ನೆರೆ ಪರಿಹಾರ ಹಾಗೂ ಕೋವಿಡ್ ನಿಯಂತ್ರಣ ಕಾರ್ಯಗಳನ್ನು ಚುರುಕುಗೊಳಿಸಿ: ಬೊಮ್ಮಾಯಿ

ಉಡುಪಿ,ಆಗಸ್ಟ್ 11: ಪ್ರಕೃತಿ ವಿಕೋಪ ನೆರೆ ಕಾರ್ಯ ಹಾಗೂ ಕೋವಿಡ್-19 ನಿಯಂತ್ರಣ ಕಾರ್ಯಗಳನ್ನು ಅಧಿಕಾರಿಗಳು ಇಚ್ಛಾಶಕ್ತಿಯಿಂದ ಸವಾಲೆಂದು ಸ್ವೀಕರಿಸಿ ಚುರುಕಾಗಿ ಕೆಲಸ ಮಾಡಬೇಕೆಂದು ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಮಂಗಳವಾರ ರಜತಾದ್ರಿಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲೆಯ ಮಳೆಹಾನಿ ಕುರಿತು ಅಧಿಕಾರಿಗಳೊಂದಿಗಿನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ನೆರೆ ಪರಿಹಾರಗಳನ್ನು ಕೈಗೊಳ್ಳಲು ಗ್ರಾಮ ಪಂಚಾಯತ್ ಮಟ್ಟದಲ್ಲಿಯೇ ಅಧಿಕಾರಿಗಳನ್ನು ಒಳಗೊಂಡoತೆ ಸ್ಥಳೀಯ ಯುವ ಸ್ವಯಂ ಸೇವಕರನ್ನು ಸೇರಿಸಿಕೊಂಡು ಅವರಿಗೆ ತರಬೇತಿ ನೀಡಿ , ಗ್ರಾಮಮಟ್ಟದಲ್ಲಿಯೇ ವಿಪತ್ತು ನಿರ್ವಹಣಾ ಯೋಜನೆಯನ್ನು
ರೂಪಿಸಿ ಅದರನ್ವಯ ಪರಿಹಾರ ಕಾರ್ಯಗಳನ್ನು ಕೈಗೊಳ್ಳಬೇಕು ಎಂದರು.
ಸಮಿತಿಯ ಮೇಲಸ್ತುವಾರಿಯನ್ನು ತಾಲೂಕು ಮಟ್ಟದಲ್ಲಿ ತಾ.ಪಂ ಕಾರ್ಯ ನಿರ್ವಹಣಾಧಿಕಾರಿಗಳು, ಜಿಲ್ಲಾ ಮಟ್ಟದಲ್ಲಿ ಉಪಕಾರ್ಯದರ್ಶಿಗಳು ಮಾಡುವುದರೊಂದಿಗೆ, ಪ್ರತಿದಿನದ ವರದಿಯನ್ನು ಸಿದ್ದಪಡಿಸಬೇಕು ಎಂದರು.
ಪ್ರತೀ ಗ್ರಾ.ಪಂ ಗಳು ಭೌಗೋಳಿಕವಾಗಿ ವಿಭಿನ್ನವಾಗಿದ್ದು , ಅದರನ್ವಯ ಯೋಜನೆ ರೂಪಿಸಿ, ಇದರಿಂದ ಹೆಚ್ಚಿನ ಸಾವು ನೋವು ಜಾನುವಾರು ಮರಣ ಹಾಗೂ ಆಸ್ತಿ ಹಾನಿಯಗದಂತೆ ತಡೆಯಲು ಹಾಗೂ ಶೀಘ್ರದಲ್ಲಿ ತುರ್ತು ಪರಿಹರ ಕಾರ್ಯ
ಕೈಗೊಂಡು ಹೆಚ್ಚಿನ ಅನಾಹುತಗಳನ್ನು ತಪ್ಪಿಸಲು ಸಾಧ್ಯವಾಗಲಿದೆ ಎಂದರು.


