ನೋಟು ಅಮಾನ್ಯೀಕರಣದ ಉದ್ದೇಶ ಸಾಧಿಸಲಾಗಿದೆಯೇ ಎಂಬುದಕ್ಕೆ ಬಹುಮತದ ತೀರ್ಪು ಉತ್ತರ ನೀಡಿದೆ- ಪಿ.ಚಿದಂಬರಂ

ಚೆನ್ನೈ: ₹500 ಹಾಗೂ ₹1,000 ಮುಖಬೆಲೆಯ ನೋಟುಗಳನ್ನು ಅಮಾನ್ಯ ಮಾಡಿದ್ದ ಕೇಂದ್ರ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳ ಸಂಬಂಧ ಸುಪ್ರೀಂ ಕೋರ್ಟ್ ಇಂದು ತೀರ್ಪು ನೀಡಿದ್ದು, ಕೇಂದ್ರದ ಹಣಕಾಸು ಮಾಜಿ ಸಚಿವ ಪಿ ಚಿದಂಬರಂ ಅವರು ಸೋಮವಾರ ಸುಪ್ರೀಂ ಕೋರ್ಟ್‌ನ ಬಹುಮತದ ತೀರ್ಪು ನೋಟು ಅಮಾನ್ಯೀಕರಣದ ಉದ್ದೇಶವನ್ನು ಸಾಧಿಸಲಾಗಿದೆಯೇ ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ಲಭಿಸಿದೆ ಎಂದಿದ್ದಾರೆ.

‘ಭಿನ್ನಮತದ’ ತೀರ್ಪು ನೋಟು ರದ್ದತಿಯಲ್ಲಿನ ‘ ಕಾನೂನುಬಾಹಿರತೆ’ ಮತ್ತು ‘ಅಕ್ರಮ’ಗಳನ್ನು ಎತ್ತಿ ತೋರಿಸಿದೆ ಎಂದು ಹೇಳಿದ್ದಾರೆ. ಮಾನ್ಯ ಸುಪ್ರೀಂ ಕೋರ್ಟ್ ತೀರ್ಪನ್ನು ನೀಡಿದ ನಂತರ, ನಾವು ಅದನ್ನು ಒಪ್ಪಿಕೊಳ್ಳಲು ಬದ್ಧರಾಗಿದ್ದೇವೆ. ಆದಾಗ್ಯೂ, ಬಹುಮತದ ತೀರ್ಪು ನಿರ್ಧಾರದ ಉದ್ಧೇಶವನ್ನು ಎತ್ತಿಹಿಡಿದಿಲ್ಲ ಎಂಬುದನ್ನು ಗಮನಿಸುವುದು ಅವಶ್ಯಕ. ಅಥವಾ ಹೇಳಲಾದ ಉದ್ದೇಶಗಳನ್ನು ಸಾಧಿಸಲಾಗಿದೆ ಎಂದು ಬಹುಮತವು ತೀರ್ಮಾನಿಸಿಲ್ಲ’ ಎಂದು ಹಿರಿಯ ಕಾಂಗ್ರೆಸ್ ನಾಯಕ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

‘ವಾಸ್ತವವಾಗಿ ನೋಟು ಅಮಾನ್ಯೀಕರಣದ ಸಲುವಾಗಿ ಹೇಳಲಾಗಿದ್ದ ಬಹುಪಾಲು ಉದ್ದೇಶಗಳನ್ನು ಸಾಧಿಸಲಾಗಿದೆಯೇ ಎಂಬ ಪ್ರಶ್ನೆಗೆ ಇದೀಗ ಉತ್ತರ ಸ್ಪಷ್ಟವಾಗಿದೆ. ಭಿನ್ನಮತದ ತೀರ್ಪು ನೀಡಿರುವ ನೋಟು ರದ್ದತಿಯಲ್ಲಿನ ಅಕ್ರಮ ಮತ್ತು ಅವ್ಯವಹಾರಗಳನ್ನು ಎತ್ತಿ ತೋರಿಸಿರುವುದು ನಮಗೆ ಸಂತೋಷ ತಂದಿದೆ’ ಎಂದು ಅವರು ಹೇಳಿದರು.

ಇದು ಸರ್ಕಾರಕ್ಕೆ ಬಾಗಶಃ ಕಪಾಳಮೋಕ್ಷವಾಗಿರಬಹುದು. ಆದರೆ, ಇದು ಸ್ವಾಗತಾರ್ಹ ಹೊಡೆತವಾಗಿದೆ. ನ್ಯಾಯಾಲಯದ ಇತಿಹಾಸದಲ್ಲಿ ದಾಖಲಾದ ಪ್ರಸಿದ್ಧ ತೀರ್ಪುಗಳಲ್ಲಿ ಭಿನ್ನಾಭಿಪ್ರಾಯದ ತೀರ್ಪು ಪ್ರಮುಖ ಸ್ಥಾನ ಪಡೆಯುತ್ತದೆ ಎಂದರು.

ನಿರ್ಧಾರ ತೆಗೆದುಕೊಂಡಿರುವ ಪ್ರಕ್ರಿಯೆಯು ದೋಷಪೂರಿತವಾಗಿಲ್ಲ ಎಂದು ಹೇಳುವ ಮೂಲಕ 500 ಮತ್ತು 1000 ರೂ. ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸುವ ಸರ್ಕಾರದ 2016ರ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಆರ್ಥಿಕ ನೀತಿಯ ವಿಷಯಗಳಲ್ಲಿ ಹೆಚ್ಚಿನ ಸಂಯಮ ಇರಬೇಕು ಮತ್ತು ನ್ಯಾಯಾಲಯವು ತನ್ನ ತೀರ್ಪಿನ ನ್ಯಾಯಾಂಗ ಪರಿಶೀಲನೆಯಿಂದ ಕಾರ್ಯಾಂಗದ ನಿರ್ಧಾರವನ್ನು ಬದಲಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಎಸ್‌ಎ ನಜೀರ್ ನೇತೃತ್ವದ ಸುಪ್ರೀಂ ಕೋರ್ಟ್‌ನ ಐವರು ನ್ಯಾಯಾಧೀಶರ ಸಂವಿಧಾನ ಪೀಠ ತಿಳಿಸಿದೆ.

ಬಹುಮತದ ತೀರ್ಪಿಗೆ ವಿರುದ್ಧವಾದ ನಿಲುವು ತಳೆದಿರುವ ನ್ಯಾಯಮೂರ್ತಿ ಬಿ.ವಿ ನಾಗರತ್ನ ಅವರು, ‘ನೋಟುಗಳ ರದ್ದತಿಯನ್ನು ಕಾನೂನಿನ ಮೂಲಕ ಮಾಡಬೇಕಾಗಿತ್ತೇ ಹೊರತು ಅಧಿಸೂಚನೆಯ ಮೂಲಕ ಅಲ್ಲ’ ಎಂದು ತೀರ್ಪು ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!