ವಿಧಾನ ಸಭಾ ಚುನಾವಣೆ: ಕೆಜೆಪಿಯಿಂದ 224 ಕ್ಷೇತ್ರದಲ್ಲಿ ಸ್ಪರ್ಧೆ

ಉಡುಪಿ ಫೆ.21 (ಉಡುಪಿ ಟೈಮ್ಸ್ ವರದಿ) : ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಕರ್ನಾಟಕ ಜನತಾ ಪಕ್ಷದಿಂದ 224 ವಿಧಾನಸಭೆ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಕಣಕ್ಕಿಳಿಸಲು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ಕೆಜೆಪಿಯ ರಾಜ್ಯಾಧ್ಯಕ್ಷ ಪದ್ಮನಾಭ ಪ್ರಸನ್ನ ಕುಮಾರ್ ಅವರು ಹೇಳಿದ್ದಾರೆ.

ಈ ಬಗ್ಗೆ ಇಂದು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, “ರಾಜ್ಯದ ಜನರ ಕಲ್ಯಾಣಕ್ಕಾಗಿ ಕರ್ನಾಟಕ ಜನತಾ ಪಕ್ಷ ಸಕ್ರಿಯವಾಗಿ ಹೋರಾಟ ಮಾಡಿಕೊಂಡು ಬಂದಿದೆ. ಇನ್ನೆರಡು ತಿ0ಗಳಲ್ಲಿ ಕರ್ನಾಟಕ ವಿಧಾನಸಭೆಯ ಸಾರ್ವತ್ರಿಕ ಚುನಾವಣೆ ಘೋಷಣೆಯಾಗಲಿದೆ, ಈ ಬಾರಿಯ ಚುನಾವಣೆಯಲ್ಲಿ ಕರ್ನಾಟಕ ಜನತಾ ಪಕ್ಷದಿಂದ 224 ವಿಧಾನಸಭೆ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಕಣಕ್ಕಿಳಿಸಲು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದರು.

ರಾಜ್ಯದ ಜನ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ದುರಾಡಳಿತದಿಂದ ಬೇಸತ್ತು ಹೋಗಿದ್ದಾರೆ. ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಕರ್ನಾಟಕ ಜನತಾ ಪಕ್ಷ ಸಂಕಲ್ಪ ಮಾಡಿದೆ. ರಾಜ್ಯ ರಾಜಕೀಯದಲ್ಲಿ ಅರಾಜಕತೆ ತಾಂಡವಾಡುತ್ತಿದೆ. ಇಂತಹ ಒಂದು ಅರಾಜಕೀಯ ಕಿತ್ತು ಹಾಕಿ ಹಾಗೂ ನ್ಯಾಯಸಮ್ಮತ ಆಡಳಿತಕ್ಕಾಗಿ ಕರ್ನಾಟಕದಲ್ಲಿ ನಮ್ಮದೇ ಆದ ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ಬರಬೇಕಾಗಿದೆ. ರಾಜ್ಯದ ಜನ ಜಾಗೃತರಾಗಿದ್ದಾರೆ. ಕರ್ನಾಟಕ ಜನತಾ ಪಕ್ಷದ ಮೇಲೆ ರಾಜ್ಯದ ಜನರಿಗೆ ಸಂಪೂರ್ಣ ವಿಶ್ವಾಸವಿದೆ. ಅದರಿಂದ ಜನಾಶಯದಂತೆ ಕರ್ನಾಟಕ ಜನತಾ ಪಕ್ಷದಿಂದ ಅಭ್ಯರ್ಥಿಗಳು ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತಾರೆ ಎಂದು ತಿಳಿಸಿದರು.

