ಟ್ವೀಟರ್ ನಲ್ಲಿ ದೂರು: ಉದ್ಯೋಗಿಯನ್ನು ಸುಲಿಗೆ ಮಾಡಿದ್ದ ಕಾನ್ಸ್ಟೇಬಲ್ ಗಳು ಅಮಾನತು
ಬೆಂಗಳೂರು ಜ.16 : ಖಾಸಗಿ ಕಂಪೆನಿ ಉದ್ಯೋಗಿ ವೈಭವ್ ಪಟೇಲ್ ಅವರನ್ನು ಅಡ್ಡಕಟ್ಟಿ ಗಾಂಜಾ ಸೇವನೆ ಪ್ರಕರಣ ದಾಖಲಿಸುವ ಬೆದರಿಕೆಯೊಡ್ಡಿ 2,500 ರೂ. ಸುಲಿಗೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಕಾನ್‍ಸ್ಟೇಬಲ್‍ಗಳಾದ ಮಲ್ಲೇಶ್ ಹಾಗೂ ಕೀರ್ತಿ ಕುಮಾರ್ ರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ಜ.11 ರಂದು ತಡರಾತ್ರಿ ಈ ಘಟನೆ ನಡೆದಿದೆ. ಈ ಬಗ್ಗೆ ವೈಭವ್ ಪಟೇಲ್ ಅವರು ಟ್ವಿಟ್ ಮೂಲಕ ಪೊಲೀಸ್ ಕಮಿಷನರ್ ಅವರಿಗೆ ದೂರು ನೀಡಿದ್ದರು. ಬಳಿಕ ವೈಭವ್ ಅವರನ್ನು ಸಂಪರ್ಕಿಸಿದ್ದ ಆಗ್ನೆಯ ವಿಭಾಗದ ಡಿಸಿಪಿ ಸಿ.ಕೆ.ಬಾಬಾ ಅವರು ಘಟನೆಯ ಲಿಖಿತ ದೂರು ಪಡೆದು ತನಿಖೆ ನಡೆಸಿದ್ದರು.
ಇಬ್ಬರು ಕಾನ್‍ಸ್ಟೆಬಲ್‍ಗಳು ಹಣ ಸುಲಿಗೆ ಮಾಡಿದ್ದು ಪ್ರಾಥಮಿಕ ತನಿಖೆಯಿಂದ ಸಾಬೀತಾದ ಹಿನ್ನೆಲೆಯಲ್ಲಿ ಇಬ್ಬರನ್ನೂ ಅಮಾನತು ಮಾಡಿ ಡಿಸಿಪಿ ಸಿ.ಕೆ.ಬಾಬಾ ಆದೇಶ ಹೊರಡಿಸಿದ್ದಾರೆ.
ಜ.11 ರಂದು ತಡರಾತ್ರಿ ಕೆಲಸ ಮುಗಿಸಿ ರಾಪಿಡೊ ಬೈಕ್‍ನಲ್ಲಿ ಮನೆಯತ್ತ ಹೊರಟಿದ್ದ ವೈಭವ್ ಪಟೇಲ್ ಅವರನ್ನು ಎಚ್.ಎಸ್.ಆರ್ ಲೇಔಟ್‍ನ ಆಯ್ಯಪ್ಪಸ್ವಾಮಿ ದೇವಸ್ಥಾನದ ಬಳಿ ಗಸ್ತಿನಲ್ಲಿದ್ದ ಇಬ್ಬರು ಪೊಲೀಸರು (ಬಂಡೇಪಾಳ್ಯ ಠಾಣೆ) ತಡೆದಿದ್ದಾರೆ. ಎಲ್ಲಿಗೆ ಹೊರಟಿದ್ದೀರಾ ಎಂದು ಪ್ರಶ್ನಿಸಿ ಬ್ಯಾಗ್ ಪರಿಶೀಲಿಸಿದ್ದರು. ಇದೇ ವೇಳೆ ಗಮನಕ್ಕೆ ಬಾರದಂತೆ ಬ್ಯಾಗ್‍ನಲ್ಲಿ ಯಾವುದೋ ಸೊಪ್ಪು ಇರಿಸಿದ್ದರು’. ಬಳಿಕ ಬ್ಯಾಗ್‍ನಿಂದ ಸೊಪ್ಪು ಹೊರಗೆ ತೆಗೆದಂತೆ ನಟಿಸಿದ್ದ ಪೊಲೀಸರು, ಗಾಂಜಾ ಸೇವನೆ ಮಾಡುತ್ತೀಯಾ? ಎಂದು ಬೆದರಿಸಿದ್ದರು. ಆಗ ವೈಭವ್ ಅವರು ಗಾಂಜಾ ಸೇವಿಸುವುದಿಲ್ಲ ಎಂದು ಬೇಡಿಕೊಂಡಿದ್ದರು. ಈ ವೇಳೆ ಬೈಕ್ ಸವಾರನಿಗೆ ವೈಭವ್ ಅವರಿಂದ 100 ರೂ. ಕೊಡಿಸಿ ಬೈಕ್ ಸವಾರನನ್ನು ಸ್ಥಳದಿಂದ ಕಳುಹಿಸಿದ್ದರು. ಆದರೆ ವೈಭವ್ ಅವರನ್ನು ಹಿಡಿದುಕೊಂಡಿದ್ದ ಪೊಲೀಸರು,
ನಿನ್ನನ್ನು ಪೊಲೀಸ್ ಠಾಣೆಗೆ ಕರೆದೊಯ್ದು ಜೈಲಿಗೆ ಹಾಕಿದರೆ, ನಮಗೆ ತಲಾ 15 ಸಾವಿರ ಬಹುಮಾನ ಬರಲಿದೆ’ ಎಂದಿದ್ದರು. ಈ ವೇಳೆ ಅವರು ಗಾಂಜಾ ಸೇವಿಸಿಲ್ಲವೆಂದರೂ ತಪ್ಪೊಪ್ಪಿಕೊಳ್ಳುವಂತೆ ಪೀಡಿಸಿದರು ಎಂದು ಆರೋಪಿಸಿದ್ದಾರೆ.
ಹಾಗೂ `ಸುಲಿಗೆ ಮಾಡುವುದೇ ಪೊಲೀಸರ ಉದ್ದೇಶವಾಗಿತ್ತು. ಹೀಗಾಗಿಯೇ ಅವರು ಪ್ರಕರಣ ದಾಖಲಿಸುವ ಬೆದರಿಕೆಯೊಡ್ಡುತ್ತಿದ್ದರು. ನನ್ನನ್ನು ಬಿಡಲು ಏನು ಮಾಡಬೇಕೆಂದು ಕೇಳಿದ್ದೆ. ಆಗ ಅವರು, ಜೇಬಿನಲ್ಲಿದ್ದ ಪರ್ಸ್ ತಗೆದುಕೊಂಡು 2,500 ಕಿತ್ತುಕೊಂಡರು, ಎಟಿಎಂ ಘಟಕಕ್ಕೆ ಹೋಗಿ ಪುನ: 4 ಸಾವಿರ ತರುವಂತೆ ಹೇಳಿದರು. ಖಾತೆಯಲ್ಲಿ ಹಣವಿಲ್ಲವೆಂದು ಹೇಳಿ ಗೋಗರೆದ ಬಳಿಕವೇ ಬಿಟ್ಟು ಕಳುಹಿಸಿದರು’ ಎಂದೂ ಅವರು ಟ್ವಿಟ್‍ನಲ್ಲಿ ದೂರಿದ್ದರು.