ಕಾಂತಾರ ಚಿತ್ರದ ವಿರುದ್ಧ ಹೇಳಿಕೆಗಳಿಗೆ ಯಾರು ಉತ್ತರ ನೀಡಬೇಕೋ ಅವರು ನೀಡುತ್ತಾರೆ-ರಿಷಬ್ ಶೆಟ್ಟಿ
ಬೆಂಗಳೂರು ಅ.20 : ರಿಷಬ್ ಶೆಟ್ಟಿ ಅವರ ಕಾಂತಾರ ಚಿತ್ರದ ಭರ್ಜರಿ ಯಶಸ್ಸಿನ ನಡುವೆ ಚಿತ್ರದಲ್ಲಿ ತೋರಿಸಲಾದ ದೈವಾರಾಧನೆ ಬಗ್ಗೆ ಕೆಲವೊಂದು ಅಪಸ್ವರಗಳೂ ಕೇಳಿ ಬರುತ್ತಿದ್ದು ಇದಕ್ಕೆಲ್ಲಾ ನಟ-ನಿರ್ದೇಶಕ ರಿಷಬ್ ಶೆಟ್ಟಿ ಅವರು ತಕ್ಕ ಪ್ರತಿಕ್ರಿಯೆ ನೀಡಿದ್ದಾರೆ.
ಇತ್ತೀಚೆಗೆ ಕಾಂತಾರ ಚಿತ್ರ ತೆಲುಗಿನಲ್ಲೂ ಡಬ್ ಆಗಿ ಹೈದರಬಾದ್ ನಲ್ಲಿ ತೆರೆಕಂಡಿದ್ದು ಅಲ್ಲೂ ಚಿತ್ರ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಈ ನಡುವೆ ಹೈದರಬಾದ್ ನಲ್ಲಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ನಟ ಚೇತನ್ ಅವರ ಭೂತಕೋಲ ದೈವಾರಾಧನೆ ಸಂಸ್ಕೃತಿ ಅಲ್ಲ ಎಂಬ ಹೇಳಿಕೆ ಸೇರಿದಂತೆ ಚಿತ್ರ ಬಗ್ಗೆ ವಿರುದ್ಧವಾಗಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಭೂತಕೋಲ, ದೈವಾರಾಧನೆ ಹಿಂದೂ ಸಂಸ್ಕೃತಿ ಅಲ್ಲ, ಚಿತ್ರದಲ್ಲಿ ದೈವಾರಾಧನೆಯನ್ನು ಸರಿಯಾಗಿ ತೋರಿಸಿಲ್ಲ ಎಂಬ ಹೇಳಿಕೆಗಳಿಗೆ ಅವರು ನೋ ಕಮೆಂಟ್ಸ್ ಎಂದಿದ್ದಾರೆ.
ಆ ಬಳಿಕ ಮಾತನಾಡಿದ ಅವರು, ನಾನು ಈ ಚಿತ್ರ ಮಾಡುವಾಗ ಪ್ರತಿಯೊಂದ ವಿಷಯದ ಬಗ್ಗೆಯೂ ಜಾಗರೂಕತೆಯಿಂದ ನೋಡಿಕೊಂಡಿದ್ದೇನೆ. ನಾವು ಈ ಸಂಪ್ರದಾಯವನ್ನು ಪಾಲಿಸುವ ಕರಾವಳಿಯಿಂದಲೇ ಬಂದಿರುವವರು. ಈ ರೀತಿ ಕಥೆ ಹೇಳುವಾಗ ಆ ದೈವವನ್ನು ನಂಬಿರುವವರಿಗೆ ಅದನ್ನು ಆರಾಧಿಸುವವರಿಗೆ ಯಾವುದೇ ರೀತಿಯಲ್ಲೂ ಮನಸ್ಸಿಗೆ ನೋವಾಗಬಾರದು ಅವರ ನಂಬಿಕೆಗೆ ಧಕ್ಕೆ ಆಗಬಾರದು ಎಂಬ ಕಾರಣದಿಂದ ಈ ದೈವದ ಆರಾಧಕರನ್ನು ಜೊತೆಗೆ ಇಟ್ಟುಕೊಂಡು ಕೆಲಸ ಮಾಡಿದ್ದೇನೆ. ಚಿತ್ರದ ಪ್ರತಿಯೊಂದು ಶಾಟ್ ನ್ನು ಕೂಡಾ ಅವರಿಗೆ ತೋರಿಸಿ ಅದರ ಬಗ್ಗೆ ಅಭಿಪ್ರಾಯ ಸಲಹೆ ಕೇಳಿ ಪಡೆದಿದ್ದೇನೆ ಎಂದು ಹೇಳಿದರು.