ಇತ್ತೀಚಿನ ದಿನಗಳಲ್ಲಿ ಮಳೆಯ ಪ್ರಮಾಣವು ವಾಡಿಕೆಯನ್ವಯ ಆಗುತ್ತಿಲ್ಲ , ಸಾಧಾರಣ ಮಳೆ ಆಗುವ ಜಾಗದಲ್ಲಿ ಹೆಚ್ಚಿನ ಮಳೆಯಾಗುವ ಸಾದ್ಯತೆಯಿರುತ್ತದೆ ಇವುಗಳನ್ನು ಗಮನದಲ್ಲಿಟ್ಟುಕೊಂಡು ಕಾರ್ಯ ಪ್ರವೃತ್ತರಾಗಬೇಕು, ಇವುಗಳ ಜೊತೆಗೆ ಗಾಳಿಯ ವೇಗವು ಸಾಮಾನ್ಯವಾಗಿ ಗಂಟೆಗೆ 20 ಕಿಮೀ ಇದ್ದದ್ದು ಈಗ 50 ಕಿಮೀ ಹೆಚ್ಚು ಜೋರಾಗಿ ಬೀಸುತ್ತಿದ್ದು, ಇದರಿಂದ ಹೆಚ್ಚಿನ ಅನಾಹುತಗಳಾಗುತ್ತಿದ್ದು ಈ ಬಗ್ಗೆಯೂ ಗಮನಹರಿಸಬೇಕು.


ಅತಿಯಾದ ಮಳೆಯಿಂದಾಗಿ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳ ನಷ್ಠವುಂಟಾಗಿವೆ, ಮಣ್ಣಿನ ಸವಕಳಿ ಆಧರಿಸಿ , ಪ್ರಾಥಮಿಕ ಸರ್ವೇ ಮಾಡಿದಾಗ ಮಾತ್ರ ಅವರಿಗೆ ಸರಿಯಾದ ನಷ್ಠ ಪರಿಹಾರ ನೀಡಲು ಸಾಧ್ಯ , ಈ ಕಾರ್ಯವನ್ನು ಗ್ರಾಮ ಲೆಕ್ಕಿಗರು , ಪಿಡಿಓ ಗಳು ಹಾಗೂ ಕೃಷಿ ಹಾಗೂ ತೋಟಗಾರಿಕಾ ಅಧಿಕಾರಿಗಳು ಜಂಟಿ ಸರ್ವೇ ಕಾರ್ಯವನ್ನು ಆದುನಿಕ ತಂತ್ರಜ್ಞಾನ ಬಳಸಿ ಕೈಗೊಳ್ಳಬೇಕು ಆಗ ಮಾತ್ರ ಎನ್.ಡಿ.ಆರ್.ಎಫ್. ಮಾರ್ಗಸೂಚಿಯನ್ವಯ ಪರಿಹಾರ ನೀಡಲು ಸಾಧ್ಯವಾಗುತ್ತದೆ ಎಂದರು.


ಜಿಲ್ಲೆಯಲ್ಲಿ ತೋಟದಲ್ಲಿರುವ ವಾಸದ ಮನೆಗಳಿಗೆ ಹಾನಿಯಾದಾಗ ಅವುಗಳನ್ನು ಮನೆಹಾನಿ ಎಂದು ಪರಿಗಣಿಸಬೇಕು, ಮನೆ ಹಾನಿ ನಷ್ಠ ಪರಿಹಾರ ನೀಡುವಾಗ ಹಾನಿಯ ನಿಖರತೆ ಆಧರಿಸಿ ಮಾನವೀಯತೆಯಿಂದ ಪರಿಹಾರ ಮೊತ್ತವನ್ನು ನೀಡಲು
ಮುಂದಾಗಬೇಕು ಎಂದರು. ಜಿಲ್ಲೆಯಲ್ಲಿ ಈವರೆಗೆ 2115 ಮೀ ಸಮುದ್ರಕೊರೆತೆ ಸಂಭವಿಸಿದ್ದು, 18.95 ಕೋಟಿ ನಷ್ಠ ವಾಗಿದೆ, ಈ ಬಗ್ಗೆ ಅಂದಾಜುಪಟ್ಟಿ ತಯಾರಿಸಿ, ಶೀಘ್ರದಲ್ಲಿ ಸಲ್ಲಿಸುವಂತೆ ಹೇಳಿದ ಅವರು, ಮಳೆಯಿಂದ ಹಾನಿಯದ ರಸ್ತೆಗಳ ದುರಸ್ತಿ ಕಾರ್ಯ ಕೈಗೊಳ್ಳಲು ಅಂದಾಜು ಮೊತ್ತವನ್ನು , ಲೋಕೋಪಯೋಗಿ, ಪಂಚಾಯತ್ ರಾಜ್ , ಇಂಜಿನಿಯರಿoಗ್ ಹಾಗೂ ಸ್ಥಳೀಯ ಸಂಸ್ಥೆಗಳು ನೀಡಿದಲ್ಲಿ, ಅನುದಾನ ಬಿಡುಗಡೆಗೆ ಪ್ರಯತ್ನಿಸಲಾಗುವುದು ಎಂದರು.


