ಸ್ಯಾಂಟ್ರೋ ರವಿ ಪ್ರಕರಣ ಸಿಐಡಿಗೆ- ಗೃಹ ಸಚಿವ ಆರಗ ಜ್ಞಾನೇಂದ್ರ

ಬೆಂಗಳೂರು: ಸ್ಯಾಂಟ್ರೋ ರವಿ ಪ್ರಕರಣದ ತನಿಖಾ ಜವಾಬ್ಜಾರಿಯನ್ನು ಸಿಐಡಿಗೆ ವಹಿಸಲಾಗಿದೆ ಎಂದು ಸೋಮವಾರ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಆರಗ ಜ್ಞಾನೇಂದ್ರ ಅವರು, ‘ವಂಚಕ ಎನ್ನಲಾದ ಸ್ಯಾಂಟ್ರೋ ರವಿ ವಿರುದ್ಧದ ದೂರುಗಳ ತನಿಖೆಗೆ ರಾಜ್ಯ ಸರ್ಕಾರ ಸಿಐಡಿಗೆ ಆದೇಶಿಸಿದೆ ಎಂದು ಹೇಳಿದ್ದಾರೆ.

ಮೈಸೂರಿನ ವಿಜಯನಗರ ಠಾಣೆಯಲ್ಲಿ ದಾಖಲಾಗಿದ್ದ ಮೂರು ಪ್ರಕರಣ, ಕಾಟನ್ ಪೇಟೆ ಠಾಣೆಯಲ್ಲಿ ದಾಖಲಾಗಿದ್ದ ಫೇಕ್ ಕೇಸ್, ರವಿ ಪತ್ನಿ ದಾಖಲಿಸಿದ್ದ ಪ್ರಕರಣ, ವರ್ಗಾವಣೆ ಮತ್ತು ವೇಶ್ಯಾವಾಟಿಕೆ ದಂಧೆ ಪ್ರಕರಣಳೂ ಸೇರಿದಂತೆ ಸ್ಯಾಂಟ್ರೋ ರವಿ ವಿರುದ್ಧ ದಾಖಲಾಗಿದ್ದ ಎಲ್ಲ ಪ್ರಕರಣಗಳ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಸರ್ಕಾರಿ ವಕೀಲರ ಮನವಿ
ಇನ್ನು ಇದಕ್ಕೂ ಮೊದಲು ಮೈಸೂರು ಸತ್ರ ಮತ್ತು ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ವಿಚಾರಣೆ ವೇಳೆ ಕೋರ್ಟ್‌ನಲ್ಲಿ ಸರ್ಕಾರಿ ವಕೀಲರು ಪ್ರಕರಣವನ್ನು ಸಿಐಡಿಗೆ ವಹಿಸಲು ಮನವಿ ಮಾಡಿದರು. ಆಗ ಕೋರ್ಟ್ ಈ ವಿಚಾರದಲ್ಲಿ ಮಧ್ಯ ಪ್ರವೇಶ ಮಾಡುವುದಿಲ್ಲ. ಸಿಐಡಿಗೆ ವಹಿಸುವುದು ಸರ್ಕಾರದ ಕೆಲಸ, ಸೂಕ್ತ ದಾಖಲಾತಿಗಳ ಜೊತೆ ಅರ್ಜಿ ಸಲ್ಲಿಕೆ ಮಾಡಿ ಎಂದು ಸೂಚನೆ ನೀಡಿತು. ಈ ಬೆಳವಣಿಗೆ ಬೆನ್ನಲ್ಲೇ ಕರ್ನಾಟಕ ಗೃಹ ಸಚಿವಾಲಯ ಸ್ಯಾಂಟ್ರೋ ರವಿ ಪ್ರಕರಣದ ತನಿಖಾ ಜವಾಬ್ಜಾರಿಯನ್ನು ಸಿಐಡಿಗೆ ವಹಿಸಿ ಆದೇಶ ಹೊರಡಿಸಿದೆ.

ಜನವರಿ 25ರವರೆಗೆ ನ್ಯಾಯಾಂಗ ಬಂಧನ
ಗುಜರಾತ್‌ನಲ್ಲಿ ಬಂಧಿಸಲಾದ ಸ್ಯಾಂಟ್ರೊ ರವಿ ಮತ್ತು ಇತರನ್ನು ಶನಿವಾರ ರಾತ್ರಿ ವಾಲ್ಮೀಕಿ ರಸ್ತೆಯಲ್ಲಿರುವ ನ್ಯಾಯಾಧೀಶರ ನಿವಾಸಕ್ಕೆ ಪೊಲೀಸರು ಹಾಜರುಪಡಿಸಿದ್ದರು. ಆಗ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿದ್ದರು. ಇಂದು ಕೋರ್ಟ್‌ಗೆ ಪುನಃ ಎಲ್ಲಾ ಆರೋಪಿಗಳನ್ನು ಹಾಜರುಪಡಿಸಲಾಯಿತು. ಆದರೆ ಪೊಲೀಸರ ವಶಕ್ಕೆ ನೀಡಿದ ಕೋರ್ಟ್ ಜನವರಿ 25ರ ತನಕ ನ್ಯಾಯಾಂಗ ಬಂಧನಕ್ಕೆ ನೀಡಿತು. ಮೈಸೂರಿನ ವಿಜಯನಗರ ಠಾಣೆಯಲ್ಲಿ ತಮ್ಮ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆ ಸ್ಯಾಂಟ್ರೊ ರವಿ ಪರಾರಿಯಾಗಿದ್ದರು. 11 ದಿನಗಳ ಬಳಿಕ ಶುಕ್ರವಾರ ಗುಜರಾತ್‌ನಲ್ಲಿ ಸ್ಯಾಂಟ್ರೊ ರವಿ ಬಂಧಿಸಲಾಗಿತ್ತು. ಬಳಿಕ ಮೈಸೂರಿಗೆ ಕರೆತರಲಾಗಿತ್ತು.
 

Leave a Reply

Your email address will not be published. Required fields are marked *

error: Content is protected !!