ಚಿಕ್ಕಮಗಳೂರು: ಬೆಳ್ಳಂಬೆಳಿಗ್ಗೆ ಕಾಂಗ್ರೆಸ್ ನಾಯಕಿ ಮನೆ ಮೇಲೆ ಐಟಿ ದಾಳಿ

ಚಿಕ್ಕಮಗಳೂರು, ನ.17 : ಇಂದು ಬೆಳ್ಳಂಬೆಳಿಗ್ಗೆ ಕಾಂಗ್ರೆಸ್ ನಾಯಕಿ, ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಚಿಕ್ಕಮಗಳೂರು ನಗರದ ಮಾರ್ಕೆಟ್ ರಸ್ತೆಯಲ್ಲಿರುವ ಶಾಂತೇಗೌಡ ಅವರ ನಿವಾಸಕ್ಕೆ ಇಂದು ಮುಂಜಾನೆ ಹತ್ತಕ್ಕೂ ಹೆಚ್ಚು ವಾಹನಗಳಲ್ಲಿ ಬಂದ ಐಟಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ ಎಂದು ತಿಳಿದು ಬಂದಿದೆ.

ಈ ದಾಳಿಯ ಬಗ್ಗೆ ಅನುಮಾನ ಬಾರದಿರಲಿ ಎಂಬ ಕಾರಣಕ್ಕೆ ಐಟಿ ಅಧಿಕಾರಿಗಳು ತಮ್ಮ ಕಾರಿನ ಮುಂಭಾಗದಲ್ಲಿ ‘ಅಭಿನವ್ ವೆಡ್ಸ್ ದೀಪಿಕಾ’ ಎಂದು ಮದುವೆಯ ಬೋರ್ಡ್ ಹಾಕಿಕೊಂಡು ಈ ಕಾರ್ಯಾಚರಣೆ ನಡೆಸಿದ್ದಾರೆ. ಅಲ್ಲದೆ ಶಾಂತೇಗೌಡ ಅವರ ಅಳಿಯ, ಹಾಸನ ಜಿಲ್ಲೆಯ ಬೇಲೂರಿನಲ್ಲಿರುವ ಸಂತೋಷ್ ನಿವಾಸದ ಮೇಲೂ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ಪರಿಶೀಲನೆ ಮುಂದುವರಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಇನ್ನು ಈ ದಾಳಿಯ ಹಿಂದೆ ಬಿಜೆಪಿ ಮುಖಂಡ ಸಿ.ಟಿ.ರವಿ ಹುನ್ನಾರವಿದೆ ಎಂದು ಕಾಂಗ್ರೆಸ್ ಆರೋಪಿಸಿದ್ದು, ವಿಧಾನ ಪರಿಷತ್ ಮಾಜಿ ಸದಸ್ಯೆಯಾಗಿರುವ ಗಾಯತ್ರಿ ಶಾಂತೇಗೌಡ ಅವರು ಮುಂಬರುವ ವಿಧಾನಸಭೆ ಚುನಾವಣೆಗೆ ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಇದೇ ಕಾರಣಕ್ಕೆ ಈ ಐಟಿ ದಾಳಿ ನಡೆದಿದೆ ಎಂದು ಕಾಂಗ್ರೆಸ್ ಹೇಳಿದೆ. 

Leave a Reply

Your email address will not be published.

error: Content is protected !!