ಉಡುಪಿ: ಫೆ.23-26- ರಾಷ್ಟ್ರೀಯ ಡ್ರ್ಯಾಗನ್ ಬೋಟ್ ಚಾಂಪಿಯನ್ಶಿಪ್

ಸಾಂದರ್ಭಿಕ ಚಿತ್ರ

ಉಡುಪಿ, ಫೆ.21: ಉಡುಪಿಯ ಹೇರೂರಿನ ರಾಷ್ಟ್ರೀಯ ಹೆದ್ದಾರಿ 66ರ ಸಮೀಪದ ಸುವರ್ಣ ನದಿ ಸೇತುವೆ ಬಳಿ ಫೆ.23 ರಿಂದ 26 ರ ವರೆಗೆ ರಾಜ್ಯದಲ್ಲಿಯೇ ಮೊದಲ ಬಾರಿಗೆ ರಾಷ್ಟ್ರೀಯ ಡ್ರ್ಯಾಗನ್ ಬೋಟ್ ಚಾಂಪಿಯನ್ಶಿಪ್ ನಡೆಯಲಿದೆ ಎಂದು ಶಾಸಕ ಕೆ.ರಘುಪತಿ ಭಟ್ ಅವರು ತಿಳಿಸಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಜಿಲ್ಲಾಡಳಿತ, ಜಿಪಂ, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗಳು ಭಾರತೀಯ ಕಯಾಕಿಂಗ್ ಮತ್ತು ಕನೂಯಿಂಗ್ ಅಸೋಸಿಯೇಷನ್ ಹಾಗೂ ಕಯಾಕಿಂಗ್ ಮತ್ತು ಕನೂಯಿಂಗ್ ಅಸೋಸಿಯೇಷನ್ ಕರ್ನಾಟಕ ರಾಜ್ಯ ಇವುಗಳ ಸಹಯೋಗ ದೊಂದಿಗೆ ಮೊದಲ ಬಾರಿಗೆ ರಾಷ್ಟ್ರೀಯ ಮಟ್ಟದ ಈ ಆಕರ್ಷಕ ಸ್ಪರ್ಧೆಯನ್ನು ಆಯೋಜಿಸುತ್ತಿದೆ. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿರುವ  ಈ ಆಕರ್ಷಕ ಸ್ಪರ್ಧೆಗೆ ಸ್ವರ್ಣ ನದಿ ಇದಕ್ಕೆ ಪ್ರಸಕ್ತ ತಾಣವಾಗಿದೆ. ಇಲ್ಲಿ ಒಂದು ಕಿ.ಮೀ. ಉದ್ದಕ್ಕೂ ನದಿಯ ಇಕ್ಕೆಲಗಳಲ್ಲಿ ದಂಡೆ ನಿರ್ಮಿಸಿದ್ದು, 5000ಕ್ಕೂ ಅಧಿಕ ಮಂದಿ ಸ್ಪರ್ಧೆಯನ್ನು ವೀಕ್ಷಿಸಲು ಅವಕಾಶವಿದೆ. ಉಡುಪಿಯಲ್ಲಿರುವ ಜನರಲ್ ತಿಮ್ಮಯ್ಯ ಸಾಹಸ ಅಕಾಡೆಮಿಯ ತರಬೇತುದಾರರು ಉಡುಪಿ ಜಿಲ್ಲೆಯಲ್ಲಿ ಆರು ತಂಡಗಳಿಗೆ ಡ್ರ್ಯಾಗನ್ ಬೋಟ್ ಹಾಗೂ ಕಯಾಕಿಂಗ್‌ನಲ್ಲಿ ತರಬೇತಿಯನ್ನು ನೀಡುತಿದ್ದಾರೆ ಎಂದು ಹೇಳಿದರು.

ಹಾಗೂ ದೇಶದ 15 ರಾಜ್ಯಗಳ ಡ್ರ್ಯಾಗನ್ ಬೋಟ್ ಹಾಗೂ ಕಯಾಕಿಂಗ್ ತಂಡಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದು, ಈ ಚಾಂಪಿಯನ್ಶಿಪ್ ನಲ್ಲಿ ಸ್ಪರ್ಧಿಗಳು ತೋರುವ ಪ್ರದರ್ಶನದ ಆಧಾರದ ಮೇಲೆ ಮುಂದಿನ ಏಷ್ಯನ್ ಗೇಮ್ಸ್‌ಗೆ ಭಾರತೀಯ ತಂಡದ ಆಯ್ಕೆಯೂ ನಡೆಯಲಿದೆ. ಮುಂದಿನ ಏಷ್ಯನ್ ಗೇಮ್ಸ್‌ಗೆ ಡ್ರ್ಯಾಗನ್ ಬೋಟ್ ಹಾಗೂ ಕಯಾಕಿಂಗ್ ಸ್ಪರ್ಧೆಗಳನ್ನು ಪದಕಗಳ ಪಟ್ಟಿಗೆ ಸೇರಿಸಲಾಗಿದೆ ಎಂದರು.