ನೆರೆ ಸಂತ್ರಸ್ಥರಿಗೆ ಪುರ್ನವಸತಿ ಕೇಂದ್ರಗಳನ್ನು ತಾಲೂಕಿನಲ್ಲಿ 5 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲು , ಸ್ಥಳ ಗುರುತಿಸಬೇಕು , ಇವುಗಳು ನರೆಯ ನಂತರ ಇತರೆ ಕಾರ್ಯಗಳಿಗೆ ಸಹ ಬಳಸುವಂತೆ ಇರಬೇಕು ಎಂದರು. ಜಿಲ್ಲೆಯಲ್ಲಿನ ಕೋವಿಡ್ 19 ರೋಗಕ್ಕೆ ಸಂಬoದಿಸಿದoತೆ ಪ್ರತಿ ಒಂದು ಅಂಕಿ ಆಂಶಗಳನ್ನು ಪಡದು ಮಾತನಾಡಿದ ಅವರು, ಟೆಸ್ಟಿಂಗ್ ಹೆಚ್ಚು ಮಾಡುವಂತೆ ತಿಳಿಸಿದರು, ವೆಂಟಿಲೇಟರ್ ಬೆಡ್ ಗಳ ಸಂಖ್ಯೆ ಹೆಚ್ಚಿಸಬೇಕು ಎಂದು ಸೂಚನೆ ನೀಡಿ, ಉತ್ತಮ ಚಿಕಿತ್ಸೆ ನೀಡುವಂತೆ ತಿಳಿಸಿದರು.
ಶಾಸಕ ರಘುಪತಿಭಟ್ ಮಾತನಾಡಿ, ಮೇಳ ಹಾನಿಯಿಂದ ಮನೆ ಹಾನಿಯಾದವರಿಗೆ ಪರಿಹಾರದ ಹಣದ ಕಂತುಗಳನ್ನು ಶೀಘ್ರದಲ್ಲಿ ಬಿಡುಗಡೆ ಮಾಡಬೇಕು ಹಾಗೂ ಜಿಲ್ಲಾಸ್ಪತ್ರೆಯನ್ನು ಮೇಲ್ದರ್ಜೆಗೇರಿಸಬೇಕು ಎಂದು ಮನವಿ ಮಾಡಿದರು.


ಕಾರ್ಕಳ ಶಾಸಕ ಸುನೀಲ್ ಕುಮಾರ್ ಮಾತನಾಡಿ, 94 ಸಿ ಯಲ್ಲಿ ಮನೆ ಮಂಜೂರಾಗಿ, ಹಕ್ಕುಪತ್ರ ದೊರೆಕದೆ , ಇರುವ ಮನೆಗಳಿಗೆ ಮಳೆಯಿಂದ ಹಾನಿಯಾದಲ್ಲಿ ಅವರಿಗೂ ಸಹ ಪರಿಹಾರ ನೀಡುವಂತೆ ತಿಳಿಸಿದರು. ಸಭೆಯಲ್ಲಿ ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ, ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಶೆಟ್ಟಿ, ಜಿಲ್ಲಾಧಿಕಾರಿ ಜಿ ಜಗದೀಶ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೀತಿ ಗೆಹ್ಲೋತ್, ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು
ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!