ಸಿವಿಲ್ ಕೇಸಿನಲ್ಲಿ ಮಧ್ಯಪ್ರವೇಶಿಸುವ ಪೊಲೀಸರ ವಿರುದ್ಧ ತನಿಖೆಗೆ ಆದೇಶ: ಹೈಕೋರ್ಟ್ ಎಚ್ಚರಿಕೆ

ಬೆಂಗಳೂರು ಜ.16 : ಸಿವಿಲ್ ವ್ಯಾಜ್ಯಗಳಲ್ಲಿ ಪೊಲೀಸರು ಮಧ್ಯಪ್ರವೇಶಿಸುವುದು ಸಹಿಸುವಂತದ್ದಲ್ಲ. ಇಂತಹ ನಡವಳಿಕೆಯನ್ನು ಮುಂದುವರೆಸಿದರೆ ಆರೋಪಿತ ಪೊಲೀಸರ ವಿರುದ್ಧ ತನಿಖೆಗೆ ಆದೇಶಿಸಬೇಕಾಗುತ್ತದೆ ಎಂದು ಹೈಕೋರ್ಟ್ ಕಟು ಎಚ್ಚರಿಕೆ ನೀಡಿದೆ.

ಕೋರಿ ಪೊಲೀಸರಿಂದ ಹಲ್ಲೆಗೊಳಗಾಗಿರುವ ವಕೀಲ ಕುಲದೀಪ್ ಶೆಟ್ಟಿ ಅವರು ತಮ್ಮ ಮೇಲೆ ಹಲ್ಲೆ ನಡೆಸಿದ ಪೊಲೀಸರ ವಿರುದ್ಧ ತನಿಖೆ ನಡೆಸಿ ಕಠಿಣ ಕ್ರಮ ಜರುಗಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಹಾಗೂ ಹಲ್ಲೆಗೊಳಗಾಗಿರುವ ತನಗೆ ಪರಿಹಾರ ಕೊಡಿಸಬೇಕು ಎಂದು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಪೀಠ ಸಿವಿಲ್ ವ್ಯಾಜ್ಯಗಳಲ್ಲಿ ಪೊಲೀಸರ ಮಧ್ಯಪ್ರವೇಶಿಸುವಿಕೆ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ ಹಾಗೂ ಪ್ರಕರಣದ ತೀರ್ಪು ಕಾಯ್ದಿರಿಸಿದೆ.

ಮನೆ ಮುಂಭಾಗದ ಗೇಟ್ ವಿಚಾರಕ್ಕೆ ಸಂಬಂಧಿಸಿದಂತೆ ಅರ್ಜಿದಾರ ವಕೀಲ ಕುಲದೀಪ್ ಶೆಟ್ಟಿ ಹಾಗೂ ಮತ್ತೋರ್ವ ವ್ಯಕ್ತಿ ನಡುವೆ ಜಗಳವಿತ್ತು. ದೂರುದಾರ ವ್ಯಕ್ತಿ ಪ್ರಭಾವಿ ಎಂಬ ಕಾರಣಕ್ಕೆ ಪೊಲೀಸರು ಹೀಗೆ ನಡೆದುಕೊಳ್ಳಬಹುದೇ. ಎಫ್‍ಐಆರ್ ದಾಖಲಿಸುವ ಮುನ್ನವೇ ವಕೀಲ ಕುಲದೀಪ್ ಅವರನ್ನು ಎಳೆದೊಯ್ದು ಬಡಿದಿದ್ದೀರಿ. ಪೊಲೀಸರ ಹಲ್ಲೆ ಬಳಿಕ ಅವರ ವಿರುದ್ಧ ಕ್ರಮ ಕೋರಿ ವಕೀಲ ಕುಲದೀಪ್ ನೀಡಿದ್ದ ದೂರಿನ ಮೇರೆಗೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಹೈಕೋರ್ಟ್ ಪ್ರಶ್ನಿಸಿದ ಬಳಿಕ ತಡವಾಗಿ ಆರೋಪಿತ ಪೊಲೀಸರ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ ಎಂದು ಹೈಕೋರ್ಟ್ ಪೊಲೀಸರ ನಡವಳಿಕೆಗೆ ಆಕ್ರೋಶ ವ್ಯಕ್ತಪಡಿಸಿದೆ.