ಈ ವೇಳೆ ಸ್ಪರ್ಧೆ ಬಗ್ಗೆ ಮಾಹಿತಿ ನೀಡಿದ ಕರ್ನಾಟಕ ರಾಜ್ಯ ಕಯಾಕಿಂಗ್ ಅಸೋಸಿಯೇಷನ್‌ನ ಕಾರ್ಯದರ್ಶಿ ಕ್ಯಾಪ್ಟನ್ ದಿಲೀಪ್ ಕುಮಾರ್ ಅವರು, 11ನೇ ರಾಷ್ಟ್ರೀಯ ಡ್ರ್ಯಾಗನ್ ಬೋಟ್ ಸ್ಪರ್ಧೆಗಳು ಒಟ್ಟು 18 ವಿಭಾಗಗಳಲ್ಲಿ ನಡೆಯಲಿವೆ. ಪುರುಷ, ಮಹಿಳೆಯರ ಹಾಗೂ ಮಿಕ್ಸೆಡ್ ವಿಭಾಗಗಳಲ್ಲದೇ ಜೂನಿಯರ್ ಬಾಲಕ, ಬಾಲಕಿಯರು, 18 ವರ್ಷದೊಳಗಿ ನವರ ವಿಭಾಗ ಗಳಲ್ಲಿ ವಿವಿಧ ಸ್ಪರ್ಧೆಗಳು ನಡೆಯಲಿವೆ ಎಂದು  ವಿವರಿಸಿದರು.

ಹಾಗೂ ಈ ಬಾರಿ ಕರ್ನಾಟಕ, ಕೇರಳ, ತಮಿಳುನಾಡು ಪಾಂಡಿಚೇರಿ, ಆಂಧ್ರಪ್ರದೇಶ, ಮಧ್ಯಪ್ರದೇಶ, ದಿಲ್ಲಿ, ಹಿಮಾಚಲ ಪ್ರದೇಶ, ಹರ್ಯಾಣ, ಪಂಜಾಬ್, ಮಹಾರಾಷ್ಟ್ರ, ರಾಜಸ್ತಾನ್, ಮಣಿಪುರಗಳ ತಂಡಗಳ ಒಟ್ಟು 635 ಮಂದಿ ಕ್ರೀಡಾಪಟುಗಳು ಹಾಗೂ 25ಕ್ಕೂ ಅಧಿಕ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಹಾಗೂ  ಸ್ಪರ್ಧೆಗಳು 200ಮೀ, 500ಮೀ. ಹಾಗೂ 2 ಕಿ.ಮೀ. ವಿಭಾಗಗಳಲ್ಲಿ ನಡೆಯಲಿವೆ. ಕಳೆದ ನಾಲ್ಕು ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಲ್ಲಿ ಕರ್ನಾಟಕ ಪುರುಷರ ತಂಡ ಚಾಂಪಿಯನ್ ಆಗಿದೆ. ಉಡುಪಿಯಲ್ಲಿ ನಡೆಯುವ ಸ್ಪರ್ಧೆಯಲ್ಲೂ ಕರ್ನಾಟಕವೇ ಮೇಲುಗೈ ಪಡೆಯುವ ಸಾಧ್ಯತೆ ಇದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಟೂರ್ನಿಯ ಸ್ವಾಗತ ಸಮಿತಿಯ ಅಧ್ಯಕ್ಷರಾದ ಬಿರ್ತಿ ರಾಜೀವ ಶೆಟ್ಟಿ, ಜಿಲ್ಲಾ ಕ್ರೀಡಾಧಿಕಾರಿ ಡಾ.ರೋಷನ್ ಕುಮಾರ್ ಶೆಟ್ಟಿ ಹಾಗೂ ಮಹೇಶ್ ಠಾಕೂರ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!