ಮಕ್ಕಳು,ಪೋಷಕರ ನಂಬರ್ ಖರೀದಿ-ಕೋರ್ಸ್ ಖರೀದಿಸುವಂತೆ ಬೆದರಿಕೆ: ಬೈಜೂಸ್ ವಿರುದ್ಧ ಎನ್ಸಿಪಿಸಿಆರ್ ಕಿಡಿ
ಹೊಸದಿಲ್ಲಿ,ಡಿ.22 : ಬೈಜುಸ್ ಶಿಕ್ಷಣ ತಂತ್ರಜ್ಞಾನ ಸಂಸ್ಥೆ ಮಕ್ಕಳು ಮತ್ತು ಅವರ ಪೋಷಕರ ಫೋನ್ ನಂಬರ್ಗಳನ್ನು ಖರೀದಿಸಿ ಅವರನ್ನು ಕೋರ್ಸ್ಗಳನ್ನು ಖರಿದಿಸುವಂತೆ ಬೆದರಿಕೆ ಹಾಕುತ್ತಿದೆ ಎಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಹೇಳಿದೆ.
ಈ ವಿಚಾರವಾಗಿ ಮಾಹಿತಿ ಹಂಚಿಕೊಂಡಿರುವ ಎನ್ಸಿಪಿಸಿಆರ್ ಅಧ್ಯಕ್ಷ ಪ್ರಿಯಾಂಕ್ ಕಾನೂಂಗೊ ಅವರು, `ಬೈಜುಸ್ ಮಕ್ಕಳು ಮತ್ತು ಅವರ ಪೋಷಕರ ಫೋನ್ ನಂಬರ್ಗಳನ್ನು ಖರೀದಿಸುತ್ತಿದೆ, ಅವರ ಬೆನ್ನು ಬೀಳುತ್ತಿದೆ ಮತ್ತು ಅವರು ತನ್ನಿಂದ ಕೋರ್ಸ್ಗಳನ್ನು ಖರೀದಿಸದಿದ್ದರೆ ಅವರ ಭವಿಷ್ಯ ಹಾಳಾಗುತ್ತದೆ ಎಂದು ಬೆದರಿಕೆಗಳನ್ನು ಹಾಕುತ್ತಿದೆ ಎನ್ನುವುದು ನಮಗೆ ತಿಳಿದು ಬಂದಿದೆ. ಅವರು ಮೊದಲ ಪೀಳಿಗೆಯ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಳ್ಳುತ್ತಿದ್ದಾರೆ. ಅವರ ವಿರುದ್ಧ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಮತ್ತು ಅಗತ್ಯವಾದರೆ ಕೇಂದ್ರ ಸರಕಾರಕ್ಕೆ ಈ ಬಗ್ಗೆ ಬರೆಯುತ್ತೇವೆ ಎಂದು ತಿಳಿಸಿದರು.
ತಮ್ಮ ಮಕ್ಕಳಿಗಾಗಿ ಕೋರ್ಸ್ಗಳನ್ನು ಖರೀದಿಸುವಂತೆ ಪೋಷಕರಿಗೆ ಆಮಿಷಗಳನ್ನೊಡ್ಡುವ ಮೂಲಕ ಬೈಜುಸ್ನ ಮಾರಾಟ ತಂಡವು ದುರಾಚಾರದಲ್ಲಿ ತೊಡಗಿಕೊಂಡಿದೆ ಎಂಬ ಮಾಧ್ಯಮ ವರದಿಯ ಆಧಾರದಲ್ಲಿ ಆಯೋಗವು ಕ್ರಮವನ್ನು ತೆಗೆದುಕೊಂಡಿದೆ. ಹಾಗೂ ಬೈಜುಸ್ ತನ್ನ ಕೋರ್ಸ್ಗಳಿಗೆ ಸಾಲ ಆಧಾರಿತ ಒಪ್ಪಂದಗಳಿಗೆ ಗ್ರಾಹಕರು ಸಹಿ ಮಾಡುವಂತೆ ಮಾಡುತ್ತದೆ ಮತ್ತು ಗ್ರಾಹಕರು ನಂತರ ಕೋರ್ಸ್ಗಳನ್ನು ಬಯಸದಿದ್ದರೆ ಅವರಿಗೆ ಹಣವನ್ನು ಮರಳಿಸದೆ ವಂಚಿಸುತ್ತಿದೆ ಎಂದೂ ಮಾಧ್ಯಮ ವರದಿಯಲ್ಲಿ ಆರೋಪಿಸಲಾಗಿದೆ ಎಂದು ಆಯೋಗವು ಹೇಳಿದೆ. ಮಾತ್ರವಲ್ಲದೆ ಪೋಷಕರಿಂದ ಹಲವಾರು ದೂರುಗಳು ಬರುತ್ತಿದ್ದರೂ ಬೈಜುಸ್ ಆ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದೂ ಆಯೋಗ ತಿಳಿಸಿದೆ.
ಇದೀಗ ವಿದ್ಯಾರ್ಥಿಗಳಿಗೆ ಕೋರ್ಸ್ಗಳ ತಪ್ಪು ಮಾರಾಟದ ದುರಾಚಾರದ ಆರೋಪದ ಬಗ್ಗೆ ಡಿ.23 ರಂದು ವಿಚಾರಣೆಗೆ ಹಾಜರಾಗುವಂತೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಬೈಜುಸ್ನ ಸಿಇಒ ಬೈಜು ರವೀಂದ್ರನ್ ಗೆ ಸಮನ್ಸ್ ನೀಡಿದೆ ಎಂದು ತಿಳಿದು ಬಂದಿದೆ.