ಬಳ್ಳಾರಿ ವಿಮಾನ ನಿಲ್ದಾಣ ನಿರ್ಮಾಣ ಒಪ್ಪಂದ ರದ್ದು

ಬಳ್ಳಾರಿ ಡಿ.2 : ವಿಮಾನ ನಿಲ್ದಾಣ ಅಭಿವೃದ್ಧಿಪಡಿಸಲು ಬಳ್ಳಾರಿಯ ಸಮೀಪದ ಚಾಗನೂರಿನಲ್ಲಿ ಚೆನ್ನೈ ಮೂಲದ `ಮಾರ್ಗ್ ಕಂಪನಿ ಜತೆ ಮಾಡಿಕೊಂಡಿದ್ದ ಒಪ್ಪಂದ ವನ್ನು ರಾಜ್ಯ ಸರ್ಕಾರ ರದ್ದುಪಡಿಸಿದೆ ಎಂದು ತಿಳಿದು ಬಂದಿದೆ.

‘ಮಾರ್ಗ್’ ಗೆ ಜೂನ್ 8ರಂದು ವಿಮಾನ ನಿಲ್ದಾಣ ಯೋಜನೆ ವಿಳಂಬವಾಗಿರುವ ಕುರಿತು ಕಾರಣ ಕೇಳಿ ನೋಟಿಸ್ ನೀಡಲಾಗಿತ್ತು. ಕಂಪನಿ ನೋಟಿಸ್‍ಗೆ ನೀಡಿದ್ದ ಉತ್ತರ ತೃಪ್ತಿಕರವಾಗಿರಲಿಲ್ಲ. ಬಳಿಕ ಕಾನೂನು ಮತ್ತು ಆರ್ಥಿಕ ಇಲಾಖೆ ಒಪ್ಪಿಗೆ ಪಡೆದು ಐಡಿಡಿ ಒಪ್ಪಂದ ರದ್ದುಪಡಿಸಲು ಶಿಫಾರಸು ಮಾಡಿತ್ತು ಹಾಗೂ ಮೂಲಸೌಲಭ್ಯ ಇಲಾಖೆ (ಐಡಿಡಿ) ಏಪ್ರಿಲ್ 4ರಂದು ‘ಮಾರ್ಗ್’ ಜತೆಗಿನ ಒಪ್ಪಂದ ರದ್ದತಿಗೆ ಶಿಫಾರಸು ಮಾಡಿತ್ತು. ನ.2 ರಂದು ಸೇರಿದ್ದ ಸಂಪುಟ ಸಭೆಯಲ್ಲಿ ಶಿಫಾರಸಿಗೆ ಅನುಮತಿ ದೊರೆತಿದ್ದರಿಂದ ಒಪ್ಪಂದ ರದ್ದುಪಡಿಸಿ ಆದೇಶ ಹೊರಡಿಸಲಾಗಿದೆ. ಅಲ್ಲದೆ ಕಾರ್ಯಕ್ಷಮತೆ ಭದ್ರತೆಗೆ ಕಂಪನಿ ಇಟ್ಟಿದ್ದ 4 ಕೋಟಿ ಬ್ಯಾಂಕ್ ಗ್ಯಾರಂಟಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಚಾಗನೂರಿನಲ್ಲಿ ಸ್ವಾಧೀನ ಮಾಡಿಕೊಂಡಿರುವ 987 ಎಕರೆ ಜಮೀನಿನಲ್ಲಿ ವಿಮಾನ ನಿಲ್ದಾಣ ನಿರ್ಮಿಸಲು 2010ರ ಆಗಸ್ಟ್ 6ರಂದು ಚೆನ್ನೈ ಮೂಲದ ‘ಮಾರ್ಗ್’ ಜತೆ ಸರ್ಕಾರ ಒಪ್ಪಂದ ಮಾಡಿಕೊಂಡಿತ್ತು. 13 ವರ್ಷ ಕಳೆದರೂ ಯೋಜನೆ ಪ್ರಗತಿ ಕಾಣದಿದ್ದರಿಂದ ಒಪ್ಪಂದ ರದ್ದಾಗಿದೆ. ಹಾಗೂ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ಎಲ್ಲಾ ಅವಕಾಶ ಮತ್ತು ಅನುಕೂಲ ಮಾಡಿಕೊಟ್ಟರೂ 1 ಲಕ್ಷ ಈಕ್ವಿಟಿಯಲ್ಲಿ ಹೂಡಿದ್ದು ಬಿಟ್ಟರೆ ಕಂಪನಿ ಯಾವುದೇ ಹೂಡಿಕೆ ಮಾಡದಿರುವುದು ಗಮನಿಸಿ ದರೆ ಯೋಜನೆ ಕಾರ್ಯಗತಗೊಳಿಸಲು ಆರ್ಥಿಕ ಶಕ್ತಿ ಇಲ್ಲವೆಂಬುದು ಖಚಿತವಾಗುತ್ತದೆ’ ಎಂದು ಐಡಿಡಿ ಹೊರಡಿಸಿರುವ ವಿಮಾನ ನಿಲ್ದಾಣ ಅಭಿವೃದ್ಧಿ ಯೋಜನೆ ರದ್ದು ಆದೇಶ ದಲ್ಲಿ ಹೇಳಲಾಗಿದೆ.

ವಿಮಾನ ನಿಲ್ದಾಣ ಅಭಿವೃದ್ಧಿ ಯೋಜನೆಗೆ ‘ಕನ್ಸಲ್ಟೆಂಟ್’ ನೇಮಕವಾಗಲಿದೆ. ಈ ಕನ್ಸಲ್ಟೆಂಟ್ ಸಮೀಕ್ಷೆ ನಡೆಸಿ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲಿದ್ದು, ಇದು ಅಂದಾಜು ವೆಚ್ಚ ಮತ್ತಿತರ ವಿವರ ಒಳಗೊಂಡಿರುತ್ತದೆ. ಡಿಪಿಆರ್ ಅನುಮೋದನೆಗಾಗಿ ಸಚಿವ ಸಂಪುಟದ ಮುಂದೆ ಹೋಗಲಿದೆ. ಸಂಪುಟ ಒಪ್ಪಿಗೆಯ ಬಳಿಕ ಕೆಎಸ್‍ಐಐಡಿಸಿ ಸ್ಪರ್ಧಾತ್ಮಕ ಬಿಡ್ ಕರೆಯಲಿದೆ. ಆನಂತರ ಕಾಮಗಾರಿ ಆರಂಭವಾಗಲಿದೆ. ಎರಡು ಪ್ಯಾಕೇಜ್‍ಗಳಲ್ಲಿ ವಿಮಾನ ನಿಲ್ದಾಣ ಕಾಮಗಾರಿ ನಡೆಯಲಿದೆ. ಇನ್ನು ಎಲ್ಲವೂ ತ್ವರಿತಗತಿಯಲ್ಲಿ ನಡೆದರೆ ನಾಲೈದು ತಿಂಗಳಿಗೆ ವಿಮಾನ ನಿಲ್ದಾಣ ಯೋಜನೆ ಡಿಪಿಆರ್ ಸಿದ್ಧ ಆಗಿ ಸಂಪುಟದ ಒಪ್ಪಿಗೆ ದೊರೆಯಬಹುದು ಎಂದು ಕೆಎಸ್‍ಐಐಡಿಸಿ ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *

error: Content is protected !!