ನಾರಾಯಣ ಗುರು ಅಭಿವೃದ್ಧಿ ನಿಗಮಕ್ಕೆ 500 ಕೋ. ಅನುದಾನ ನೀಡಲು ಆಗ್ರಹ 

ಮಂಗಳೂರು ಫೆ.22: ಚುನಾವಣೆ ಹೊಸ್ತಿಲಲ್ಲಿ ನಿಗಮ, ಘೋಷಣೆ ಮಾಡಿರುವುದರಿಂದ ಬಿಲ್ಲವ, ಈಡಿಗ ಸಮುದಾಯಕ್ಕೆ ಯಾವುದೇ ಪ್ರಯೋಜನ ಇಲ್ಲ. ಆದ್ದರಿಂದ ನಿಗಮಕ್ಕೆ 500 ಕೋಟಿ ಅನುದಾನ ಬಿಡುಗಡೆ ಮಾಡಬೇಕು ಎಂದು ಶ್ರೀ ನಾರಾಯಣ ಗುರು ವಿಚಾರ ವೇದಿಕೆ ಅಧ್ಯಕ್ಷ ಸತ್ಯಜಿತ್‌ ಸುರತ್ಕಲ್ ಒತ್ತಾಯಿಸಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರ ನಾರಾಯಣಗುರು ಅಭಿವೃದ್ಧಿ ನಿಗಮ ಘೋಷಣೆ ಮಾಡಿರುವುದು ಅಭಿನಂದನೀಯ. ಚುನಾವಣೆ ಹೊಸ್ತಿಲಲ್ಲಿ ನಿಗಮ, ಘೋಷಣೆ ಮಾಡಿರುವುದರಿಂದ ಬಿಲ್ಲವ, ಈಡಿಗ ಸಮುದಾಯಕ್ಕೆ ಯಾವುದೇ ಪ್ರಯೋಜನ ಇಲ್ಲ. ರಾಜ್ಯ ಸರಕಾರ ನಾರಾಯಣ ಗುರು ಅಭಿವೃದ್ಧಿ ನಿಗಮ ಘೋಷಣೆ ಮಾಡುವ ಮೂಲಕ ಸಮಾಜಕ್ಕೆ ಒಂದು ಹಂತದ ಗೆಲುವು ಸಿಕ್ಕಿದ್ದು, ನಿಗಮಕ್ಕೆ ಸದಸ್ಯರ ನೇಮಕ, ಕನಿಷ್ಠ 500ಕೋಟಿ ರೂ. ಅನುದಾನ ಘೋಷಣೆ ಮಾಡುವತನಕ ನಮ್ಮ ಹೋರಾಟದಿಂದ ವಿರಮಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.

ರಾಜ್ಯ ಸರಕಾರಕ್ಕೆ ನಿಜವಾಗಿಯೂ ಬಿಲ್ಲವರ ಬಗ್ಗೆ ಕಾಳಜಿಯಿದ್ದರೆ ಯಾವತ್ತೋ ನಿಗಮ ಘೋಷಿಸಬೇಕಿತ್ತು. ನಿಗಮ ಘೋಷಣೆಯಾದ ಕಾರಣ ಬಿಲ್ಲವರು ದೇವರಾಜ ಅರಸು ನಿಗಮದಿಂದ ಅನುದಾನ ಪಡೆಯುವಂತಿಲ್ಲ. ಬಜೆಟ್ ಏಪ್ರಿಲ್‌ ನಿಂದ ಜಾರಿಗೆ ಬರಲಿದ್ದು, ಮಾರ್ಚ್ ಅಂತ್ಯಕ್ಕೆ ನೀತಿ ಸಂಹಿತೆ ಜಾರಿ ಸಾಧ್ಯತೆಯಿರುವುದರಿಂದ ಇನ್ನೇನಿದ್ದರೂ ಹೊಸ ಸರಕಾರ ಬಂದ ಬಳಿಕವೇ ನಿಗಮ ಅನುಷ್ಠಾನಕ್ಕೆ ಬರಲಿದೆ. ಆದುದರಿಂದ ಸಮಾಜ ಈಗಲೇ ಸಂಭ್ರಮಿಸುವ ಅಗತ್ಯವಿಲ್ಲ ಎಂದರು.

ಈ ವೇಳೆ ಶ್ರೀ ಗುರು ಬೆಳದಿಂಗಳು ಫೌಂಡೇಶನ್ ಅಧ್ಯಕ್ಷ ಪದ್ಮರಾಜ್ ಆರ್. ಅವರು ಮಾತನಾಡಿ, ನಿಗಮ ಘೋಷಣೆ ಮಾಡಿರುವುದು ರಾಜ್ಯ ಸರಕಾರದ ಆರಂಭದ ಹೆಜ್ಜೆ. ಅನುಷ್ಠಾನ ಕಾನೂನಿನ ಪ್ರಕಾರ ಸಾಧ್ಯವಿಲ್ಲ. ನಿಗಮ ಆರಂಭವಾದ ಮೇಲೆ ಸಹಕಾರಿ ಕಾಯಿದೆಯಡಿ ನೋಂದಣಿಯಾಗಬೇಕು. ಬೈಲಾ ರಚನೆಯಾಗಬೇಕು. ಈ ಪ್ರಕ್ರಿಯೆಗೆ 3 ತಿಂಗಳು ಬೇಕಾಗಿದ್ದು, ಮುಂದಿನ ಸರಕಾರಕ್ಕೆ ಕಾರ್ಯಕ್ರಮ ಅನುಷ್ಠಾನ ಸಾಧ್ಯ ಎಂದರು. 

ಈ ಸಂದರ್ಭದಲ್ಲಿ ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡಿಂಜ, ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ಗೆಜ್ಜೆಗಿರಿ ಕ್ಷೇತ್ರದ ಮಾಧ್ಯಮ ವಕ್ತಾರ ರಾಜೇಂದ್ರ ಚಿಲಿಂಬಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!