ನಾನೂ ಚಿಕ್ಕ ವಯಸ್ಸಿನಿಂದಲೂ ದೈವಾರಾಧನೆ ನೋಡಿದ್ದೇನೆ ಅದನ್ನು ನಂಬುತ್ತೇನೆ. ನಾನು ಕಾಂತಾರವನ್ನು ಪ್ರೇಕ್ಷಕರಿಗಾಗಿ ಮಾಡಿದ್ದೇನೆ. ಇದು ಪ್ರೇಕ್ಷಕರ ಸಿನಿಮಾ ಅವರು ಅದನ್ನು ಎಲ್ಲಿಗೆ ಕೊಂಡುಹೋಗಬೇಕೋ ಅಲ್ಲಿಗೆ ಕೊಂಡು ಹೋಗುತ್ತಿದ್ದಾರೆ. ಆದರೆ ನನ್ನ ಚಿತ್ರದ ದೈವಾರಾಧನೆ ಬಗ್ಗೆ ಅದು ಸರಿ-ತಪ್ಪು ಎಂದು ಮಾತನಾಡುವ ಅರ್ಹತೆ ನನಗಿಲ್ಲ. ಅದನ್ನು ಕೇಳುವವರಿಗೆ ಆ ಅರ್ಹತೆ ಇದೆಯೋ ಇಲ್ಲವೋ ಗೊತ್ತಿಲ್ಲ. ಸಾವಿರಾರು ವರ್ಷಗಳಿಂದ ತಲೆಮಾರುಗಳಿಂದ ಈ ಸಂಸ್ಕೃತಿಯನ್ನು, ಈ ದೈವಾರಾಧನೆಯನ್ನು ಮಾಡಿಕೊಂಡು ಬರುತ್ತಿರುವವರಿದ್ದಾರೆ. ನನ್ನ ಚಿತ್ರದ ಬಗ್ಗೆ ಅವರು ಮಾತನಾಡಬೇಕು ಆಗಲೆ ಅದಕ್ಕೆ ಅರ್ಥ ಸಿಗುತ್ತದೆ. ನಾವು ಮಾತನಾಡಿದರೆ ತಪ್ಪಾಗುತ್ತದೆ ಎಂದರು.
ಹಾಗೂ ನಾನು ಯಾರಿಗೂ ನಾನು ಉತ್ತರ ನೀಡಲ್ಲ. ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡುವ ಅಗತ್ಯ ಇಲ್ಲ. ಸಮಸ್ಯೆ ಇದ್ದರೆ ಅದಕ್ಕೆ ಸಂಬಂಧ ಪಟ್ಟವರು ಮಾತನಾಡುತ್ತಾರೆ. ನೀವು ಆರಾಮವಾಗಿರಿ ಚಿತ್ರದ ಬಗ್ಗೆ, ಹೇಳಿಕೆಗಳಿಗೆ ಯಾರು ಉತ್ತರ ನೀಡಬೇಕೋ ಅವರು ನೀಡುತ್ತಾರೆ. ನವ್ಯಾಕೆ ತಲೆ ಕೆಡಿಸಿಕೊಳ್ಳಬೇಕು ಎಂದು ಹೇಳಿದರು.
ವಿಶೇಷ ಅಂದ್ರೆ ತೆಲುಗು ಸುದ್ದಿ ವಾಹಿನಿಯ ಸಂದರ್ಶನದಲ್ಲಿ ರಿಷಬ್ ಶೆಟ್ಟಿ ಅವರು ಸಂದರ್ಶನದುದ್ದಕ್ಕೂ ಕನ್ನದಲ್ಲೇ ಮಾತನಾಡಿ ಕನ್ನಡ ಪ್ರೇಮವನ್ನು ಮೆರೆದಿದ್ದಾರೆ.
ಸತ್ಯವಾದ ಮಾತು : ಎಲ್ಲರ ಬೇಕೆ ಟಿಪ್ಪಣಿಗಳಿಗೆ ಉತ್ತರ ಕೊಡುವ ಅಗತ್ಯವಿಲ್ಲ. ಕೆಲವರು ಸುದ್ದಿಯಲ್ಲಿರಲು ಅನಗತ್ಯವಾದ ವಿವಾದ ಹುಟ್ಟುಹಾಕುತ್ತಾರೆ..ಅವೆಲ್ಲವಕ್ಕೂ ಉದಾಸೀನ ಮಾಡಿ ಸುಮ್ಮನಿರುವುದು ಲೇಸು.. ಇತ್ತೀಚಿಗೆ ತಮಿಳು ನಟರೊಬ್ಬರೂ ಹೀಗೇ ಹೇಳಿದ್ದರು. ಅವರವರ ಅಭಿಪ್ರಾಯ ಅವರು ಹೇಳಲಿ