ಉಡುಪಿ ಜಿಲ್ಲೆಯ ಉಚ್ಚಿಲದಲ್ಲಿ ಕರಾವಳಿ ಜಿಲ್ಲೆಯ ಸಹಕಾರಿಗಳ ಶಕ್ತಿಪ್ರದರ್ಶನಕ್ಕೆ ವೇದಿಕೆ ಸಜ್ಜು

ಉಚ್ಚಿಲ ನ.12 (ಉಡುಪಿ ಟೈಮ್ಸ್ ವರದಿ) : 69ನೇ ಅಖಿಲ ಭಾರತ ಸಹಕಾರ ಸಪ್ತಾಹವನ್ನು ರಾಷ್ಟ್ರದಾದ್ಯಂತ ನವೆಂಬರ್ 14 ರಿಂದ 20ರವರೆಗೆ ಆಚರಿಸಲಾಗುತ್ತಿದೆ.

ಈ ಬಾರಿಯ ಸಹಕಾರಿ ಸಪ್ತಾಹದ ಧ್ಯೇಯ ವಾಕ್ಯ “ಭಾರತ 75 – ಸಹಕಾರ ಸಂಸ್ಥೆಗಳ ಬೆಳವಣಿಗೆ ಮತ್ತು ಮುಂದಿನ ಭವಿಷ್ಯ” ಎಂಬುದಾಗಿದೆ. ಅದರಂತೆ ಉಡುಪಿ ಜಿಲ್ಲೆಯಾದ್ಯಂತ 69ನೇ ಅಖಿಲ ಭಾರತ ಸಹಕಾರ ಸಪ್ತಾಹವನ್ನು, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಸಹಕಾರಿ ಇಲಾಖೆ ಹಾಗೂ ಜಿಲ್ಲೆಯ ವಿವಿಧ ಸಹಕಾರ ಸಂಸ್ಥೆಗಳ ಸಹಯೋಗದೊಂದಿಗೆ ಆಚರಿಸಲಾಗುತ್ತಿದೆ. ನ.14ರಂದು ಉಡುಪಿಜಿಲ್ಲೆಯ ಉಚ್ಚಿಲ ಮಹಾಲಕ್ಷ್ಮೀ ಸಭಾಂಗಣದಲ್ಲಿ ಸಹಕಾರ ಸಪ್ತಾಹದ ಉದ್ಘಾಟನೆ ನಡೆಯಲಿದೆ.

ಸಹಕಾರಿ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಬಲ್ಲ ಅಂಶಗಳ ಬಗ್ಗೆ ಹಕ್ಕೊತ್ತಾಯ:
ಕರಾವಳಿ ಜಿಲ್ಲೆಗಳ ಸಹಕಾರಿಗಳನ್ನು ಸಂಘಟಿಸಿಕೊಂಡು ಸಹಕಾರಿ ಕ್ಷೇತ್ರಕ್ಕೆ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳಿಂದ ಹೆಚ್ಚಿನ ಪ್ರಾತಿನಿಧ್ಯ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಚರ್ಚಿಸಲು ಮತ್ತು ಸಹಕಾರಿಗಳ ಶಕ್ತಿಪ್ರದರ್ಶನ ಮಾಡಿಕೊಂಡು ಸಹಕಾರಿ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಬಲ್ಲ ಅಂಶಗಳ ಬಗ್ಗೆ ಹಕ್ಕೊತ್ತಾಯ ಮಾಡುವ ನಿಟ್ಟಿನಲ್ಲಿ ಉಚ್ಚಿಲದಲ್ಲಿ ನಡೆಯುವ ಸಹಕಾರಿ ಸಪ್ತಾಹ ಶಕ್ತಿ ನೀಡಲಿದೆ ಎಂಬುದು ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಿ.ಜಯಕರ್ ಶೆಟ್ಟಿ ಇಂದ್ರಾಳಿ ಅವರ ಅಭಿಪ್ರಾಯವಾಗಿದೆ.

