ಅಕ್ರಮವಾಗಿ ಮತದಾರರ ಅಂಕಿಅಂಶ ಸಂಗ್ರಹ- ಮುಖ್ಯಮಂತ್ರಿ ಬಂಧನಕ್ಕೆ ಕಾಂಗ್ರೆಸ್ ಆಗ್ರಹ

ಬೆಂಗಳೂರು ನ.17 :ಖಾಸಗಿ ಸಂಸ್ಥೆಯೊಂದು (ಎನ್‍ಜಿಒ) ಮತದಾರರ ಅಂಕಿಅಂಶಗಳನ್ನು (ಡಾಟಾ) ಅಕ್ರಮವಾಗಿ ಸಂಗ್ರಹಿಸುತ್ತಿದ್ದು, ಇದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೇ ಕಾರಣ. ಅವರ ಮೇಲೆ ಎಫ್‍ಐಆರ್ ದಾಖಲಿಸಿ, ಬಂಧಿಸಬೇಕು ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಆಗ್ರಹಿಸಿದ್ದಾರೆ.

ಈ ಬಗ್ಗೆ ಇಂದು ಬೆಳಿಗ್ಗೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, `ಚಿಲುಮೆ ‘ ಎಂಬ ಸರ್ಕಾರೇತರ ಸಂಸ್ಥೆ (ಎನ್‍ಜಿಒ) ತನ್ನ ಏಜೆಂಟರನ್ನು ಸರ್ಕಾರಿ ಅಧಿಕಾರಿಗಳಂತೆ ಬಿಂಬಿಸಿ ಸಾವಿರಾರು ಮತದಾರರ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸಿದೆ. ಈ ಅಕ್ರಮದ ಹೊಣೆಯನ್ನು ಬಸವರಾಜ ಬೊಮ್ಮಾಯಿ ಹೊರಬೇಕು. ಅಲ್ಲದೆ, ಅವರು ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಹಾಗೂ ಚುನಾವಣಾ ವ್ಯವಸ್ಥೆಯನ್ನೇ ಭ್ರಷ್ಟಗೊಳಿಸುವ ಈ ಅಪರಾಧದ ಬಗ್ಗೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದ್ದಾರೆ.

ಮತದಾರರ ಮಾಹಿತಿಯನ್ನು ಸರ್ಕಾರ ಸಂಗ್ರಹಿಸಬೇಕು. ಆದರೆ, ಇಲ್ಲಿ ಖಾಸಗಿ ಸಂಸ್ಥೆ ಸಂಗ್ರಹಿಸಿದೆ ಎಂದ ಅವರು,ಡಾಟಾ ಸಂಗ್ರಹಿಸಲು ಚಿಲುಮೆ ಸಂಸ್ಥೆಗೆ ಬಿಬಿಎಂಪಿ ಅಧಿಕಾರಿಗಳು ಅವಕಾಶ ಮಾಡಿಕೊಟ್ಟಿದ್ದಾರೆ. ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಕೂಡಾ ಇದಕ್ಕೆ ಕಾರಣ. ಮಹದೇವಪುರ ಕ್ಷೇತ್ರದಲ್ಲಿ ಮೊದಲು ಮಾಹಿತಿ ಸಂಗ್ರಹಿಸಲಾಗಿದೆ. ಡಾಟಾ ಸಂಗ್ರಹಕ್ಕೆ ಆಗಸ್ಟ್ 20ರಂದು ಆದೇಶ ಹೊರಡಿಸಲಾಗಿದೆ. ಚಿಲುಮೆ ಸಂಸ್ಥೆಯವರು ಸರ್ಕಾರಿ ಅಧಿಕಾರಿಗಳೆಂದು ಮಾಹಿತಿ ಸಂಗ್ರಹಿಸಿದ್ದಾರೆ’ ಎಂದು ಆರೋಪಿಸಿದ್ದಾರೆ ಹಾಗೂ ಮತದಾರರ ಡಾಟಾ ಸಂಗ್ರಹಿಸಲು ಖಾಸಗಿ ಸಂಸ್ಥೆಯವರಿಗೆ ಅವಕಾಶ ಸಿಕ್ಕಿದ್ದು ಹೇಗೆ...? ಅಕ್ರಮವಾಗಿ ಸಂಗ್ರಹಿಸುತ್ತಿರುವುದು ಏಕೆ...? ಬೂತ್ ಮಟ್ಟದ ಅಧಿಕಾರಿಗಳು ಏನು ಮಾಡುತ್ತಿದ್ದಾರೆ. ಅವರ ಸಹಕಾರವೇನಾದರೂ ಇದೆಯೇ...? ಎಂದು ಅವರು ಪ್ರಶ್ನಿಸಿದರು. ಹಾಗೂಮತದಾರರ ಮಾಹಿತಿ ಸಂಗ್ರಹಿಸಲು ಚಿಲುಮೆ ಖಾಸಗಿ ಸಂಸ್ಥೆಗೆ ಹೇಗೆ ಅವಕಾಶ ಕೊಟ್ಟರು ಎನ್ನುವುದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉತ್ತರ ನೀಡಬೇಕು ಎಂದು ಹೇಳಿದರು.

