ಆಂತರಿಕ ಸಮೀಕ್ಷೆ : 130 ಕಡೆ ಕಾಂಗ್ರೆಸ್ ಗೆಲುವು-ಸಲೀಂ ಅಹ್ಮದ್ ಹೇಳಿಕೆ

ಹುಬ್ಬಳ್ಳಿ ನ.8 : ರಾಜ್ಯದಲ್ಲಿ ನಡೆಸಿರುವ ಮೂರು ಆಂತರಿಕ ಸಮೀಕ್ಷೆಯಲ್ಲಿ ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 130 ಸ್ಥಾನಗಳನ್ನು ಗೆಲ್ಲಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಅವರು ಹೇಳಿದ್ದಾರೆ.
ಈ ಬಗ್ಗೆ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಆಂತರಿಕ ಸಮೀಕ್ಷೆಯಲ್ಲಿ ಮುಂದಿನ ಚುನಾವಣೆಯಲ್ಲಿ ಕೇವಲ 50 ಸೀಟುಗಳು ಸಿಗಲಿವೆ ಎಂಬುದು ಗೊತ್ತಾಗಲಿದೆ. ಹತಾಶ ಸ್ಥಿತಿ ತಲುಪಿರುವ ನಾಯಕರು, ಖಾಸಗಿ ಕಂಪನಿ ಮೂಲಕ ಮತದಾರರ ಮಾಹಿತಿ ಸಂಗ್ರಹಿಸಿ ಚುನಾವಣೆಯಲ್ಲಿ ಅಕ್ರಮ ಎಸಗಲು ತಯಾರಿ ನಡೆಸಿದ್ದಾರೆ’ ಎಂದು ಆರೋಪಿಸಿದರು. ಹಾಗೂ ‘ಮಾನ ಮರ್ಯಾದೆ ಇಲ್ಲದ ಈ ಸರ್ಕಾರವನ್ನು ಹಲವು ಹಗರಣಗಳು ಸುತ್ತಿಕೊಂಡಿವೆ. ಎಲ್ಲಾ ಇಲಾಖೆಗಳಲ್ಲಿ ಶೇ 40 ಕಮಿಷನ್ ದಂಧೆ ನಡೆಯುತ್ತಿದೆ. ಇದರಿಂದಾಗಿ ಬೇಸತ್ತಿರುವ ಜನ ಬಿಜೆಪಿಯನ್ನು ಅಧಿಕಾರದಿಂದ ತೊಲಗಿಸಲು ಸಂಕಲ್ಪ ಮಾಡಿದ್ದಾರೆ’, `ಭ್ರಷ್ಟಾಚಾರದಲ್ಲಿ ಮುಳುಗಿರುವ ಹಾಗೂ ಜನರ ಸಂಕಷ್ಟಕ್ಕೆ ಸ್ಪಂದಿಸದೆ ಆಡಳಿತದಲ್ಲಿ ವಿಫಲವಾಗಿರುವ ಬಿಜೆಪಿಯು ಜನಸಂಕಲ್ಪ ಯಾತ್ರೆ ಬದಲು, ತಾವು ಮಾಡಿರುವ ತಪ್ಪಿಗಾಗಿ ಜನರ ಕ್ಷಮೆಯಾಚನೆಯ ಯಾತ್ರೆ ಮಾಡಲಿ’ ಎಂದು ವ್ಯಂಗ್ಯವಾಡಿದರು.
ಈ ವೇಳೆ ಕಾಂಗ್ರೆಸ್ ನಿಂದ ಟಿಕೇಟ್ ಆಕಾಂಕ್ಷಿಗಳ ಅರ್ಜಿ ಸಲ್ಲಿಕೆ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್ ನಿಂದ ಸ್ಪರ್ಧಿಸುವ ಸಲುವಾಗಿ ಇದುವರೆಗೆ ಒಂದು ಸಾವಿರ ಅರ್ಜಿಗಳು ಸಲ್ಲಿಕೆಯಾಗಿವೆ. ಧಾರವಾಡ ಜಿಲ್ಲೆಯಿಂದ 60 ಆಕಾಂಕ್ಷಿಗಳು ಅರ್ಜಿ ಹಾಕಿದ್ದಾರೆ. ದಿನಾಂಕ ಮುಂದೂಡುವಂತೆ ಒತ್ತಾಯ ಬಂದಿದ್ದರಿಂದ, ಅವಧಿಯನ್ನು ಒಂದು ತಿಂಗಳು ವಿಸ್ತರಿಸಲಾಗಿದೆ’. `ಟಿಕೆಟ್ ಹಂಚಿಕೆ ಪ್ರಕ್ರಿಯೆಯು ಎಂಟು ಹಂತದಲ್ಲಿ ನಡೆಯುತ್ತದೆ. ಮೊದಲ ಹಂತದಲ್ಲಿ 150 ಕ್ಷೇತ್ರಗಳ ಅಭ್ಯರ್ಥಿಗಳನ್ನು ಡಿಸೆಂಬರ್ ಅಂತ್ಯದೊಳಗೆ ಅಂತಿಮಗೊಳಿಸಲಾಗುವುದು. ಸಮೀಕ್ಷೆ ಪ್ರಕಾರ, ಧಾರವಾಡ ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಪಕ್ಷ ಮುನ್ನಡೆ ಸಾಧಿಸಲಿದೆ. ಆದರೂ, ಏಳು ಕ್ಷೇತ್ರಗಳಲ್ಲಿ ಪಕ್ಷವನ್ನು ಗೆಲುವಿನ ದಡ ಸೇರಿಸಲು ಶ್ರಮಿಸಲಾಗುವುದು’ ಎಂದು ತಿಳಿಸಿದರು.
