ಸುಳ್ಯ: ಸಾಲ ತೀರಿಸಲಾಗದೆ ಬ್ಯಾಂಕನಲ್ಲೇ ವ್ಯಕ್ತಿ ಆತ್ಮಹತ್ಯೆಗೆ ಯತ್ನ 

ಸುಳ್ಯ ಫೆ.22: ಪಡೆದ ಸಾಲವನ್ನು ಮರುಪಾವತಿ ಮಾಡಲು ಸಾಧ್ಯವಾಗದ ಗ್ರಾಹಕರೊಬ್ಬರು ಬ್ಯಾಂಕ್‌ಗೆ ಬಂದು ಪೆಟ್ರೋಲ್‌ ಸುರಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸುಳ್ಯದಲ್ಲಿ ನಡೆದಿದೆ.

ಸುಳ್ಯದ ಕ್ರೆಡಿಟ್‌ ಸೌಹಾರ್ದ ಸಂಘದಿಂದ ವ್ಯವಹಾರಕ್ಕೆ ಶಿವಣ್ಣ ಗೌಡ ಅವರು 2015ರಲ್ಲಿ 18.50 ಲಕ್ಷ ರೂ. ಸಾಲ ಪಡೆದುಕೊಂಡಿದ್ದರು. ಸಾಲ ಪಡೆದ ಬಳಿಕ ಸಮರ್ಪಕವಾಗಿ ಮರುಪಾವತಿ ನಡೆಸಿದ್ದರು. ಆದರೆ ಕೊರೊನಾ ಕಾಲದ ಬಳಿಕ ಶಿವಣ್ಣ ಗೌಡರು ಬ್ಯಾಂಕ್‌ಗೆ ಸಾಲದ ಕಂತು ಕಟ್ಟಿರಲಿಲ್ಲ. ತೆಗೆದ ಸಾಲ ಬೆಳೆಯುತ್ತಾ ಹೋಯಿತು. ಬ್ಯಾಂಕ್‌ನವರು ಶಿವಣ್ಣ ಗೌಡರಿಗೆ ಸಾಲ ಕಟ್ಟುವಂತೆ ತಿಳಿಸಿದ್ದರು. ಕೆಲವು ಬಾರಿ ಬ್ಯಾಂಕ್‌ಗೆ ಬಂದ್ದಿದ್ದ ಶಿವಣ್ಣ ಗೌಡರು ರಿಯಾಯಿತಿ ಮಾಡುವಂತೆ ಕೇಳಿಕೊಂಡ ಹಿನ್ನಲೆಯಲ್ಲಿ ಬ್ಯಾಂಕ್‌ನವರು ಬಡ್ಡಿ ರಿಯಾಯಿತಿಯೂ ನೀಡಿದ್ದರೆಂದೂ ತಿಳಿದುಬಂದಿದೆ. ಆದರೆ ಅಸಲು ಹಾಗೆ ಉಳಿದಿತ್ತು.

ಈ ನಡುವೆ ಸಾಲ ತೀರಿಸಲಾಗದೆ ಮನನೊಂದ ಶಿವಣ್ಣ ಅವರು ಬೆಳಗ್ಗೆ ಬ್ಯಾಂಕ್‌ ಗೆ ಬಂದು ಕ್ಯಾನ್‌ನಲ್ಲಿ ತಂದಿದ್ದ ಪೆಟ್ರೋಲ್‌ ಅನ್ನು ಬ್ಯಾಂಕ್‌ನೊಳಗೆ ಚೆಲ್ಲಿ ನಾನು ಆತ್ಮಹತ್ಯೆ ಮಾಡುವುದಾಗಿ ಹೇಳಿದರೆನ್ನಲಾಗಿದೆ. ಇದನ್ನರಿತ ಬ್ಯಾಂಕ್‌ನ ಶಾಖಾ ವ್ಯವಸ್ಥಾಪಕರು ಹಾಗೂ ಸಿಬಂದಿ ಶಿವಣ್ಣರನ್ನು ತಡೆದು ಬ್ಯಾಂಕ್‌ನಿಂದ ಹೊರಗೆ ಕರೆತಂದರು. ಬಳಿಕ ಪೊಲೀಸರು ಆಗಮಿಸಿ ಶಿವಣ್ಣ ಗೌಡರನ್ನು ಕರೆದುಕೊಂಡು ಹೋಗಿ ಸಮಾಧಾನಪಡಿಸಿದರು ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!