ಬೂಸ್ಟರ್ ಡೋಸ್ ಪಡೆದವರು ಮೂಗಿನ ಮೂಲಕ ನೀಡುವ ಲಸಿಕೆ ಪಡೆಯುವಂತಿಲ್ಲ: ಡಾ.ಎನ್.ಕೆ ಅರೋರಾ

ಹೊಸದಿಲ್ಲಿ ಡಿ.28 : ಚೀನಾದಲ್ಲಿ ಕೋವಿಡ್ ಅಬ್ಬರ ಹೆಚ್ಚಾಗುತ್ತಿದ್ದಂತೆ ದೇಶದಲ್ಲೂ ಕೋವಿಡ್ ವ್ಯಾಪಿಸದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು ಹೊಸದಾಗಿ ಮೂಗಿನ ಮೂಲಕ ನೀಡುವ ಲಸಿಕೆಗೆ ಅನುಮೋದನೆ ನೀಡಲಾಗಿದೆ.

ಆದರೆ ಇದೀಗ ಈಗಾಗಲೇ ಕೋವಿಡ್-19 ಬೂಸ್ಟರ್ ಡೋಸ್ ಲಸಿಕೆ ಪಡೆದವರು, ಸರ್ಕಾರ ಹೊಸದಾಗಿ ಅನುಮೋದಿಸಿದ ಮೂಗಿನ ಮೂಲಕ ನೀಡುವ ಕೋವಿಡ್ ಲಸಿಕೆ ಪಡೆಯುವಂತಿಲ್ಲ ಎಂದು ದೇಶದ ಲಸಿಕಾ ಕಾರ್ಯಪಡೆ ಮುಖ್ಯಸ್ಥ ಡಾ.ಎನ್.ಕೆ. ಅರೋರಾ ಅವರು ತಿಳಿಸಿದ್ದಾರೆ.

ರಾಷ್ಟ್ರೀಯ ಮಾಧ್ಯಮಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಡಾ.ಎನ್.ಕೆ.ಅರೋರಾ ಅವರು ಈ ಅಂಶವನ್ನು ಬಹಿರಂಗಪಡಿಸಿದ್ದು, ಇನ್‍ಕೊವ್ಯಾಕ್ (iNCOVACC) ಲಸಿಕೆಯನ್ನು ಕಳೆದ ವಾರ ಕೋವಿನ್ ಪ್ಲಾಟ್‍ಫಾರಂನಲ್ಲಿ ಪರಿಚಯಿಸಲಾಗಿತ್ತು. “ಇದನ್ನು ಬೂಸ್ಟರ್ ಡೋಸ್ ಆಗಿ ಶಿಫಾರಸ್ಸು ಮಾಡಲಾಗಿದೆ. ಉದಾಹರಣೆಗೆ ಒಬ್ಬ ವ್ಯಕ್ತಿ ಈಗಾಗಲೇ ಮುಂಜಾಗ್ರತಾ ಡೋಸ್ ಪಡೆದಿದ್ದಲ್ಲಿ, ಮೂಗಿನ ಮೂಲಕ ನೀಡುವ ಡೋಸನ್ನು ಅವರಿಗೆ ಶಿಫಾರಸ್ಸು ಮಾಡಲಾಗದು. ಇದುವರೆಗೂ ಬೂಸ್ಟರ್ ಡೋಸ್ ಪಡೆಯದವರಿಗಾಗಿ ಈ ಡೋಸ್ ಇದೆ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

“ಲಸಿಕಾ ಕಾರ್ಯಕ್ರಮದ ಅಂಗವಾಗಿ ಕೋವಿನ್ ಪೋರ್ಟೆಲ್ ನಾಲ್ಕನೇ ಡೋಸ್ ಅನ್ನು ಸ್ವೀಕರಿಸುವುದಿಲ್ಲ. ಒಬ್ಬ ವ್ಯಕ್ತಿ ನಾಲ್ಕನೇ ಡೋಸ್ ಪಡೆಯಲು ಬಯಸುತ್ತಾರೆ ಎಂದುಕೊಳ್ಳೋಣ. ಆ್ಯಂಟಿಜಿನ್ ಸಿಂಕ್ ಎಂಬ ಒಂದು ಪರಿಕಲ್ಪನೆ ಇದೆ. ಒಬ್ಬ ವ್ಯಕ್ತಿಗೆ ಪದೇ ಪದೇ ನಿರ್ದಿಷ್ಟ ಬಗೆಯ ಆ್ಯಂಟಿಜಿನ್ ಪ್ರತಿರೋಧ ಲಸಿಕೆ ನೀಡಿದಲ್ಲಿ ದೇಹ ಅದಕ್ಕೆ ಸ್ಪಂದಿಸುವುದು ನಿಲ್ಲಿಸುತ್ತದೆ ಅಥವಾ ತೀರಾ ಕಳಪೆಯಾಗಿ ಸ್ಪಂದಿಸುತ್ತದೆ. ಆದ್ದರಿಂದ ಆರಂಭದಲ್ಲಿ ಎಂಆರ್ ಎನ್‍ಎ ಲಸಿಕೆಗಳನ್ನು ಆರು ತಿಂಗಳ ಅಂತರದಲ್ಲಿ ನೀಡಲಾಗಿತ್ತು. ಬಳಿಕ ಜನ ಮೂರು ತಿಂಗಳ ಅಂತರದಲ್ಲಿ ಪಡೆದಿದ್ದಾರೆ. ಆದರೆ ಅದು ಇಂಥ ಪ್ರಕರಣಗಳಲ್ಲಿ ಭಾರಿ ಪ್ರಯೋಜನವಾಗಿದೆ. ಆದ್ದರಿಂದ ತಕ್ಷಣಕ್ಕೆ ನಾಲ್ಕನೇ ಡೋಸ್ ಪಡೆಯುವುದರಲ್ಲಿ ಅರ್ಥವಿಲ್ಲ” ಎಂದು ವಿವರಿಸಿದರು.

Leave a Reply

Your email address will not be published. Required fields are marked *

error: Content is protected !!