ಉಡುಪಿ ನಗರ ಸಭೆಯ ಇ – ಖಾತೆ ಸ್ತಬ್ಧ, ಜನಸಾಮಾನ್ಯರ ಪರದಾಟ

ಉಡುಪಿ ನ.16 : ನಗರ ಸಭೆಯ ಕಂದಾಯ ವಿಬಾಗಕ್ಕೆ ಸಂಬಂಧಿಸಿ ಸರ್ವರ್ ಸಮಸ್ಯೆ ಉಂಟಾಗಿದ್ದು ಯಾವುದೇ ಕೆಲಸ ಸರಿಯಾಗಿ ನಡೆಯುತ್ತಿಲ್ಲ. ಇದರಿಂದಾಗಿ ಕಳೆದ 11 ದಿನಗಳಿಂದ ಉಡುಪಿ ನಗರಸಭೆಯ ಇ-ಖಾತೆ, ಖಾತೆ ಬದಲಾವಣೆ ಮತ್ತು ತೆರಿಗೆ ಸಂಗ್ರಹಿಸುವ ಆನ್‍ಲೈನ್ ವ್ಯವಸ್ಥೆ ಸ್ತಬ್ದವಾಗಿದ್ದು, ನಾಗರಿಕರು ಸರಿಯಾದ ಸಮಯಕ್ಕೆ ಸರಕಾರಿ ಸೇವೆಯನ್ನು ಪಡೆಯಲಾಗದೇ ತೊಂದರೆ ಅನುಭವಿಸುತ್ತಿದ್ದಾರೆ.

ನಗರ ಸಭೆಗೆ ಪ್ರತಿ ದಿನ ಸುಮಾರು 20 ರಿಂದ 25 ಮಂದಿ ಇ – ಖಾತೆಗೆ ಅರ್ಜಿ ಸಲ್ಲಿಸಲು, ಖಾತೆ ಬದಲಾವಣೆಗೆ ಅರ್ಜಿ ಸಲ್ಲಿಸಲು ಆಗಮಿಸುತ್ತಾರೆ. ಆದರೆ ಸರ್ವರ್ ಇಲ್ಲದ ಕಾರಣ ಕೆಲಸಗಳು ಬಾಕಿ ಉಳಿಯುತ್ತಿವೆ. ಆಸ್ತಿ ಪತ್ರವನ್ನಿಟ್ಟು ಬ್ಯಾಂಕ್‍ನಲ್ಲಿ ಸಾಲ ಪಡೆಯುವವರಿಗೆ, ಜಾಗವನ್ನು ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ಇ-ಖಾತೆ ಅವಶ್ಯಕ. ಆಸ್ತಿಯ ನೋಂದಾವಣಿಗೆ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಮುಂಗಡ ಟೋಕನ್ ಪಡೆದವರಿಗೆ ಇ-ಖಾತೆ ಲಭಿಸದೇ ಇರುವುದರಿಂದ ತೀರ ಸಮಸ್ಯೆ ಉಂಟಾಗಿದೆ.

ಇ-ಖಾತೆ ಮತ್ತು ಖಾತೆ ಬದಲಾವಣೆಯೂ ವೆಬ್‍ಸೈಟ್ ಮೂಲಕ ಮಾಡಬೇಕಿದ್ದು, ಅದಕ್ಕೆ ಸಂಬಂಧಪಟ್ಟ ಸೂಕ್ತ ದಾಖಲೆಗಳನ್ನು ನಗರಸಭೆಯ ಕಂದಾಯ ಇಲಾಖೆಯ ಕೇಸ್ ವರ್ಕರ್ ಗಳು ಅರ್ಜಿದಾರರಿಂದ ಪಡೆದು ಆ್ಯಪ್‍ನಲ್ಲಿ ದಾಖಲೀಕರಿಸುವ ಮೂಲಕ ಪ್ರಕ್ರಿಯೆ ಆರಂಭವಾಗುತ್ತದೆ. ಆದರೆ ಈಗ ಕೇಸ್ ವರ್ಕರ್ ಗಳು ದಾಖಲೆಗಳನ್ನು ಸ್ಕ್ಯಾನ್ ಮಾಡಿ, ಫೋಲ್ಡರ್ ಗಳನ್ನು ಸೃಷ್ಟಿಸಿ ಎಲ್ಲಾ ಆಗಿದ್ದರೂ ಕೂಡಾ ಸರ್ವರ್ ಗಾಗಿ ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ.

