ನೂತನ ತಾಲೂಕುಗಳ ಮೂಲಭೂತ ಸೌಕರ್ಯಕ್ಕೆ ಹಣಕಾಸಿನ ನೆರವು: ಬೊಮ್ಮಾಯಿ

ಹೆಬ್ರಿ, ಆಗಸ್ಟ್ 11: ರಾಜ್ಯದಲ್ಲಿ ನೂತವಾಗಿ ರಚನೆಯಾಗಿರುವ ತಾಲೂಕುಗಳಿಗೆ , ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸರಕಾರ ಬದ್ದವಾಗಿದ್ದು, ಇದಕ್ಕಾಗಿ ಹಣಕಾಸು ನೆರವಿನ ಘೋಷಣೆ ಮಾಡಲಾಗುವುದು ಎಂದು ರಾಜ್ಯದ ಗೃಹ ಸಚಿವ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಅವರು ಮಂಗಳವಾರ, ಹೆಬ್ರಿಯ ತಾಲೂಕು ಕಚೇರಿಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.


ರಾಜ್ಯದಲ್ಲಿ ನೂತನ ತಾಲೂಕುಗಳು ಅಸ್ಥಿತ್ವಕ್ಕೆ ಬಂದಿದ್ದರೂ ಸಹ ಪೂರ್ಣ ಪ್ರಮಾಣದಲ್ಲಿ ಅಧಿಕಾರಿಗಳ ನಿಯೋಜನೆ, ಇಲಾಖೆಗಳ ಆರಂಭ ಹಾಗೂ ಮೂಲಸೌಕರ್ಯಗಳ ಸಮಸ್ಯೆಯಿದ್ದು , ಇದಕ್ಕಾಗಿ ವಿಶೇಷ ಹಣಕಾಸಿನ ನೆರವು ನೀಡುವುದರ
ಮೂಲಕ ಹೊಸ ತಾಲೂಕುಗಳಲ್ಲಿ ಸಾರ್ವಜನಿಕರಿಗೆ ಸುಗಮವಾಗಿ ಸರಕಾರದ ಸೇವೆಗಳನ್ನು ಒದಗಿಸಲಾಗುವುದು ಎಂದು ಸಚಿವ ಬೊಮ್ಮಾಯಿ ತಿಳಿಸಿದರು.
ಹೆಬ್ರಿ ನೂತನ ತಾಲೂಕಿನಲ್ಲಿ ನೆಮ್ಮದಿ ಕೇಂದ್ರ ಆರಂಭಿಸುವ ಕುರಿತಂತೆ ಶೀಘ್ರದಲ್ಲಿ ಕ್ರಮ ಕೈಗೊಳ್ಳಲಾಗುವುದು, ಹೆಬ್ರಿಯ ಪೊಲೀಸ್ ಠಾಣೆಯನ್ನು ಸಂಪೂರ್ಣ ಸುಸಜ್ಜಿತಗೊಳಿಸಲಾಗುವುದು, ವಿಶೇಷ ಪ್ರಕರಣವೆಂದು ಪರಿಗಣಿಸಿ ಹೊಸ ಅಗ್ನಿಶಾಮಕ
ಠಾಣೆಯನ್ನು ಮಂಜೂರು ಮಾಡಲಾಗುವುದು ಹಾಗೂ ಸೀತಾನದಿ ಏತ ನೀರಾವರಿ ಯೋಜನೆ ಕುರಿತಂತೆ ಪರಿಶೀಲಿಸಲಾಗುವುದು ಎಂದು ಬೊಮ್ಮಾಯಿ ಹೇಳಿದರು.
ಕಾರ್ಕಳ ಶಾಸಕ ಸುನೀಲ್ ಕುಮಾರ್ ಹೆಬ್ರಿ ನೂತನ ತಾಲೂಕಿಗೆ ಅಗತ್ಯವಾಗಿ ಬೇಕಾಗಿರುವ ಸೌಲಭ್ಯಗಳನ್ನು ಶೀಘ್ರದಲ್ಲಿ ಒದಗಿಸುವಂತೆ ಸಚಿವರಲ್ಲಿ ಕೋರಿದರು.


ಇದೇ ಸಂದರ್ಭದಲ್ಲಿ ಸಚಿವರು 94ಸಿ ಹಕ್ಕುಪತ್ರಗಳನ್ನು ವಿತರಿಸಿ, ಸಾರ್ವಜನಿಕರ ವಿವಿಧ ಸಮಸ್ಯೆಗಳ ಕುರಿತು ಅಹವಾಲು ಸ್ವೀಕಾರ ಮಾಡಿದರು. ಕಾರ್ಯಕ್ರಮದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾಧಿಕಾರಿ ಜಿ.ಜಗದೀಶ್ , ಜಿಲ್ಲಾ ಪಂಚಾಯತ್ ಸಿಇಓ ಪ್ರೀತಿ ಗೆಹ್ಲೋತ್, ಎಸ್ಪಿ ವಿಷ್ಣುವರ್ಧನ್, ಜಿಲ್ಲಾ ಪಂಚಾಯತ್ ಸದಸ್ಯೆ ರೇಷ್ಮಾ ಉದಯಶೆಟ್ಟಿ, ಕಾರ್ಯ ನಿರ್ವಹಣಾಧಿಕಾರಿ ಮೇಜರ್ ಹರ್ಷ, ತಹಸೀಲ್ದಾರ್ ಮಹೇಶ್ಚಂದ್ರ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!