ಕೆಲವೇ ದಿನಗಳಲ್ಲಿ ಪಕ್ಷದಿಂದ ವಿಶೇಷ ಪ್ರಣಾಳಿಕೆ ಬಿಡುಗಡೆ ಮಾಡಲಾಗುವುದು. ಜನರ ನಿರೀಕ್ಷೆಗೂ ಮೀರಿದ ಸರ್ವರೂ ಮೆಚ್ಚುವಂತಹ ಪ್ರಣಾಳಿಕೆ ಪಕ್ಷದಿಂದ ಪ್ರಕಟಿಸಲಾಗುವುದು. ಸ್ವತಂತ್ರ ಭಾರತದ ಸಂವಿಧಾನದ ಆಶಯವು ಪ್ರಜೆಗಳೆ ಪ್ರಭುಗಳು, ಮಾಲೀಕರು ಎಂದು ಆದರೆ ಕಳೆದ ಎರಡು ದಶಕದಿಂದ ಪ್ರಜಾ ಮತಗಳ ಮೂಲಕ ಅಡಳಿತ ಚುಕ್ಕಾಣಿ ಹಿಡಿಯುತ್ತಿರುವ ಬಹುತೇಕರು ಲೂಟಿಕೋರರು, ಕ್ರಿಮಿನಲ್ ಹಿನ್ನೆಲೆ ಉಳ್ಳವರು. ಇಂತವರಿಗೆ ಬಿಜೆಪಿ, ಕಾಂಗ್ರೆಸ್ ನಲ್ಲಿ ಬಹುತೇಕ ಮನ್ನಣೆ ನೀಡಿದ್ದು ಆ ರೀತಿಯ ಹಿನ್ನಲೆ ಉಳ್ಳವರು ಆಡಳಿತ ಮತ್ತು ರಾಜ್ಯಭಾರದಲ್ಲಿ ಹೆಚ್ಚಿದ್ದಾರೆ. ರಾಷ್ಟ್ರೀಯ ಪಕ್ಷಗಳು ಅಧಿಕಾರದಲ್ಲಿ ಇದ್ದರೂ ಕರುನಾಡಿಗೆ ನ್ಯಾಯ ಕೊಡಿಸುವಲ್ಲಿ ವಿಫಲರಾಗಿದ್ದಾರೆ. ರಾಷ್ಟ್ರೀಯ ಪಕ್ಷಗಳ ಹೈ ಕಮಾಂಡ್ ಇರುವುದು ದೆಹಲಿಯಲ್ಲಿ ಇಲ್ಲಿಯ ಅಧಿಕಾರ ಚುಕ್ಕಾಣಿ ಹಿಡಿದಿರುವ ರಾಷ್ಟ್ರೀಯ ಪಕ್ಷಗಳ ಸಿಎಂ, ದೆಹಲಿಗೆ ಹೋಗಿ ಅಲ್ಲಿ ಹೈ ಕಮಾಂಡ್ ಬಾಗಿಲನ್ನು ಕಾಯುಬೇಕು, ಅವರ ಮುಂದೆ ಕೈ ಕಟ್ಟಿ ನಿಲ್ಲಬೇಕು, ಪಕ್ಕದ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಬಲವಾಗಿರುವುದರಿಂದ ಯಾವುದೇ ಕೇಂದ್ರ ಸರ್ಕಾರಗಳು ಬಂದರು, ಅಲ್ಲಿನ ಸರ್ಕಾರಗಳ ಮುಂದೆ ಮಂಡಿಯೂರಲೇಬೇಕು ಹಾಗಾಗಿ ಯಾವಾಗಲು ಆ ರಾಜ್ಯಗಳು ಎಲ್ಲಾ ಅನುದಾನಗಳಲ್ಲಿ, ಸಿಂಹ ಪಾಲನ್ನು ತೆಗೆದುಕೊಳ್ಳುತ್ತವೆ. ಆದ್ರೆ, ನಾವು ಕನ್ನಡಿಗರು ಎಲ್ಲವನ್ನು ಕೇಳಿಯೇ ಹೋರಾಡಿಯೇ ಪಡೆದುಕೊಳ್ಳಬೇಕು ಎಂದರು.