ಮಾತ್ರವಲ್ಲದೆ ಮನೆ ತೆರಿಗೆಯನ್ನು ಪಾವತಿಸುವವರು ಆನ್ ಲೈನ್ ಮೂಲಕ ಚಲನ್ ಪಡೆಯಬೇಕು. ಆದರೆ ಸರ್ವರ್ ಇಲ್ಲದಿರುವುದರಿಂದ ಚಲನ್ ಪಡೆಯಲು ಸಾಧ್ಯವಾಗುತ್ತಿಲ್ಲ. ಮನೆ ತೆರಿಗೆ ಕಟ್ಟಲು ಅವಧಿ ಮುಕ್ತಾಯಗೊಂಡರೆ, ಪಾವತಿದಾರ ದಂಡವನ್ನು ಪಾವತಿಸಬೇಕು. ಆದರೆ ಸರ್ವರ್‍ನ ಸಮಸ್ಯೆಯಿಂದಾಗಿ ತಡವಾದರೆ ಅದಕ್ಕೆ ಯಾರು ಹೊಣೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಬೆರಳ ತುದಿಯಲ್ಲಿ ಇ-ಗವರ್ನೆನ್ಸ್ ಎಂದು ಹೇಳಿದರೂ, ಕಳೆದ ಒಂದು ವಾರದಿಂದ ನಗರಸಭೆಗೆ ಪ್ರತಿನಿತ್ಯ ಬಂದು ವಾಪಸು ಹೋಗುತ್ತಿದ್ದೇನೆ. ಮನೆ ತೆರಿಗೆ ಕಟ್ಟಲು ಚಲನ್ ಪಡೆಯಲು ಸಮಸ್ಯೆಯಾಗುತ್ತಿದೆ. ಜೊತೆಗೆ ಇ- ಖಾತೆ, ಖಾತೆ ಬದಲಾವಣೆಯೂ ಸರಿಯಾದ ಸಮಯಕ್ಕೆ ಅಧಿಕಾರಿಗಳು ಮಾಡಿಕೊಡಲು ಸಿದ್ಧರಿದ್ದರೂ, ಸರ್ವರ್ ಸಮಸ್ಯೆಯಿಂದಾಗಿ ಕೆಲಸ ಕುಂಠಿತವಾಗುತ್ತಿದೆ ಎಂದು ನಾಗರಿಕರಾದ ರಾಜೇಶ್ ಶೆಟ್ಟಿ ಅಲೆವೂರು ಅವರು ಆರೋಪಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ನಗರ ಸಭೆ ಪೌರಾಯುಕ್ತ ಉದಯ್ ಕುಮಾರ್ ಅವರು, ಸರ್ವರ್ ಸಮಸ್ಯೆ ಬಗ್ಗೆ ರಾಜ್ಯದ ಇಲಾಖಾ ನಿರ್ದೇಶಕರಿಗೆ ಪತ್ರ ಬರೆಯಲಾಗಿದೆ. 3 ದಿನದಲ್ಲಿ ಸಮಸ್ಯೆ ಪರಿಹಾರವಾಗುತ್ತದೆ ಎಂದು ತಿಳಿಸಿದ್ದಾರೆ. ಸದ್ಯದ ಇ-ಖಾತೆಗೆ ಬಂದ ಅರ್ಜಿಗಳನ್ನು ಕಂಪ್ಯೂಟರ್ ನಲ್ಲಿ ಫೋಲ್ಡರ್ ಮಾಡಿ ಇಡುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.

Leave a Reply

Your email address will not be published.

error: Content is protected !!