ಭರ್ಜರಿ ಜಯಭೇರಿಯೊಂದಿಗೆ ಮಲ್ಲಿಕಾರ್ಜುನ ಖರ್ಗೆಗೆ ‘ಕೈ’ ಪಕ್ಷದ ಸಾರಥ್ಯ

ಹೊಸದಿಲ್ಲಿ, ಅ.19 : ಕಾಂಗ್ರೆಸ್ ನ ಅಧ್ಯಕ್ಷ ಸ್ಥಾನದ ಚುನಾಚಣಾ ರೇಸ್ ನಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಅತೀ ಹೆಚ್ಚು ಮತಗಳ ಮೂಲಕ ವಿಜಯೀಯಾಗಿದ್ದಾರೆ. ಈ ಮೂಲಕ ಅತ್ಯಂತ ಹಳೇಯ ಪಕ್ಷದ ಸಾರಥ್ಯವನ್ನು ಮಲ್ಲಿಕಾರ್ಜುನ ಖರ್ಗೆ ಅವರು ಶೀಘ್ರದಲ್ಲೇ ವಹಿಸಲಿದ್ದಾರೆ.

ಇಂದು ಬೆಳಿಗ್ಗೆ 10 ಗಂಟೆ ವೇಳೆ ಮತ ಎಣಿಕೆ ಆರಂಭಗೊಂಡಿದ್ದು, ಇಬ್ಬರು ಸ್ಪರ್ಧಿಗಳ ತಲಾ ಐದು ಮಂದಿ ಏಜೆಂಟರ ಸಮ್ಮುಖದಲ್ಲಿ ಎಣಿಕೆ ಕಾರ್ಯ ನಡೆದಿದ್ದು, ಇಬ್ಬರು ಮೀಸಲು ಏಜೆಂಟರನ್ನು ನೇಮಕ ಮಾಡಲಾಗಿತ್ತು. ಸಂಜೆ ಮತ ಎಣಿಕೆ ಅಂತ್ಯಗೊಂಡ ವೇಳೆ ಮಲ್ಲಿಕಾರ್ಜುನ ಖರ್ಗೆ ಅವರು ಅತ್ಯಧಿಕ ಮತಗಳ ಮೂಲಕ ಗೆದ್ದಿದ್ದಾರೆ.

ಕಾಂಗ್ರೆಸ್ ಪಕ್ಷಕ್ಕೆ 24 ವರ್ಷ ಬಳಿಕ ಗಾಂಧಿ ಕುಟುಂಬದವರಲ್ಲದವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಚುನಾವಣಾ ಅಘಾಡದಲ್ಲಿ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಮತ್ತು ತಿರುವನಂತಪುರ ಸಂಸದ ಶಶಿ ತರೂರ್ ಅವರ ಮಧ್ಯೆ ನಡೆದ ಹಣಾಹಣಿ ನಡೆದಿತ್ತು. ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು 7,897 ಮತಗಳನ್ನು ಪಡೆದಿದ್ದು, ಪ್ರತಿಸ್ಪರ್ಧಿ ಶಶಿತರೂರ್ ಅವರು 1072 ಮತಗಳನ್ನು ಪಡೆದಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರು ಒಟ್ಟು 6825 ಮತಗಳ ಅಂತರದಿಂದ ಭರ್ಜರಿ ಜಯ ಗಳಿಸಿದ್ದಾರೆ. ಈ ಮೂಲಕ ಇದೀಗ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ತೆಕ್ಕೆಗೆ ಸೇರಿದೆ.

ದಿಲ್ಲಿಯ ಎಐಸಿಸಿ ಪ್ರಧಾನ ಕಚೇರಿಯೂ ಸೇರಿದಂತೆ ದೇಶಾದ್ಯಂತ ಒಟ್ಟು 68 ಕೇಂದ್ರಗಳಲ್ಲಿ ಅ.17 ರಂದು ಬೆಳಿಗ್ಗೆ 10 ಗಂಟೆಗೆ ಮತದಾನ ಪ್ರಕ್ರಿಯೆ ಆರಂಭಗೊಂಡಿತ್ತು. ಒಟ್ಟು 9915 ಪ್ರತಿನಿಧಿಗಳ ಪೈಕಿ 9,500 ಪ್ರತಿನಿಧಿಗಳು ಮತ ಚಲಾಯಿಸಿದ್ದು, ಶೇ. 96ರಷ್ಟು ಮತದಾನವಾಗಿತ್ತು.

137 ವರ್ಷಗಳ ಪಕ್ಷದ ಸುಧೀರ್ಘ ಇತಿಹಾಸದಲ್ಲಿ ಪಕ್ಷದ ಅಧ್ಯಕ್ಷರ ಹುದ್ದೆಗೆ ಚುನಾವಣೆ ನಡೆದಿರುವುದು ಇದು ಆರನೇ ಬಾರಿ. 1998ರಲ್ಲಿ ಸೋನಿಯಾಗಾಂಧಿ ಜಿತೇಂದ್ರ ಪ್ರಸಾದ್ ಅವರನ್ನು ಪರಾಭವಗೊಳಿಸಿದ್ದರು. ಇವರು 2017ರ ಡಿಸೆಂಬರ್ ವರೆಗೂ ಆ ಹುದ್ದೆಯಲ್ಲಿ ಮುಂದುವರಿದಿದ್ದರು. ಬಳಿಕ ಅತ್ಯುನ್ನತ ಹುದ್ದೆಯ ಜವಾಬ್ದಾರಿಯನ್ನು ರಾಹುಲ್ ಗಾಂಧಿಯವರಿಗೆ ವಹಿಸಿದ್ದರು. ಆದಾಗ್ಯೂ 2019ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೀನಾಯ ಸೋಲು ಅನುಭವಿಸಿದ ಬಳಿಕ ರಾಹುಲ್ ಗಾಂಧಿ ರಾಜೀನಾಮೆ ನೀಡಿದ್ದರು.

Leave a Reply

Your email address will not be published. Required fields are marked *

error: Content is protected !!