ವಂದೇ ಭಾರತ್ ರೈಲಿನಲ್ಲಿ ಕನ್ನಡಕ್ಕೆ ಆಸ್ಪದ ನೀಡಿಲ್ಲ. ಸರೋಜಿನಿ ಮಹಿಷಿ ವರದಿಯನ್ನು ಯಾವುದೇ ಪಕ್ಷಗಳು ಅವರ ಪ್ರಣಾಳಿಕೆಯಲ್ಲಿ ಆದ್ಯತೆಯನ್ನು ನೀಡಿಲ್ಲ. ಕನ್ನಡಿಗರಿಗಾಗಿ ಕನ್ನಡದವರಿಂದ, ಕನ್ನಡಿಗರ ಶ್ರೇಯಸ್ಸಿಗಾಗಿ ಮಾಡಿರುವ ವರದಿಯನ್ನು ಯಾಕೆ ಯಾವುದೇ ರಾಷ್ಟ್ರೀಯ ಪಕ್ಷಗಳು ಅನುಷ್ಠಾನಕ್ಕೆ ತಂದಿಲ್ಲ. ಕರ್ನಾಟಕವು ರಾಷ್ಟ್ರೀಯ ಪಕ್ಷಗಳಿಗೆ ವೋಟ್ ಬ್ಯಾಂಕ ಆಗಿದೆ ಹೊರತು ಇನ್ನೆನು ಇಲ್ಲ. ಜನಪರ ಎಂದು ಹೇಳಿಕೊಳ್ಳುವ ಯಾವುದೇ ರಾಷ್ಟ್ರೀಯ ಪಕ್ಷಗಳು ತಾವುಗಳು ಅಧಿಕಾರಕ್ಕೆ ಬಂದ 100 ದಿನಗಳಲ್ಲಿ ಸರೋಜಿನಿ ಮಹಿಷಿ ವರದಿಯನ್ನು ಅನುಷ್ಠಾನಕ್ಕೆ ತರುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಆದ್ಯತೆಯ ಘೋಷಣೆ ಮಾಡಿ ಅದನ್ನು ಅನುಷ್ಠಾನಕ್ಕೆ ತರುವ ಬದ್ಧತೆಯನ್ನು ತೋರುವ ಧೈರ್ಯ ತೋರುತ್ತವೆಯೇ ಇದನ್ನು ಮಾಡದೆ ಬಡವರ, ರೈತರ, ಮಹಿಳೆಯರ, ಯುವಕರ, ಕೂಲಿ ಕಾರ್ಮಿಕರನ್ನು ಸದೃಢರನ್ನಾಗಿ ಮಾಡುವುದಾಗಿ ಹೇಳಿ ಅವರು ಬೆವರು ಸುರಿಸಿ ದುಡಿದ ಹಣವನ್ನು ಕೊಳ್ಳೆ ಹೊಡೆದುಕೊಂಡು ಐಶಾರಾಮಿ ಜೀವನ ಮಾಡಿದ್ದಾರೆ. ಕನ್ನಡಿಗರು ಇನ್ನು ಬಡವರಾಗಿದ್ದಾರೆ. ಕರ್ನಾಟಕ ಮತ್ತಷ್ಟು ಬಡವಾಗಿದೆ. ದೇಶಕ್ಕೆ ಅತಿ ಹೆಚ್ಚು ಜಿ.ಎಸ್.ಟಿ ಕಟ್ಟುವ ರಾಜ್ಯಗಳಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಆದರೆ ಅನುದಾನಗಳ ಪಟ್ಟಿಯಲ್ಲಿ ಯಾವ ಸ್ನಾನದಲ್ಲಿದೆ ನೀವೆ ಯೋಚಿಸಿ ನೋಡಿ. ದೇಶಕ್ಕೆ, ಅನ್ನ ಹಾಕುವ ರೈತರನ್ನು ಸರ್ವನಾಶ ಮಾಡಿದ್ದಾರೆ. ಕೇಂದ್ರ ಸರ್ಕಾರವು ರೈತರಿಗಾಗಿ ತಂದ ಪಿ.ಎಂ ಕುಸುಮ ಸೋಲಾರ ಯೋಜನೆ ಬೇರೆ ಎಲ್ಲಾ ರಾಜ್ಯಗಳಲ್ಲಿ ಯಶಸ್ವಿಯಾಗಿದೆ. ಕರುನಾಡಿನಲ್ಲಿ ಈ ಯೊಜನೆಯ ಲಾಭ ಎಷ್ಟು ಸಾವಿರ ರೈತರಿಗೆ ಸಿಕ್ಕಿದೆ ಎಂದು ರಾಜ್ಯ ಸರ್ಕಾರವು ಶ್ವೇತ ಪತ್ರ ಹೊರಡಿಸಬಲ್ಲದೆ ಎಂದು ಪ್ರಶ್ನಿಸಿದ್ದಾರೆ. ಹಾಗೂ ಈ ಕಾರಣಗಳಿಗೆ ರಾಜ್ಯದ ಜನತೆಯು ರಾಜ್ಯದ ಅಭಿವೃದ್ಧಿಗಳಿಗೆ ಕರ್ನಾಟಕ ಜನತಾ ಪಕ್ಷವನ್ನು ಬೆಂಬಲಿಸಿ ಸುವರ್ಣ ನಾಡನ್ನು ಕಟ್ಟಲು ಕೈ ಜೋಡಿಸಬೇಕು. ಆಯಾ ರಾಜ್ಯಗಳ ಅಧಿಕಾರ ಆಯಾ ರಾಜ್ಯಗಳ ಹಿತಾಸಕ್ತಿ ಉಳ್ಳವರೇ ಅಧಿಕಾರ ಹಿಡಿಯಬೇಕು ಆವಾಗಲೇ ಆಯಾ ರಾಜ್ಯಗಳು ಕಲ್ಯಾಣ ರಾಜ್ಯವಾಗುವುದು ಎಂದು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಹಿಳಾ ಘಟನಕದ ಅಧ್ಯಕ್ಷೆ ನಿರ್ಮಲಾ ರಾಜ್ ಕುಮಾರ್, ಉಡುಪಿ ಸಂಚಾಲಕ ದೊರೆಸ್ವಾಮಿ, ಪುಟ್ಟ ಸ್ವಾಮಿ, ಗಣಪತಿ ಭಟ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!