ಸಹಕಾರಿ ಕ್ಷೇತ್ರಕ್ಕೆ ಪ್ರಾತಿನಿಧ್ಯ ಕಲ್ಪಿಸುವ ನಿಟ್ಟಿನಲ್ಲಿ ಸಹಕಾರಿಗಳ ಸಮಾವೇಶ:
ವಿಧಾನಪರಿಷತ್, ರಾಜ್ಯಸಭೆಗಳಲ್ಲಿ ಸಹಕಾರಿ ಕ್ಷೇತ್ರಕ್ಕೆ ಪ್ರಾತಿನಿಧ್ಯ ಕಲ್ಪಿಸುವ ನಿಟ್ಟಿನಲ್ಲಿ ಸಹಕಾರಿಗಳ ಸಮಾವೇಶ ಜಿಲ್ಲೆಯ ಸಮಸ್ತ ಸಹಕಾರಿಗಳನ್ನು ಒಗ್ಗೂಡಿಸಿಕೊಂಡು ಸಂಘಟಿಸಲಾಗಿದ್ದು, ಸಹಕಾರಿ ಕ್ಷೇತ್ರಕ್ಕೆ ಅನುಕೂಲವಾಗುವಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಮನವಿ ಮಾಡಲಾಗುವುದು ಎನ್ನುತ್ತಾರೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮೀನುಮಾರಾಟ ಫೆಡರೇಶನ್ ಅಧ್ಯಕ್ಷ ಯಶ್‍ಪಾಲ್ ಎ.ಸುವರ್ಣ ಉಡುಪಿ

ಸಹಕಾರಿ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲು ಸರಕಾರದ ಮುಂದೆ ಮನವಿ:
ರಾಷ್ಟ್ರೀಕೃತ ಬ್ಯಾಂಕ್ ಗಳೊಂದಿಗೆ ಪೈಪೋಟಿ ನೀಡುತ್ತಾ ಜಿಲ್ಲೆಯ ನೂರಾರು ಸಹಕಾರಿ ಸಂಸ್ಥೆಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಸಹಕಾರಿ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲು ಸರಕಾರದ ಮುಂದೆ ಮನವಿ ಸಲ್ಲಿಸಲಾಗುವುದು ಎನ್ನುತ್ತಾರೆ ಡಿಸಿಸಿ ಬ್ಯಾಂಕ್ ನಿರ್ದೇಶಕ ದೇವಿಪ್ರಸಾದ್ ಶೆಟ್ಟಿ ಬೆಳಪು

ಸಹಕಾರ ರಥಯಾತ್ರೆ:
ಉಡುಪಿ ಜಿಲ್ಲೆಯಾದ್ಯಂತ ನವಂಬರ್ 14 ರಿಂದ ನವಂಬರ್ 20ರವರೆಗೆ ಸಹಕಾರ ತತ್ವಗಳು ಮತ್ತು ಸಹಕಾರ ವಿಚಾರಗಳನ್ನು ಸಾರ್ವಜನಿಕರಿಗೆ ತಿಳಿಯಪಡಿಸಲು ಸಹಕಾರ ರಥವನ್ನು ಹಳ್ಳಿ-ಹಳ್ಳಿಗಳಿಗೆ ಕಳುಹಿಸಲಾಗಿದ್ದು ಈ ಮೂಲಕ ಹಳ್ಳಿ ಹಳ್ಳಿಗೂ ಸಹಕಾರ ಕ್ಷೇತ್ರದ ಸರ್ವಾಂಗೀಣ ಪರಿಚಯ ಮತ್ತು ಆಧುನಿಕ ಸೇವೆಗಳ ಬಗ್ಗೆ ತಿಳಿಯಪಡಿಸಲಾಗುತ್ತದೆ.

800ಕ್ಕೂ ಅಧಿಕ ಸಹಕಾರ ಸಂಘಗಳಲ್ಲಿ ಧ್ವಜಾರೋಹಣ:
ನವಂಬರ್.14 ರಂದು ಬೆಳಿಗ್ಗೆ ಉಡುಪಿ ಜಿಲ್ಲೆಯ 800ಕ್ಕೂ ಮೇಲ್ಪಟ್ಟ ಸಹಕಾರ ಸಂಸ್ಥೆಗಳವರು ಬೆಳಿಗ್ಗೆ 7.30ಕ್ಕೆ ಸಹಕಾರ ಧ್ವಜಾರೋಹಣ ಮಾಡಿ ಸಪ್ತಾಹಕ್ಕೆ ಚಾಲನೆ ನೀಡಲಿದ್ದಾರೆ. ಈ ವೇಳೆ ಸಹಕಾರಿ ಸಂಘದ ಅಧ್ಯಕ್ಷರು, ನಿರ್ದೇಶಕರು ಮತ್ತು ನೌಕರರು ಸೇರಿ ಅವರವರ
ಸಂಸ್ಥೆಗಳಲ್ಲಿ ಸಹಕಾರ ಗೀತೆ ಮತ್ತು ನಾಡಗೀತೆಯನ್ನು ಹಾಡುವ ಮೂಲಕ ಸಹಕಾರಿ ಸಂಭ್ರಮವನ್ನು ಜನರಿಗೆ ತಲುಪಿಸಲಿದ್ದಾರೆ.

