ಕಾರ್ಕಳದ ಆತ್ರೇಯೀ ಕೃಷ್ಣಾ ಕೆ. ಅವರಿಗೆ `ರಾಗಧನ ಪಲ್ಲವಿ ಪ್ರಶಸ್ತಿ’ ಗೌರವ

ಉಡುಪಿ ಫೆ.2 (ಉಡುಪಿ ಟೈಮ್ಸ್ ವರದಿ) : ಉಡುಪಿಯ ಪ್ರತಿಷ್ಠಿತ ಸಂಗೀತ ಸಂಸ್ಥೆ ರಾಗಧನ ಕೊಡಮಾಡುವ `ರಾಗಧನ ಪಲ್ಲವಿ ಪ್ರಶಸ್ತಿ’ಗೆ ಈ ಬಾರಿ ಮಣಿಪಾಲದ ಮಾಹೆಯ ಎಂ.ಎಸ್ಸಿ ವಿದ್ಯಾರ್ಥಿನಿ ಕಾರ್ಕಳದ ಆತ್ರೇಯೀ ಕೃಷ್ಣಾ, ಕೆ. ಅವರು ಭಾಜನರಾಗಿದ್ದಾರೆ.

ಫೆ.4 ರಂದು ಸಂಜೆ 5 ಗಂಟೆಗೆ ಮಣಿಪಾಲದ ಅಲೆವೂರು ರಸ್ತೆಯಲ್ಲಿರುವ ಮಣಿಪಾಲ ಡಾಟ್‍ನೆಟ್ ಸಭಾಂಗಣದಲ್ಲಿ ರಾಗಧನ ಸಂಸ್ಥೆಯ ಎರಡು ದಿನಗಳ ಕಾಲ ನಡೆಯುವ 35ನೇ ಶ್ರೀ ಪುರಂದರದಾಸ ಹಾಗೂ ಸಂಗೀತ ತ್ರಿಮೂರ್ತಿ ಉತ್ಸವದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮ ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಪುತ್ತೂರಿನ ಕಲೋಪಾಸನಾ ಸಂಸ್ಥೆಯ ಮುಖ್ಯಸ್ಥ ಡಾ. ಹರಿಕೃಷ್ಣ ಪಾಣಾಜೆ ಮುಖ್ಯ ಅತಿಥಿಗಳಾಗಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಸಮಾರಂಭದ ಅಧ್ಯಕ್ಷತೆಯನ್ನು ರಾಗಧನ ಸಂಸ್ಥೆಯ ಅಧ್ಯಕ್ಷರಾದ ಡಾ. ಶ್ರೀ ಕಿರಣ್ ಹೆಬ್ಬಾರ್ ವಹಿಸಲಿದ್ದು, ಈ ಸಂದರ್ಭದಲ್ಲಿ ಮಣಿಪಾಲದ ಕಲಾಪೋಷಕರಾದ ಗಿರಿಜಮ್ಮ ಅವರು ಭಾಗವಹಿಸಲಿದ್ದಾರೆ. ಹಾಗೂ ಈ ಕಾರ್ಯಕ್ರಮದಲ್ಲಿ ಸಂಜೆ 6 ಗಂಟೆಯಿಂದ ಆತ್ರೇಯೀ ಕೃಷ್ಣಾ ಮತ್ತು ಬಳಗದವರಿಂದ ಸಂಗೀತ ಕಚೇರಿ ನಡೆಯಲಿದೆ.

ಉಡುಪಿಯ ಪ್ರತಿಷ್ಠಿತ ಸಂಗೀತ ಸಂಸ್ಥೆ ರಾಗಧನ ಕೊಡಮಾಡುವ ನಾಡಿನ ಹೆಸರಾಂತ ಸಂಶೋಧಕಿ ಡಾ. ಸುಶೀಲಾ ಉಪಾಧ್ಯಾಯ ಸ್ಮರಣಾರ್ಥ ಅವರ ಪತಿ ಭಾಷಾತಜ್ಞ ದಿ.ಡಾ.ಯು.ಪಿ. ಉಪಾಧ್ಯಾಯ ಅವರು ಪ್ರಾಯೋಜಿಸಿರುವ ಪ್ರತಿಷ್ಠಿತ ಪ್ರಶಸ್ತಿ ಇದಾಗಿದ್ದು, ಈ ಪ್ರಶಸ್ತಿಯ ಆಯ್ಕೆ ಸಮಿತಿಯಲ್ಲಿ ಪ್ರೊ, ಅರವಿಂದ ಹೆಬ್ಬಾರ್, ವಿದುಷಿ ಸರೋಜ ಆಚಾರ್ಯ, ಡಾ.ಕಿರಣ್ ಹೆಬ್ಬಾರ್ ಹಾಗೂ ಸರಿಗಮಭಾರತಿಯ ವಿದುಷಿ ಉಮಾ ಉದಯಶಂಕರ್ ಅವರಿದ್ದರು.

Leave a Reply

Your email address will not be published. Required fields are marked *

error: Content is protected !!