ಲೋಕ ಅದಾಲತ್ ನಲ್ಲಿ ಇತ್ಯರ್ಥವಾದ ಪ್ರಕರಣಕ್ಕೆ ಮೇಲ್ಮನವಿಯಿಲ್ಲ: ಶಾಂತವೀರ ಶಿವಪ್ಪ

ಉಡುಪಿ ನ.12 (ಉಡುಪಿ ಟೈಮ್ಸ್ ವರದಿ) : ಲೋಕ ಅದಾಲತ್ ನಲ್ಲಿ ಇತ್ಯರ್ಥವಾದ ಪ್ರಕರಣಗಳಿಗೆ ನ್ಯಾಯಾಲಯದ ಡಿಕ್ರಿ ದೊರೆತ ಬಳಿಕ ಅನ್ಯ ಯಾವುದೇ ನ್ಯಾಯಾಲಯಗಳಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶವಿಲ್ಲ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಾಂತವೀರ ಶಿವಪ್ಪ ಹೇಳಿದ್ದಾರೆ.

ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಉಡುಪಿ ಜಿಲ್ಲಾ ನ್ಯಾಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಲೋಕ ಅದಾಲತ್ ಉದ್ಘಾಟಿಸಿ ಮಾತನಾಡಿದ ಅವರು, ರಾಜಿಯಾಗಬಹುದಾದ ಪ್ರಕರಣವನ್ನು ಕೋರ್ಟಿನ ಶಿಫಾರಸಿನಂತೆ ಮಧ್ಯಸ್ಥಿಕೆದಾರರು ಕಾನೂನು ಸೇವಾ ಪ್ರಾಧಿಕಾರದ ಮೂಲಕ ಇಬ್ಬರಿಗೂ ಸಮ್ಮತವಾಗುವಂತೆ ಇತ್ಯರ್ಥ ಮಾಡುತ್ತಿದ್ದು 25, 30ವರ್ಷಗಳಷ್ಟು ಹಳೆಯ ಪ್ರಕರಣವೂ ನ್ಯಾಯಾಲಯದಲ್ಲಿ ವಿಲೇವಾರಿ ಆಗುತ್ತಿದೆ. ಆಸ್ತಿಗಾಗಿ ಕಚ್ಚಾಡುವ ಅಣ್ಣ ತಮ್ಮಂದಿರು ವ್ಯಾಜ್ಯ ಮರೆತು ಸುಖವಾಗಿ ಬಾಳುವುದು ಲೋಕ ಅದಾಲತ್ತಿನ ಸಂಧಾನದಿಂದ ಸಾಧ್ಯ ಎಂದು ಹೇಳಿದರು.

ವರ್ಷಕ್ಕೆ 4 ರಿಂದ 6 ಬಾರಿ ಮೆಗಾ ಲೋಕ ಅದಾಲತ್ ದೇಶದಾದ್ಯಂತ ವಿವಿಧ ಕೋರ್ಟುಗಳಲ್ಲಿ ನಡೆಯುತ್ತಿದ್ದು ಕಕ್ಷಿದಾರರು ತಮ್ಮ ನಡುವಿನ ವೈಮನಸ್ಯ ಮರೆತು ಸೌಹಾರ್ದ ಜೀವನ ನಡೆಸಬೇಕು ಎಂದರು.

ಈ ವೇಳೆ ಉಡುಪಿ ವಕೀಲರ ಸಂಘದ ಅಧ್ಯಕ್ಷ ಬಿ. ನಾಗರಾಜ್ ಅವರು ಮಾತನಾಡಿ, ಲೋಕ ಅದಾಲತ್ ಯಶಸ್ಸಿನ ನಿಟ್ಟಿನಲ್ಲಿ ಕಕ್ಷಿದಾರರು ಮಾನಸಿಕವಾಗಿ ರಾಜಿಗೆ ಸಿದ್ಧರಾಗಬೇಕು. ರಾಜಿ ಪಂಚಾಯಿತಿಕೆಯಲ್ಲಿ ವಕೀಲರು ವಾದ ಮಂಡನೆ ಬದಲು ತಟಸ್ಥ ನೀತಿ ಅನುಸರಿಸಬೇಕು. ಕಕ್ಷಿದಾರರು, ವಕೀಲರಿಗೆ ರಾಜಿಯಾಗುವ ಪ್ರಕರಣ ಇದೆಂದು ನ್ಯಾಯಾಧೀಶರು ನಗುಮೊಗದಲ್ಲಿ ತಿಳಿಹೇಳಿದರೆ ಪ್ರಕರಣ ಅರ್ಧ ಇತ್ಯರ್ಥವಾದಂತೆ. ಕಕ್ಷಿದಾರನ ಸಂತೋಷ, ನ್ಯಾಯಕ್ಕಾಗಿ ವಕೀಲರು, ನ್ಯಾಯಾಧೀಶರೂ ಒಂದಿಷ್ಟು ತ್ಯಾಗ ಮಾಡಬೇಕು ಎಂದು ಹೇಳಿದರು.
ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ದಿನೇಶ್ ಹೆಗ್ಡೆ ಮಾತನಾಡಿ, ಇಬ್ಬರು ಕಕ್ಷಿದಾರರಿಗೂ ಗೆಲುವು ತಂದುಕೊಡುವ ಲೋಕ ಅದಾಲತ್ ಯಶಸ್ಸಿನಲ್ಲಿ ವಕೀಲರ ಪಾತ್ರ ಮಹತ್ತರ ಎಂದರು.

ಇದೇ ವೇಳೆ ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶರ್ಮಿಳಾ ಎಸ್. ಅವರು ಮಾತನಾಡಿ, ನ್ಯಾಯಾಲಯದಲ್ಲಿರುವ ಬಾಕಿ ಪ್ರಕರಣಗಳ ಹೊರೆ ತಗ್ಗಿಸುವುದು, ಗುಣಮಟ್ಟದ ನ್ಯಾಯ ಕಕ್ಷಿದಾರರಿಗೆ ಒದಗಿಸುವುದು ಲೋಕ ಅದಾಲತ್‍ನಿಂದ ಸಾಧ್ಯ. ಈ ನಿಟ್ಟಿನಲ್ಲಿ ವಾದಿ, ಪ್ರತಿವಾದಿಗಳು ತಮ್ಮ ಹಠ ಬಿಟ್ಟು, ದ್ವೇಷ ಮರೆತು ಉದಾರ ಮನಸ್ಸಿನಿಂದ ರಾಜಿ ಮಾಡಿಕೊಂಡರೆ ಸಮಯ, ಹಣದ ಜತೆಗೆ ಬದುಕಿನಲ್ಲಿ ನೆಮ್ಮದಿ, ಶಾಂತಿ ಹೊಂದಲು ಸಾಧ್ಯ ಎಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಉಡುಪಿ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ರೆನೋಲ್ಡ್ ಪ್ರವೀಣ್ ಕುಮಾರ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!