ಸಹಕಾರಿಗಳ ಬೃಹತ್ ವಾಹನ ರ್ಯಾಲಿ:
ಎಲ್ಲಾ ಸಹಕಾರಿ ಸಂಘಗಳ ಅಧ್ಯಕ್ಷರು, ನಿರ್ದೇಶಕರು ಮತ್ತು ನೌಕರರು ದ್ವಿ-ಚಕ್ರ ವಾಹನ ಮತ್ತು ನಾಲ್ಕು ಚಕ್ರ ವಾಹನಗಳಲ್ಲಿ ಸಹಕಾರ ಧ್ವಜವನ್ನು ಕಟ್ಟಿಕೊಂಡು ಬೃಹತ್ ಬೈಕ್ ರ್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ.ಶಿರೂರು-ಬೈಂದೂರು-ಕುಂದಾಪುರ-ಬ್ರಹ್ಮಾವರ-ಉಡುಪಿ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿಯ ಉದ್ಯಾವರ ಜಂಕ್ಷನ್ ನಲ್ಲಿ ಸೇರಲಿದ್ದಾರೆ. ಉದ್ಯಾವರದಲ್ಲಿ 9.00ಕ್ಕೆ ಸರಿಯಾಗಿ ಸರ್ವ ಸಹಕಾರಿಗಳಿಗೆ ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿದ್ದು, ಬಳಿಕ ಸಾವಿರಾರು ಮಂದಿ ಸಹಕಾರಿಗಳು ವಾಹನ ಜಾಥದೊಂದಿಗೆ ಶಿಸ್ತುಬದ್ಧವಾಗಿ ರಾಷ್ಟ್ರೀಯ ಹೆದ್ದಾರಿಯ ಮೂಲಕ ಸಾಗಿ ಮುಳೂರು ತಲುಪಲಿದ್ದಾರೆ. ಇದೇ ವೇಳೆ ಕಾರ್ಕಳ ತಾಲೂಕಿನ ಸಮಸ್ತ ಸಹಕಾರಿಗಳು ಬೆಳ್ಮಣ್ ಮಾರ್ಗವಾಗಿ ಉಚ್ಚಿಲದ ಸಭಾಂಗಣಕ್ಕೆ ತಮ್ಮ ದ್ವಿ-ಚಕ್ರ ಮತ್ತು ನಾಲ್ಕು ಚಕ್ರ ವಾಹನದೊಂದಿಗೆ ಮತ್ತು ಜಿಲ್ಲೆಯ ಸಮಸ್ತ ನವೋದಯ ಸ್ವ-ಸಹಾಯ ಸದಸ್ಯರು ಉಚ್ಚಿಲದ ತುಂಬೆ ಕರ್ಕೇರ ಸಭಾಭವನದಲ್ಲಿ ಸೇರುವವರಿದ್ದಾರೆ ಅಲ್ಲಿ ಉಪಾಹಾರ ಪೂರೈಸಿ ಮೆರವಣಿಗೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಮುಳೂರಿನಲ್ಲಿ ಬೆಳಿಗ್ಗೆ 10 ಗಂಟೆಗೆ ಉಡುಪಿಯಿಂದ ಹೊರಟ ಮೆರವಣಿಗೆಯೊಂದಿಗೆ ಜತೆಗೂಡಲಿದ್ದಾರೆ.

