“ಸುಂಕ ವಸೂಲಿ ನಿಲ್ಲುವ ತನಕ ನಿರಂತರ ಹೋರಾಟ”-ರಮಾನಾಥ್ ರೈ

ಸುರತ್ಕಲ್ ನ.18 : “ಸುರತ್ಕಲ್ ಟೋಲ್ ಹೋರಾಟ ನಿರಂತರವಾಗಿ 22 ದಿನಗಳಿಂದ ನಡೆಯುತ್ತಿದ್ದು ಜನರಿಂದ ಸುಂಕ ವಸೂಲಿ ಮಾಡುವುದು ಸಂಪೂರ್ಣ ನಿಲ್ಲುವ ತನಕ ಅಹೋರಾತ್ರಿ ಧರಣಿ ಮುಂದುವರಿಯುತ್ತದೆ ಎಂದು ಮಾಜಿ ಸಚಿವ ರಮಾನಾಥ್ ರೈ ಅವರು ಹೇಳಿದ್ದಾರೆ.

ಸುರತ್ಕಲ್ ಟೋಲ್ ಗೇಟ್ ತೆರವಿನ ಸರಕಾರದ ಆದೇಶದ ಹೊರತಾಗಿಯೂ ನಿರಂತರ ಟೋಲ್ ಸಂಗ್ರಹ ನಡೆಸುತ್ತಿರುವುದನ್ನು ವಿರೋಧಿಸಿ ಹೋರಾಟ ಸಮಿತಿ ಕಳೆದ 22 ದಿನಗಳಿಂದ ನಡೆಸುತ್ತಿರುವ ಧರಣಿ ಪ್ರತಿಭಟನೆ ಬೆಂಬಲಿಸಿ ಇಂದು ಸಮಾನ ಮನಸ್ಕ ಸಂಘಟನೆಗಳು ತಡಂಬೈಲ್ ಜಂಕ್ಷನ್ ನಿಂದ ಧರಣಿ ಸ್ಥಳಕ್ಕೆ ನಡೆಸಿದ ಕಾಲ್ನಡಿಗೆ ಜಾಥಾದ ಬಳಿಕ ಮಾತನಾಡಿದ ಅವರು, ಜಿಲ್ಲೆಯ ಗ್ರಾಮೀಣ ಭಾಗಕ್ಕೂ ಹೋರಾಟದ ಬಿಸಿ ತಟ್ಟಿದ್ದು ಸಮಾನಮನಸ್ಕರು ಒಂದೇ ವೇದಿಕೆಯಲ್ಲಿ ಸೇರಿರುವುದು ದೊಡ್ಡ ಸಾಧನೆಯಾಗಿದೆ. ಟೋಲ್ ತೆರವುಗೊಳಿಸುವುದು ನಮ್ಮೆಲ್ಲರ ಉದ್ದೇಶವಾಗಿದೆ. ಹೋರಾಟಕ್ಕೆ ನೈತಿಕ ಬೆಂಬಲ ನೀಡಿರುವ ಜಿಲ್ಲೆಯ ಜನರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ವಿವಿಧ ಸಂಘಟನೆಗಳು ನಡೆಸಿದ ಹೋರಾಟದ ಫಲವಾಗಿ ತಾರ್ಕಿಕ ಅಂತ್ಯದತ್ತ ಸಾಗಿದೆ. ಮುಂದೆ ಇನ್ನಷ್ಟು ಕಠಿಣ ಸಮಸ್ಯೆಗಳು ಎದುರಾಗಬಹುದು. ಆಗಲೂ ಇದೇ ರೀತಿ ಒಗ್ಗಟ್ಟು ಪ್ರದರ್ಶಿಸುವ ಮೂಲಕ ಹೋರಾಟ ಮುಂದುವರಿಸಬೇಕು” ಎಂದರು.

