ತಕ್ಷಣ ಉಕ್ರೇನ್ ತೊರೆಯುವಂತೆ ಭಾರತೀಯರಿಗೆ ಸೂಚನೆ-ರಾಯಭಾರ ಕಚೇರಿ
ಹೊಸದಿಲ್ಲಿ ಅ.20 : “ಉಕ್ರೇನ್ ದೇಶದಾದ್ಯಂತ ಭದ್ರತಾ ಸ್ಥಿತಿ ಹದಗೆಡುತ್ತಿರುವ ಹಿನ್ನೆಲೆಯಲ್ಲಿ ಉಕ್ರೇನ್ ನಲ್ಲಿರುವ ಎಲ್ಲಾ ಭಾರತೀಯರು ತಕ್ಷಣವೇ ಸ್ವದೇಶಕ್ಕೆ ಮರಳುವಂತೆ ಭಾರತೀಯ ರಾಯಭಾರ ಕಚೇರಿ ಸೂಚನೆ ನೀಡಿದೆ.
ಈ ಬಗ್ಗೆ ಟ್ವೀಟ್ ಮೂಲಕ ಮಾಹಿತಿ ನೀಡಿರುವ ಉಕ್ರೇನ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿ, ಉಕ್ರೇನ್ ನಲ್ಲಿ ಹಡಗೆಡುತ್ತಿರುವ ಭದ್ರತಾ ಪರಿಸ್ಥಿತಿ ಹಾಗೂ ಸಂಘರ್ಷ ಉಲ್ಬಣಿಸಿದ ಹಿನ್ನೆಲೆಯಲ್ಲಿ ಉಕ್ರೇನ್ ಗೆ ಪ್ರಯಾಣ ಬೆಳೆಸದಂತೆ ಭಾರತದ ಎಲ್ಲಾ ನಾಗರಿಕರಿಗೆ ಸೂಚನೆ ನೀಡಲಾಗಿದೆ. ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಉಕ್ರೇನ್ ನಲ್ಲಿರುವ ಎಲ್ಲಾ ಭಾರತೀಯರು ತಕ್ಷಣವೇ ಲಭ್ಯವಾಗುವ ಮಾರ್ಗಗಳ ಮೂಲಕ ದೇಶ ತೊರೆಯಬೇಕು ಎಂದು ತಿಳಿಸಲಾಗಿದೆ.
ಉಕ್ರೇನ್ ನ ನಾಲ್ಕು ಪ್ರದೇಶಗಳಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮಿಲಿಟರಿ ಕಾನೂನು ಜಾರಿಗೊಳಿಸಿದ ಬೆನ್ನಲ್ಲೇ ಭಾರತೀಯ ರಾಯಭಾರ ಕಚೇರಿ ಈ ಸಲಹೆ ನೀಡಿದೆ. ಅಂತೆಯೇ ಖೆರ್ಸಾನ್ ಅಕ್ರಮಿತ ಪ್ರದೇಶದಲ್ಲಿ ಸಿಲುಕಿಕೊಂಡಿದ್ದ ಕೆಲ ನಾಗರಿಕರು ಹಲ್ಲೆ ಭೀತಿಯ ಹಿನ್ನೆಲೆಯಲ್ಲಿ ಪಟ್ಟಣವನ್ನು ತೊರೆದು ದೋಣಿಗಳಲ್ಲಿ ಸಾಗುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.