ಸಹಕಾರಿಗಳ ಭವ್ಯ ಮೆರವಣಿಗೆ:
ಸಹಕಾರಿಗಳ ಭವ್ಯ ಮೆರವಣಿಗೆಯಲ್ಲಿ ಆಕರ್ಷಕ ಸ್ತಬ್ದ ಚಿತ್ರಗಳು, ವಾಹನ ಜಾಥ ಮತ್ತು ಮೆರವಣಿಗೆಯ ಮೂಲಕ ಸಮಸ್ತ ಸಹಕಾರಿ ಗಣ್ಯರನ್ನು ಕೂಡಿಕೊಂಡು ಪೇಜಾವರ ಮಠದ ಶ್ರೀ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರೊಂದಿಗೆ, ಅಭಿನಂದಿಸಲ್ಪಡುವ ಸಹಕಾರ ರತ್ನ ಡಾ|ಎಂ.ಎನ್.ರಾಜೇಂದ್ರಕುಮಾರ್ ಇವರೆಲ್ಲರನ್ನು ಮೆರವಣಿಗೆಯಲ್ಲಿ ಉಚ್ಚಿಲದ ಮಹಾಲಕ್ಷ್ಮೀ ದೇವಸ್ಥಾನದ ಸಭಾಭವನಕ್ಕೆ ಅದ್ಧೂರಿ ಮೆರವಣಿಗೆಯೊಂದಿಗೆ ಕರೆತರಲಾಗುವುದು.