ಕೆಲವರು ಅತೀವ ಅಭಿಮಾನದಿಂದಾಗಿ, ತಮ್ಮ ನಾಯಕರೇ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಹೇಳುತ್ತಾರೆ. ಆದರೆ, ಈ ಕುರಿತು ಹೈಕಮಾಂಡ್ ಹಾಗೂ ಪಕ್ಷದ ಶಾಸಕಾಂಗ ಸಭೆಯು ಅಂತಿಮ ತೀರ್ಮಾನ ಕೈಗೊಳ್ಳುತ್ತದೆ' ಎಂದರು. ಹಾಗೂ
ಕಾಂಗ್ರೆಸ್ ಪಕ್ಷವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟಿದೆ. ಅಧ್ಯಕ್ಷ ಹುದ್ದೆಗೆ ನಡೆದ ಚುನಾವಣೆಯಲ್ಲಿ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಆ ಮೂಲಕ, ತಮ್ಮದು ಕುಟುಂಬದ ಪಕ್ಷವಲ್ಲ ಎಂಬ ಸಂದೇಶನ್ನು ಕಾಂಗ್ರೆಸ್ ನೀಡಿದೆ. ಆದರೆ, ಬಿಜೆಪಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಆಣತಿ ಮೇರೆಗೆ, ಅಧ್ಯಕ್ಷರ ಆಯ್ಕೆ ನಡೆಯುತ್ತದೆ’ ಎಂದು ಹೇಳಿದರು.
ಭಾರತ್ ಜೋಡೋ ಯಾತ್ರೆ ಬಗ್ಗೆ ಮಾತನಾಡಿದ ಅವರು, `ನಾಯಕ ರಾಹುಲ್ ಗಾಂಧಿ ಅವರು ರಾಜ್ಯದಲ್ಲಿ ನಡೆಸಿರುವ 511 ಕಿ.ಮೀ. ಭಾರತ ಜೋಡೋ ಪಾದಯಾತ್ರೆಯು ಪಕ್ಷಕ್ಕೆ ಹೊಸ ಚೈತನ್ಯ ತುಂಬಿದೆ. ಇದು ಮುಂದಿನ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ನಾಂದಿ ಹಾಡಲಿದೆ. ದೇಶ ಒಗ್ಗೂಡಿಸುವ ಈ ಯಾತ್ರೆಯು, ಲೋಕಸಭಾ ಚುನಾವಣೆ ಮೇಲೂ ಪರಿಣಾಮ ಬೀರಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಹಾನಗರ ಕಾಂಗ್ರೆಸ್ ಘಟಕದ ಅಧ್ಯಕ್ಷ ಅಲ್ತಾಫ ಹಳ್ಳೂರ, ಗ್ರಾಮೀಣ ಘಟಕದ ಅಧ್ಯಕ್ಷ ಅನಿಲ ಕುಮಾರ ಪಾಟೀಲ, ಮಾಜಿ ಶಾಸಕರಾದ ಎನ್.ಎಚ್. ಕೋನರಡ್ಡಿ, ಮಲ್ಲಿಕಾರ್ಜುನ ಅಕ್ಕಿ, ಮುಖಂಡರಾದ ಸದಾನಂದ ಡಂಗನವರ, ಶಿವಾನಂದ ಕರಿಗಾರ, ಪಿ.ಎಚ್. ನೀರಲಕೇರಿ ಉಪಸ್ಥಿತರಿದ್ದರು.