ಈ ವೇಳೆ ಮಾತಾಡಿದ ಹೋರಾಟಗಾರ ಮುನೀರ್ ಕಾಟಿಪಳ್ಳ ಅವರು “ಇದು ಜಾತಿ ಧರ್ಮ ಪಕ್ಷ ಮೀರಿ ಬೆಳೆದಿರುವ ಹೋರಾಟ. ಇಲ್ಲಿ ಬಿಜೆಪಿ ನಾಯಕರು ಮಾತ್ರ ಇಲ್ಲ, ಮತದಾರರಿದ್ದಾರೆ. ನಾನಾ ಪಕ್ಷ, ಸಂಘಟನೆಗಳ ಸಾವಿರಾರು ಕಾರ್ಯಕರ್ತರು, ಮುಖಂಡರು ಜೊತೆಯಾಗಿದ್ದಾರೆ. ಹೀಗಿರುವಾಗ ಜನರಿಗೆ ಬೇಡವಾದ ಟೋಲ್ ಗೇಟ್ ಖಂಡಿತ ಬೇಡ. ಸರಕಾರ ಆದ್ಯಾದೇಶ ಜಾರಿಗೊಳಿಸಿಯೂ ಟೋಲ್ ತೆರವು ಮಾಡದೇ ಇರುವುದು ಯಾಕೆ….? ಸುಂಕ ವಸೂಲಿ ನಿಂತಿಲ್ಲ ಯಾಕೆ..? ಎಂದು ಪ್ರಶ್ನಿಸಿದರು.

ಹಾಗೂ ಒಂದೊಮ್ಮೆ ಇಲ್ಲಿಂದ ಟೋಲ್ ಹೆಜಮಾಡಿಯಲ್ಲಿ ವಿಲೀನಗೊಂಡ ಬಳಿಕ ಅಲ್ಲಿ ದುಪ್ಪಟ್ಟು ಸುಂಕ ವಸೂಲಿ ಮಾಡಿದರೆ ಇದೇ ಹೋರಾಟ ಮುಂದಿನ ದಿನಗಳಲ್ಲಿ ಹೆಜಮಾಡಿಗೆ ಸ್ಥಳಾಂತರಗೊಳ್ಳುವುದು ನಿಶ್ಚಿತ” ಎಂದರು.

ಇದೇ ವೇಳೆ ಸಭೆಯಲ್ಲಿ ಮಾತಾಡಿದ ಮೊಯಿದೀನ್ ಬಾವಾ ಅವರು, “ಕೇಂದ್ರದ ಆದೇಶ ಇದ್ದರೂ ಟೋಲ್ ತೆರವು ಮಾಡದೇ ಇರುವುದು ನಾಚಿಕೆಗೇಡು. ಜಿಲ್ಲಾಧಿಕಾರಿ ಸಂಸದರ ಆದೇಶಕ್ಕೆ ಮಣಿದು ದಿನಕ್ಕೊಂದು ಹೇಳಿಕೆ ಕೊಡುತ್ತಿದ್ದಾರೆ. ಈ ಭಾಗದ ಶಾಸಕರು ಟೋಲ್ ರದ್ದಾದ ಕೂಡಲೇ ಪತ್ರಿಕಾಗೋಷ್ಠಿ ಕರೆದು ತಾನೂ ಹೋರಾಟ ಮಾಡಿದ್ದಾಗಿ ಹೇಳುತ್ತಾರೆ. ಶಾಸಕರು ಈ ಬಗ್ಗೆ ಬಹಿರಂಗ ಚರ್ಚೆಗೆ ಬರಲಿ. ನಾನು ಸಿದ್ಧನಿದ್ದೇನೆ. ಒಂದೇ ಒಂದು ದಿನವೂ ನಿಮಗೆ ಜನರ ಪರವಾಗಿ ಹೋರಾಟ ಮಾಡಲು ಸಮಯ ಸಿಕ್ಕಿಲ್ಲವೇ?” ಎಂದು ಪ್ರಶ್ನಿಸಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ, ಮಾಜಿ ಶಾಸಕರಾದ ಅಭಯಚಂದ್ರ ಜೈನ್, ಮಾಜಿ ಮೇಯರ್ ಕೆ.ಅಶ್ರಫ್, ಸುನಿಲ್ ಕುಮಾರ್ ಬಜಾಲ್, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಕೆಪಿಸಿಸಿ ಸಂಯೋಜಕಿ ಪ್ರತಿಭಾ ಕುಳಾಯಿ, ಮುನೀರ್ ಕಾಟಿಪಳ್ಳ, ಸುರತ್ಕಲ್ ಬ್ಲಾಕ್ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಮುಹಮ್ಮದ್ ಸಮೀರ್ ಕಾಟಿಪಳ್ಳ, ಶಾಲೆಟ್ ಪಿಂಟೋ, ಕೃಪಾ ಆಳ್ವ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ, ಸುಮತಿ ಹೆಗ್ಡೆ, ವಿಶ್ವಾಸ್ ದಾಸ್, ರಾಜೇಶ್ ಕುಳಾಯಿ, ಬಿ.ಕೆ. ಇಮ್ತಿಯಾಜ್, ಎಂ.ಜಿ. ಹೆಗಡೆ, ರಾಘವೇಂದ್ರ ರಾವ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!