ಡಾ|ಎಂ.ಎನ್.ರಾಜೇಂದ್ರಕುಮಾರ್ ಅಭಿನಂದನೆ, ಸಹಕಾರ ಸಪ್ತಾಹದ ಉದ್ಘಾಟನೆ:
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಬೆಂಗಳೂರು, ಉಡುಪಿ ಜಿಲ್ಲಾ ಸಹಕಾರ ಯೂನಿಯನ್, ಉಡುಪಿ, ದಕ್ಷಿಣಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್, ಮಂಗಳೂರು, ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್, ಮಂಗಳೂರು, ದಕ್ಷಿಣಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ, ಮಂಗಳೂರು, ದ.ಕ. ಹಾಗೂ ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್, ಮಂಗಳೂರು, ಮಹಾಲಕ್ಷ್ಮೀ ಕೋ-ಆಪರೇಟಿವ್ ಬ್ಯಾಂಕ್, ಉಡುಪಿ ಹಾಗೂ ಉಡುಪಿ ಜಿಲ್ಲೆಯ ಅರ್ಬನ್ ಕೋ-ಆಪರೇಟಿವ್ ಬ್ಯಾಂಕುಗಳು, ಸಹಕಾರ ಇಲಾಖೆ ಉಡುಪಿ ಜಿಲ್ಲೆ ಮತ್ತು ಉಡುಪಿ ಜಿಲ್ಲೆಯ ಸಮಸ್ತ ಸಹಕಾರ ಸಂಘಗಳ / ಸೌಹಾರ್ದ ಸಹಕಾರಿಗಳ ನೇತೃತ್ವದೊಂದಿಗೆ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಅಧ್ಯಕ್ಷರು, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ, ಬೆಂಗಳೂರು, ಅಧ್ಯಕ್ಷರು, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ಮಂಗಳೂರು ಇವರು ಪೂರ್ವಾಹ್ನ ಗಂಟೆ 10.30.ಕ್ಕೆ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಸಭಾಂಗಣದಲ್ಲಿ ಉದ್ಘಾಟಿಸಲಿದ್ದಾರೆ. ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಪೇಜಾವರ ಮಠ, ಉಡುಪಿ ಇವರು ಆಶೀರ್ವಚನ ನೀಡಲಿದ್ದಾರೆ. ಬಿ.ಜಯಕರ ಶೆಟ್ಟಿ ಇಂದ್ರಾಳಿ ಅಧ್ಯಕ್ಷರು, ಜಿಲ್ಲಾ ಸಹಕಾರಿ ಯೂನಿಯನ್, ಉಡುಪಿನಿರ್ದೇಶಕರು, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಬೆಂಗಳೂರು ಇವರು ಅಧ್ಯಕ್ಷತೆ ವಹಿಸಲಿರುವರು. ಇದೇ ವೇಳೆ ಸಹಕಾರ ರತ್ನ ಡಾ| ಎಂ.ಎನ್.ರಾಜೇಂದ್ರಕುಮಾರ್ ರವರ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಸನ್ಮಾನ್ಯ ಶೋಭಾ ಕರಂದ್ಲಾಜೆ, ಕೃಷಿ ಮತ್ತು ರೈತರ ಕಲ್ಯಾಣ ಇಲಾಖಾ ರಾಜ್ಯ ಸಚಿವೆ, ಭಾರತ ಸರ್ಕಾರ, ಬಿ.ವೈ ರಾಘವೇಂದ್ರ, ಸಂಸದರು, ಶಿವಮೊಗ್ಗ ಲೋಕಸಭಾ ಕ್ಷೇತ್ರ, ಎಸ್.ಅಂಗಾರ, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಸಾರಿಗೆ ಇಲಾಖೆ, ಕರ್ನಾಟಕ ಸರ್ಕಾರ, ವಿ. ಸುನಿಲ್ ಕುಮಾರ್, ಇಂಧನ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಚಿವರು, ಕರ್ನಾಟಕ ಸರ್ಕಾರ, ಕೋಟ ಶ್ರೀನಿವಾಸ ಪೂಜಾರಿ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು, ಕರ್ನಾಟಕ ಸರ್ಕಾರ, ಡಾ| ಜಿ.ಶಂಕರ್, ಶಂಕರ್ ಫ್ಯಾಮಿಲಿ ಟ್ರಸ್ಟ್, ಅಂಬಲಪಾಡಿ, ಕೆ.ರಘುಪತಿ ಭಟ್ ಶಾಸಕರು, ಉಡುಪಿ ವಿಧಾನಸಭಾ ಕ್ಷೇತ್ರ, ಲಾಲಾಜಿ ಮೆಂಡನ್ ಶಾಸಕರು, ಕಾಪು ವಿಧಾನಸಭಾ ಕ್ಷೇತ್ರ, ಹಾಲಾಡಿ ಶ್ರೀನಿವಾಸ ಶೆಟ್ಟಿ ಶಾಸಕರು, ಕುಂದಾಪುರ ವಿಧಾನಸಭಾ ಕ್ಷೇತ್ರ, ಸುಕುಮಾರ್ ಶೆಟ್ಟಿ ಶಾಸಕರು, ಬೈಂದೂರು ವಿಧಾನಸಭಾ ಕ್ಷೇತ್ರ, ಮಂಜುನಾಥ ಭಂಡಾರಿ, ಕರ್ನಾಟಕ ವಿಧಾನ ಪರಿಷತ್ ಸದಸ್ಯರು, ಕೆ.ಜಯಪ್ರಕಾಶ್ ಹೆಗ್ಡೆ ಅಧ್ಯಕ್ಷರು, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ, ವಿನಯ ಕುಮಾರ್ ಸೊರಕೆ, ಮಾಜಿ ಸಚಿವರು, ಕರ್ನಾಟಕ ಸರ್ಕಾರ, ಡಾ.ದೇವಿಪ್ರಸಾದ್ ಶೆಟ್ಟಿ, ನಿರ್ದೇಶಕರು, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ, ಬೆಂಗಳೂರು, ಯಶ್‍ ಪಾಲ್ ಸುವರ್ಣ, ಅಧ್ಯಕ್ಷರು, ದ.ಕ ಹಾಗೂ ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್, ಜಯ ಸಿ.ಕೋಟ್ಯಾನ್ ಬೆಳ್ಳಂಪಳ್ಳಿ, ಅಧ್ಯಕ್ಷರು, ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನ, ಐಕಳ ಹರೀಶ್ ಶೆಟ್ಟಿ, ಅಧ್ಯಕ್ಷರು, ಜಾಗತಿಕ ಬಂಟರ ಸಂಘಗಳ ಒಕ್ಕೂಟ ರಿ., ಮಂಗಳೂರು, ಮಂಜುನಾಥ ಎಸ್.ಕೆ, ನಿರ್ದೇಶಕರು, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ, ಬೆಂಗಳೂರು, ಕೆ.ಪಿ ಸುಚರಿತ ಶೆಟ್ಟಿ, ಅಧ್ಯಕ್ಷರು, ದ.ಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿ, ಮಂಗಳೂರು, ಕಾಪು ದಿವಾಕರ ಶೆಟ್ಟಿ, ಇವರು ಉಪಸ್ಥಿತರಿರುವರು.

Leave a Reply

Your email address will not be published. Required fields are marked *

error: Content is protected !!