ಭೇಟಿ ನೀಡಿ ಪರಿಶೀಲನೆ ಮಾಡುತ್ತೇನೆ. ತಪ್ಪು ಮಾಡಿರುವುದು ಗಮನಕ್ಕೆ ಬಂದರೆ ಕೆಲಸದಿಂದ ವಜಾ ಮಾಡುವುದಾಗಿ ಅಡುಗೆ ಸಹಾಯಕರಿಗೆ ಎಚ್ಚರಿಕೆ ನೀಡಿದರು ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!