ಮೈನವಿರೇಳಿಸುವ ಕೋಸ್ಟ್ ಗಾರ್ಡ್ ಅಣಕು ಕಾರ್ಯಾಚರಣೆ- ರಾಜ್ಯಪಾಲರಿಂದ ವೀಕ್ಷಣೆ

ಮಂಗಳೂರು, ಫೆ.2: ಭಾರತೀಯ ಕೋಸ್ಟ್ ಗಾರ್ಡ್ ನ ಸಪ್ತಾಹ ಕಾರ್ಯಕ್ರಮದ ಅಂಗವಾಗಿ ‘ಎ ಡೇ ಅಟ್ ಸೀ ‘ ಸಮುದ್ರದಲ್ಲಿ ಒಂದು ದಿನ’ ಎನ್ನುವ ಕಾರ್ಯಕ್ರಮದಲ್ಲಿ ಘನತೆವೆತ್ತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಕೋಸ್ಟ್ ಗಾರ್ಡ್‍ನ ‘ವರಾಹ’ ನೌಕೆಯಲ್ಲಿ ಕೋಸ್ಟ್ ಗಾರ್ಡ್ ಸಿಬ್ಬಂದಿಯ ಅಣಕು ಕಾರ್ಯಾಚರಣೆಯನ್ನು ವೀಕ್ಷಿಸಿದರು.

ಅರಬ್ಬೀಯ ಆಳ ಸಮುದ್ರದ ನಡುವೆ ಕೋಸ್ಟ್ ಗಾರ್ಡ್ ಸಿಬ್ಬಂದಿ ನಡೆಸಿದ ತರಹೇವಾರಿ ಕಾರ್ಯಾಚರಣೆಗಳು ಮೈನವಿರೇಳಿಸುವಂತಿದ್ದವು. ಅವುಗಳಿಗೆ ಇನ್ನೊಂದು ನೌಕೆಯಲ್ಲಿ ಆಹ್ವಾನಿತರಾಗಿದ್ದ ಸಾರ್ವಜನಿಕರು ಸಾಕ್ಷಿಯಾದರು.

ಸಮುದ್ರ ತಟದಿಂದ ಸುಮಾರು 15 ನಾಟಿಕಲ್ ಮೈಲು ಆಳ ಸಮುದ್ರದಲ್ಲಿ ತಟ ರಕ್ಷಣಾ ಪಡೆಯ ಒಟ್ಟು ಆರು ಅತ್ಯಾಧುನಿಕ ನೌಕೆಗಳು, ಎರಡು ಹೆಲಿಕಾಪ್ಟರ್‍ಗಳು, ಎರಡು ಡಾರ್ನಿಯರ್ ವಿಮಾನಗಳು ವಿವಿಧ ರೋಚಕ ಕಸರತ್ತುಗಳನ್ನು ಪ್ರದರ್ಶಿಸಿದವು. ಸಮುದ್ರದಲ್ಲಿ ನೌಕೆಗಳು ಅವಘಡಕ್ಕೆ ಈಡಾದರೆ ಅದರ ರಕ್ಷಣೆಯ ಕಾರ್ಯಾಚರಣೆ, ಸಂತ್ರಸ್ತರನ್ನು ರಕ್ಷಿಸುವುದು, ವೈರಿ ಪಡೆಗಳಿಂದ ದಾಳಿಯಾದರೆ ಸಮುದ್ರದ ನಡುವೆ ಕೋಸ್ಟ್ ಗಾರ್ಡ್ ನೌಕೆಗಳು ಮರು ದಾಳಿ ನಡೆಸುವ, ವೈರಿ ವಿಮಾನದ ಮೇಲೆ ದಾಳಿ ನಡೆಸುವ ಅಣಕು ಕಾರ್ಯಾಚರಣೆ ಅತ್ಯಂತ ರೋಚಕವಾಗಿತ್ತು.

ತುರ್ತು ಸಮಯದಲ್ಲಿ ಕೋಸ್ಟ್ ಗಾರ್ಡ್ ನೌಕೆಯಿಂದ ಸಣ್ಣ ಬೋಟ್‍ನ್ನು ಸಮುದ್ರಕ್ಕಿಳಿಸಿ, ಆ ಬೋಟ್‍ಗಳು ಸಮರೋಪಾದಿಯಲ್ಲಿ ಧಾವಿಸಿ ಸಂತ್ರಸ್ತರ ರಕ್ಷಣೆ ಮಾಡುವ ಕಸರತ್ತು ಉಸಿರು ಬಿಗಿಹಿಡಿಯುವಂತಿತ್ತು.

ಇದೇ ವೇಳೆ ಸಮುದ್ರದ ನಡುವೆ ಯಾವುದಾದರೂ ಬೋಟ್ ಅವಘಡಕ್ಕೀಡಾಗಿ ಅಗ್ನಿ ಅನಾಹುತ ಸಂಭವಿಸಿದರೆ ಕೋಸ್ಟ್ ಗಾರ್ಡ್ ನೌಕೆಯಿಂದ ಅಗ್ನಿ ನಂದಿಸುವ ಕಾರ್ಯಾಚರಣೆ ಪ್ರದರ್ಶಿಸಲಾಯಿತು.

ಡಾರ್ನಿಯರ್ ವಿಮಾನಗಳು ಹಾಗೂ ಎರಡು ಹೆಲಿಕಾಪ್ಟರ್‍ಗಳ ಗಸ್ತು ಕಾರ್ಯಾಚರಣೆಯೂ ನಡೆಯಿತು. ಕರ್ನಾಟಕ ಕೋಸ್ಟ್ ಗಾರ್ಡ್ ಕಮಾಂಡರ್ ಪ್ರವೀಣ್ ಕುಮಾರ್ ಮಿಶ್ರಾ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು. ಕೋಸ್‍ಟ್‍ಗಾರ್ಡ್‍ನ ಹಿರಿಯ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!