ಇದೇ ವೇಳೆ ಮತದಾರರ ಮೊಬೈಲ್ ಸಂಖ್ಯೆ, ವಿಳಾಸ, ಇತರ ವೈಯುಕ್ತಿಕ ಮಾಹಿತಿಯನ್ನೂ ಸಂಗ್ರಹಿಸಲಾಗಿದೆ. ನಕಲಿ ಗುರುತಿನ ಚೀಟಿ ಇಟ್ಟುಕೊಂಡು ಈ ಮಾಹಿತಿ ಸಂಗ್ರಹಿಸಿದ್ದಾರೆ. ಕೃಷ್ಣಪ್ಪ ರವಿಕುಮಾರ್ ಎಂಬವರು ಇದರ ಹಿಂದೆ ಇದ್ದಾರೆ. ಈ ವ್ಯಕ್ತಿ ಮಾಜಿ ಉಪ ಮುಖ್ಯಮಂತ್ರಿಯೂ ಆಗಿರುವ ಹಾಲಿ ಸಚಿವರ ಆಪ್ತ’ ಎಂದು ಆರೋಪಿಸಿದ್ದಾರೆ.

ಈ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮಾತನಾಡಿ, ಅಕ್ರಮ ಚುನಾವಣಾ ಪ್ರಕ್ರಿಯೆಗೆ ಮುಖ್ಯಮಂತ್ರಿಯೇ ಕಾರಣ. ಮತದಾರರ ಮಾಹಿತಿ ಸಂಗ್ರಹಿಸಿ ವಾಮಮಾರ್ಗದಲ್ಲಿ ಚುನಾವಣೆ ಗೆಲ್ಲಲು ಅವರು ಹೊರಟಿದ್ದಾರೆ' ಎಂದು ಆರೋಪಿಸಿದರು. ಹಾಗೂಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯಲು ಅವರಿಗೆ ನೈತಿಕ ಹಕ್ಕು ಇಲ್ಲ. ಕೂಡಲೇ ಅವರು ರಾಜೀನಾಮೆ ನೀಡಬೇಕು. ಬೊಮ್ಮಾಯಿ ಅವರನ್ನು ಮೊದಲು ಬಂಧಿಸಬೇಕು. ಮುಖ್ಯಮಂತ್ರಿ ವಿರುದ್ಧ ನಾವು ದೂರು ನೀಡುತ್ತೇವೆ’ ಎಂದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ, ಶಾಸಕರಾದ ಕೆ.ಜೆ. ಜಾರ್ಜ್, ರಾಮಲಿಂಗಾರೆಡ್ಡಿ, ಸಲೀಂ ಅಹ್ಮದ್, ಎಚ್.ಎಂ. ರೇವಣ್ಣ ಇದ್ದರು.

Leave a Reply

Your email address will not be published.

error: Content is protected !!