ಕೋವಿಡ್ ಭೀತಿ: ಪ್ರಧಾನಿ ಮೋದಿ ಯಿಂದ ಇಂದು ಉನ್ನತ ಮಟ್ಟದ ಸಭೆ

ಹೊಸದಿಲ್ಲಿ ಡಿ.22 : ಚೀನದಾದ್ಯಂತ ಭಾರೀ ಆತಂಕ ಸೃಷ್ಠಿಸಿರುವ ಕೋವಿಡ್ ಏರಿಕೆಗೆ ಕಾರಣವಾಗಿರುವ ಒಮಿಕ್ರಾನ್ ಉಪತಳಿಯ ನಾಲ್ಕು ಪ್ರಕರಣಗಳು ಭಾರತದಲ್ಲೂ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಉನ್ನತ ಮಟ್ಟದ ಸಭೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.

ನಿನ್ನೆ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಉನ್ನತ ಮುಟ್ಟದ ಸಭೆ ನಡೆಸಿದ್ದರು. ಜನಜಂಗುಳಿಯಿರುವ ಸ್ಥಳಗಳಲ್ಲಿ ಮಾಸ್ಕ್ ಧರಿಸುವಂತೆ ಹಾಗೂ ಇತರ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸುವಂತೆ ಸಭೆಯಲ್ಲಿ ಹೇಳಲಾಯಿತಾದರೂ ಸದ್ಯ ಯಾವುದೇ ಮಾರ್ಗಸೂಚಿ ಜಾರಿಯಲ್ಲಿಲ್ಲ. ಭಯಪಡುವ ಅಗತ್ಯವಿಲ್ಲ ಎಂದೂ ಸರ್ಕಾರ ಹೇಳಿದೆ.

ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 129 ಕೋವಿಡ್ ಪ್ರಕರಣಗಳು ಹಾಗೂ ಒಂದು ಸಾವು ವರದಿಯಾಗಿದ್ದು, ದೇಶದಲ್ಲಿ ಪ್ರಸ್ತುತ 3,408 ಸಕ್ರಿಯ ಕೋವಿಡ್ ಪ್ರಕರಣಗಳಿವೆ.

ಬಿಎಫ್.7 ರೂಪಾಂತರಿಯ ತಲಾ ಎರಡು ಪ್ರಕರಣಗಳು ಗುಜರಾತ್ ಮತ್ತು ಒಡಿಶಾದಿಂದ ಜುಲೈ, ಸೆಪ್ಟೆಂಬರ್ ಮತ್ತು ನವೆಂಬರ್‍ನಲ್ಲಿ ಪತ್ತೆಯಾಗಿದ್ದವು. ಆದರೆ ಸೋಂಕಿತರು ಗೃಹ ಐಸೊಲೇಶನ್‍ನಲ್ಲಿಯೇ ಚಿಕಿತ್ಸೆ ಪಡೆದು ಸಂಪೂರ್ಣ ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಆದರೂ ಮುಂಜಾಗೃತಾ ಕ್ರಮವಾಗಿ ಈಗಾಗಲೇ ವಿವಿಧ ವಿಮಾನ ನಿಲ್ದಾಣಗಳಲ್ಲಿ ಕೋವಿಡ್‍ಗಾಗಿ ಅಂತಾರಾಷ್ಟ್ರೀಯ ಪ್ರಯಾಣಿಕರ ತಪಾಸಣೆ ನಡೆಯುತ್ತಿದೆ.

ದೇಶದಲ್ಲಿ ಬಿಎಫ್.7 ಸೇರಿದಂತೆ 10 ಕೋವಿಡ್ ರೂಪಾಂತರಿಗಳು ಇವೆ ಎಂದು ವರದಿಗಳು ತಿಳಿಸಿದ್ದು, ಕೋವಿಡ್ ಪ್ರಕರಣಗಳ ಜೆನೋಮ್ ಸೀಕ್ವೆನ್ಸಿಂಗ್ ನಡೆಸುವಂತೆ ಹಾಗೂ ಎಲ್ಲಾ ಕೋವಿಡ್ ಪಾಸಿಟಿವ್ ಪ್ರಕರಣಗಳ ಮಾದರಿಗಳನ್ನು ಐಎನ್‍ಎಸ್‍ಎಸಿಒಜಿ ಗೆ ಕಳುಹಿಸುವಂತೆಯೂ ಸರ್ಕಾರ ಸೂಚಿಸಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!