4 ತಿಂಗಳ ಬಳಿಕ ಪೊಲೀಸರ ಬಲೆಗೆ ಬಿದ್ದ ಆದಿತ್ಯ ಆಳ್ವಾ
ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ಜಾಲದ ನಂಟಿನ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿದ್ದ ಆದಿತ್ಯ ಆಳ್ವಾನನ್ನ ಚೆನ್ನೈನಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕಳೆದ ನಾಲ್ಕು ತಿಂಗಳಿನಿಂದ ನಾಪತ್ತೆಯಾಗಿದ್ದ ಆದಿತ್ಯ ಆಳ್ವಾನ ಪತ್ತೆಗಾಗಿ ಮುಬೈ ,ಗೋವಾ ಸೇರಿದಂತೆ ಹಲವೆಡೆ ಶೋಧ ಕಾರ್ಯ ನಡೆಸಲಾಗಿತ್ತು.
ಸದ್ಯ ಚೆನ್ನೈನಲ್ಲಿ ಬಂಧಿಸಲಾಗಿರುವ ಬಗ್ಗೆ ಮಾಹಿತಿಗಳು ತಿಳಿದು ಬಂದಿದ್ದು, ಆದಿತ್ಯನನ್ನು ಬೆಂಗಳೂರಿಗೆ ಕರೆತರಲಾಗಿದೆ ಎಂದು ತಿಳಿದು ಬಂದಿದೆ.
ಆದಿತ್ಯ ಚೆನೈನಲ್ಲಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದು ವಿಚಾರಣೆಗೆ ಒಳಪಡಿಸಿದ್ದಾರೆ. ಇಂದು ಬಂಧಿತ ಆದಿತ್ಯ ನನ್ನ ನ್ಯಾಯಾಲಯದ ಮುಂದೆ ಹಾಜರು ಪಡಿಸಿ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗುವುದು ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ. ಇದರೊಂದಿಗೆ ವಿಚಾರಣೆಯಿಂದ ಡ್ರಗ್ ಜಾಲದಲ್ಲಿರುವ ಮತ್ತಷ್ಟು ಹೆಸರು ಹೊರ ಬರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ ಕ್ಕೆ ಸಂಬಂಧಿಸಿ ಜೈಲು ಪಾಲಾಗಿರುವ ನಟಿ ರಾಗಿಣಿ ದ್ವಿವೇದಿ, ವೈಭವ್ ಜೈನ್ ಸೇರಿದಂತೆ ಹಲವರ ಜೊತೆ ಆದಿತ್ಯ ಆಳ್ವಾ ನಿಕಟ ಸಂಪರ್ಕ ಹೊಂದಿದ್ದದ್ದು, ಈತನ ರೆಸಾರ್ಟ್ ನಲ್ಲಿ ಡ್ರಗ್ಸ್ ಪಾರ್ಟಿ ನಡೆಯುತ್ತಿದ್ದು ಎನ್ನಲಾಗಿದೆ. ದಿವಂಗತ ಮಾಜಿ ಸಚಿವ ಜೀವರಾಜ್ ಆಳ್ವಾ ಪುತ್ರನಾಗಿರುವ ಆದಿತ್ಯನ ಹುಡುಕಾಟಕ್ಕಾಗಿ ಮುಂಬೈನಲ್ಲಿರು ಬಾವ ನಟ ವಿವೇಕ್ ಓಬೇರಾಯ್ ಅವರ ಮನೆ ಮೇಲೆಯೂ ದಾಳಿ ನಡೆಸಲಾಗಿತ್ತು. ಅಲ್ಲದೆ ನಿರೀಕ್ಷಣಾ ಜಾಮೀನು ಕೋರಿ ಆದಿತ್ಯ ಆಳ್ವಾ ಸಲ್ಲಿಸಿದ್ದ ಅರ್ಜಿಯೂ ಕೂಡ ನ್ಯಾಯಾಲಯದಲ್ಲಿ ತಿರಸ್ಕೃತಗೊಂಡಿತ್ತು. ಈ ನಡುವೆ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿದ್ದ ಆದಿತ್ಯನನ್ನು ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.