ಅಲ್ಲದೇ, ಸಿಆರ್ಪಿಸಿ ಸೆಕ್ಷನ್ 41 ರ ಅಡಿ ಸಮನ್ಸ್ ನೀಡಿ ಹೇಳಿಕೆ ಪಡೆದು ತೃಪ್ತಿಕರ ಅಲ್ಲ ಎನ್ನಿಸಿದಾಗ ಮಾತ್ರ ಪೊಲೀಸರು ಬಂಧಿಸಬೇಕಿತ್ತು. ಆದರೆ ಈ ಪ್ರಕರಣದಲ್ಲಿ ಅರ್ಜಿದಾರ ವಕೀಲ ಕುಲದೀಪ್ ಅವರಿಗೆ ಪೊಲೀಸರು ನೋಟಿಸ್ ನೀಡಿಲ್ಲ. ಇನ್ನು ಅರ್ಜಿದಾರರ ವಿರುದ್ಧ ದಾಖಲಿಸಿರುವ ಐಪಿಸಿ ಸೆಕ್ಷನ್ 447 (ಅತಿಕ್ರಮ ಪ್ರವೇಶ) ಹಾಗೂ 379 (ಕಳ್ಳತನ) ಅಡಿ ತಲಾ 3 ತಿಂಗಳು ಮತ್ತು 3 ವರ್ಷದ ಗರಿಷ್ಠ ಶಿಕ್ಷೆ ವಿಧಿಸಬಹುದಷ್ಟೇ. ಗರಿಷ್ಠ 7 ವರ್ಷ ಶಿಕ್ಷೆಯಾಗಬಹುದಾದ ಪ್ರಕರಣದಲ್ಲಿ ಆರೋಪಿ ಬಂಧಿಸಬಹುದು. ಈ ನಿಟ್ಟಿನಲ್ಲಿ ನೋಡಿದಾಗ ಪೊಲೀಸರು ಕುಲದೀಪ್ ಶೆಟ್ಟಿ ಅವರ ಮೂಲಭೂತ ಹಕ್ಕುಗಳನ್ನು ಮತ್ತು ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಾರೆ ಎಂಬುದು ಸ್ಪಷ್ಟ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಹಾಗೂ ತಪ್ಪಿತಸ್ಥ ಪೊಲೀಸರು ಅರ್ಜಿದಾರರಿಗೆ ಪರಿಹಾರ ನೀಡಬೇಕು. ಪರಿಹಾರದ ಹಣವನ್ನು ಆರೋಪಿ ಪೆÇಲೀಸರಿಂದಲೇ ವಸೂಲಿ ಮಾಡಬೇಕು ಎಂದಿರುವ ಹೈಕೋರ್ಟ್ ಪರಿಹಾರಕ್ಕೆ ಸಂಬಂಧಿಸಿದ ಆದೇಶವನ್ನು ನಂತರ ಬರೆಸಲಾಗುವುದು ಎಂದು ಹೇಳಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ಸ್ಥಳೀಯ ವ್ಯಕ್ತಿಯೊಬ್ಬರು ವಕೀಲ ಕುಲದೀಪ್ ತಮ್ಮ ಮನೆಯ ಗೇಟ್ ಕದ್ದಿದ್ದಾರೆಂದು ಆರೋಪಿಸಿ ದೂರು ನೀಡಿದ್ದರು. ಈ ಮೇರೆಗೆ ಪಿಎಸ್‍ಐ ಸುತೇಶ್ ಕೆ.ಪಿ ಹಾಗೂ ಸಿಬ್ಬಂದಿ ಕುಲದೀಪ್ ಬಂಧಿಸಿ, ಅಮಾನವೀಯವಾಗಿ ಹಲ್ಲೆ ನಡೆಸಿದ್ದರು. ಕುಲದೀಪ್ ಮೇಲಿನ ಹಲ್ಲೆ ಖಂಡಿಸಿ ವಕೀಲ ಸಂಘಟನೆಗಳು ರಾಜ್ಯವ್ಯಾಪಿ ಪ್ರತಿಭಟನೆ ನಡೆಸಿದ್ದವು. ಕುಲದೀಪ್ ತನ್ನ ಮೇಲಿನ ಹಲ್ಲೆ ನಡೆಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೋರಿ ದೂರು ನೀಡಿದ್ದರು. ಅದನ್ನು ಪೊಲೀಸರು ಪರಿಗಣಿಸಿದೇ ಹೋಗಿದ್ದರಿಂದ ಪರಿಹಾರ ಕೋರಿ ಕುಲದೀಪ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.

Leave a Reply

Your email address will not be published. Required fields are marked *

error: Content is protected !!