ದೇಶದಲ್ಲಿ 2022ರಲ್ಲಿ 38 ಲಕ್ಷ ಕಾರು ಮಾರಾಟ

ಹೊಸದಿಲ್ಲಿ ಜ.3 : ಕಳೆದ ವರ್ಷಕ್ಕೆ ಹೋಲಿಸಿದರೆ 2022 ರಲ್ಲಿ ಒಟ್ಟು ಕಾರುಗಳ ಮಾರಾಟ ಶೇಕಡ 33ರಷ್ಟು ಹೆಚ್ಚಿದ್ದು, ಸುಮಾರು 38 ಲಕ್ಷ ಕಾರುಗಳು ಮಾರಾಟವಾಗಿದೆ ಎಂದು ವರದಿಯಾಗಿದೆ.

ದೇಶದಲ್ಲಿ 2022ರಲ್ಲಿ ಮಾರಾಟವಾದ ಕಾರುಗಳ ಹೆಚ್ಚಳವು ಇದು ವರೆಗಿನ ಸರ್ವಕಾಲಿಕ ದಾಖಲೆ ಇದಾಗಿದೆ. ಆದರೆ ಈ ವರ್ಷ ಕಾರು ಮಾರಾಟ ಏರಿಕೆ ಪ್ರಮಾಣ ಒಂದಂಕಿಗೆ ಇಳಿಯುವ ಸಾಧ್ಯತೆ ಇದೆ ಎಂದೂ ಅಂದಾಜಿಸಲಾಗಿದೆ.

ಕಾರು ಉತ್ಪಾದಕ ಕಂಪನಿಗಳು ಇದೀಗ ಹಣದುಬ್ಬರ ಹಾಗೂ ಬಡ್ಡಿದರ ಏರಿಕೆಯ ಪರಿಸ್ಥಿತಿಯನ್ನು ಎಚ್ಚರಿಕೆಯಿಂದ ನಿಭಾಯಿಸುತ್ತಿದ್ದು, 2022ರಲ್ಲಿ ದೇಶದಲ್ಲಿ ಪ್ರಿಮಿಯಂ ವಾಹನಗಳ ಅಂದರೆ 10 ಲಕ್ಷ ರೂಪಾಯಿಗಿಂತ ಅಧಿಕ ಮೌಲ್ಯದ ವಾಹನಗಳ ಮಾರಾಟ ಹೆಚ್ಚಿದೆ. ಕಳೆದ ವರ್ಷ ಮಾರಾಟವಾದ ಒಟ್ಟು ಕಾರುಗಳ ಪೈಕಿ ಪ್ರಿಮಿಯಂ ಕಾರುಗಳ ಪಾಲು ಶೇಕಡ 16ರಷ್ಟು ಇದ್ದರೆ, ಈ ವರ್ಷ ಈ ಪ್ರಮಾಣ ಶೇಕಡ 41ಕ್ಕೆ ಹೆಚ್ಚಿದೆ. 2019ರಲ್ಲಿ ವಾಹನ ಉದ್ಯಮ ಕುಂಠಿತಗೊಂಡಿದ್ದು, ಉತ್ಪಾದನಾ ವೆಚ್ಚ ಹೆಚ್ಚಳ ಹಾಗೂ ಸೆಮಿಕಂಡಕ್ಟರ್ ಗಳ ಕೊರತೆ ಇದಕ್ಕೆ ಪ್ರಮುಖ ಕಾರಣವಾಗಿತ್ತು.

ದೇಶದಲ್ಲಿ 2021ರಲ್ಲಿ 31 ಲಕ್ಷ ಕಾರುಗಳು ಮಾರಾಟವಾಗಿದ್ದರೆ, 2022ರಲ್ಲಿ ಈ ಸಂಖ್ಯೆ ಏಳು ಲಕ್ಷದಷ್ಟು ಹೆಚ್ಚಿದೆ. ಇದು 2018ರಲ್ಲಿ ದಾಖಲಾಗಿದ್ದ 34 ಲಕ್ಷ ಕಾರುಗಳ ಮಾರಾಟ ದಾಖಲೆಗಳನ್ನೂ ಅಳಿಸಿ ಹಾಕಿದೆ. ಟಾಟಾ ಮೋಟರ್ಸ್, ಹ್ಯೂಂಡೈ, ಟೊಯೋಟಾ ಮತ್ತು ಸ್ಕೋಡಾ ಇದುವರೆಗಿನ ಅತ್ಯುತ್ತಮ ಸಾಧನೆಯನ್ನು 2022ರಲ್ಲಿ ಪ್ರದರ್ಶಿಸಿವೆ. ಆದರೆ ಸೆಮಿಕಂಡಕ್ಟರ್ ಗಳ ಕೊರತೆಯಿಂದಾಗಿ ಉತ್ಪಾದನೆ ಕುಂಠಿತಗೊಂಡಿರುವ ಹಿನ್ನೆಲೆಯಲ್ಲಿ ಮಾರುತಿ ಮಾತ್ರ 2018ರ ಮಟ್ಟವನ್ನು ತಲುಪಲು ಸಾಧ್ಯವಾಗಿಲ್ಲ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!