ನ.17- ಪ್ರಮೋದ್ ಮುತಾಲಿಕ್ ಮತ್ತೆ ಕಾರ್ಕಳಕ್ಕೆ

ಕಾರ್ಕಳ ನ.16 : ಮುಂದಿನ ವಿಧಾನ ಸಭಾ ಚುನಾವಣೆಗೆ ಸ್ಪರ್ಧಿಸುವುದಾಗಿ ತಿಳಿಸಿ ಕುತೂಹಲ ಸೃಷ್ಟಿಸಿದ್ದ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರು ನ.17 ರಿಂದ ನ.19ರವರೆಗೆ 3 ದಿನಗಳ ಕಾಲ ಕಾರ್ಕಳಕ್ಕೆ ಭೇಟಿ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.

ಅವರು ಈ ಹಿಂದೆ ಮುಂಬರುವ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವುದಾಗಿ ತಿಳಿಸಿದ್ದರು ಆದರೆ ಯಾವ ಕ್ಷೇತ್ರದಿಂದ ಸ್ಪರ್ಧೆ ಎನ್ನುವ ವಿಚಾರ ಇನ್ನೂ ಅಂತಿಮವಾಗಿಲ್ಲ. ಈ ನಡುವೆ ಮುಂದಿನ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಈ ಹಂತದಲ್ಲಿ ಪ್ರಮೋದ್ ಮುತಾಲಿಕ್ ಅವರು ಪದೇ ಪದೇ ಕಾರ್ಕಳಕ್ಕೆ ಭೇಟಿ ನೀಡುತ್ತಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.

ಕಾರ್ಕಳ ಭೇಟಿಗೂ ಮುನ್ನ ಮಾಧ್ಯಮದವರ ಜತೆ ಮಾತನಾಡಿದ ಅವರು ಕಾರ್ಕಳದಲ್ಲಿ ಸ್ಪರ್ಧಿಸುವ ಕುರಿತು ಪ್ರತಿಕ್ರಿಯಿಸಿ, ಕಾರ್ಕಳದಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರಿಂದ ಉತ್ತಮ ಬೆಂಬಲ ಸಿಕ್ಕಿದೆ ಚುನಾವಣೆಗೆ ಕಾರ್ಕಳದಿಂದಲೇ ಸ್ಪರ್ಧಿಸಬೇಕೆಂದು ಕಾರ್ಯಕರ್ತರು ಒತ್ತಡ ಹೇರುತ್ತಿದ್ದಾರೆ. ಅಂತಹ ಸಂದರ್ಭ ಎದುರಾದರೆ ಕಾರ್ಕಳದಿಂದಲೇ ಸ್ಪರ್ಧಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.

ಹಾಗೂ ವಿಧಾನಸಭಾ ಚುನಾವಣೆಯ ಸ್ಪರ್ಧೆ ಕುರಿತು ಈಗಾಗಲೇ ಕಾರ್ಕಳ, ಪುತ್ತೂರು, ಉಡುಪಿ, ಶೃಂಗೇರಿ, ಜಮಖಂಡಿ, ತೇರದಾಳ ಹಾಗೂ ಧಾರವಾಡ ವಿಧಾನಸಭಾ ಕ್ಷೇತ್ರಗಳಲ್ಲಿ ಸರ್ವೇ ನಡೆಯುತ್ತಿದೆ. ಡಿಸೆಂಬರ್ ಮೊದಲ ವಾರದಲ್ಲಿ ರಾಜ್ಯ ಸಮಿತಿಯ ಸಭೆಯಲ್ಲಿ ನಾನು ಸ್ಪರ್ಧಿಸುವ ಕ್ಷೇತ್ರದ ಘೋಷಣೆಯಾಗಲಿದೆ ಎಂದು ಹೇಳಿದ್ದಾರೆ.

ಅಲ್ಲದೆ 25 ವಿಧಾನಸಭಾ ಕ್ಷೇತ್ರಗಳಿಗೆ ಹಿಂದೂ ಸಂಘಟನೆಗಳ ಬೆಂಬಲ ಪಡೆದು ಹಿಂದುತ್ವ ಪ್ರತಿಪಾದಕರಾದ ಸ್ವಾಮೀಜಿಗಳು ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು ಕಣಕ್ಕಿಳಿಸಲಾಗುವುದು ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!