ಸಿದ್ಧರಾಮಯ್ಯ ಓರ್ವ ನೈಜ ಭಯೋತ್ಪಾದಕ- ಕುಯಿಲಾಡಿ ಸುರೇಶ್

ಉಡುಪಿ, ಜೂ.6: ಸಿದ್ಧರಾಮಯ್ಯ ಓರ್ವ ನೈಜ ಭಯೋತ್ಪಾದಕ ಎಂದು ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಅವರು ಹೇಳಿದ್ದಾರೆ.

ದೇಶಭಕ್ತ ಸೇವಾ ಸಂಘಟನೆ ಆರ್.ಎಸ್.ಎಸ್ ಭಯೋತ್ಪಾದಕರು ಎಂದಿರುವ ಮಾಜಿ ಸಿ.ಎಂ. ಸಿದ್ಧರಾಮಯ್ಯ ಹೇಳಿಕೆಯನ್ನು ಖಂಡಿಸಿ ಪತ್ರಿಕಾ ಹೇಳಿಕೆ ಮೂಲಕ ಆಕ್ರೋಶ ವ್ಯಕ್ತಪಡಿಸಿರುವ ಅವರು, ತನ್ನ ಆಡಳಿತಾವಧಿಯಲ್ಲಿ ಅನೇಕ ಹಿಂದೂ ಕಾರ್ಯಕರ್ತರ ಮಾರಣ ಹೋಮ ನಡೆದರೂ ಸುಮ್ಮನಿದ್ದು, ಪಿ.ಎಫ್.ಐ., ಎಸ್.ಡಿ.ಪಿ.ಐ. ನಂತಹ ದೇಶ ವಿರೋಧಿ ಸಂಘಟನೆಗಳ ಕಾರ್ಯಕರ್ತರ ಪ್ರಕರಣಗಳನ್ನು ಹಿಂಪಡೆದು, ರಾಜ್ಯಾದ್ಯಂತ ವ್ಯವಸ್ಥಿತ ಪಿತೂರಿಯೊಂದಿಗೆ ಗಲಭೆ ಸೃಷ್ಠಿಸಲು ಮೂಲ ಕಾರಣರಾಗಿರುವ ಸಿದ್ಧರಾಮಯ್ಯ ಓರ್ವ ನೈಜ ಭಯೋತ್ಪಾದಕ ಎಂದು ಹೇಳಿದ್ದಾರೆ.

ಆನೆ ನಡೆದಾಡುವಾಗ ಶ್ವಾನಗಳು ಬೊಗಳುತ್ತಾ ದಿಕ್ಕೆಟ್ಟು ಓಡಿದಂತೆ ಆರ್.ಎಸ್.ಎಸ್ ಎಂಬ ಬೃಹತ್ ಸೇವಾ ಸಂಘಟನೆಯ ಬಗ್ಗೆ ಕ್ಷುಲ್ಲಕ ಮಾತನ್ನಾಡುವುದು ಬೌದ್ಧಿಕ ದಿವಾಳಿತನದ ಪರಮಾವಧಿಯಲ್ಲದೆ ಮತ್ತೇನಿಲ್ಲ. ಇದೆಲ್ಲದರ ಅರಿವಿದ್ದರೂ ಕೇವಲ ವೋಟ್ ಬ್ಯಾಂಕಿನ ದುರಾಸೆಯಿಂದ ಒಂದೇ ವರ್ಗದ ಓಲೈಕೆ ರಾಜಕಾರಣದ ಅಪೀಮನ್ನು ತಲೆಯೊಳಗೆ ತುಂಬಿಕೊಂಡಿರುವ ಸಿದ್ಧರಾಮಯ್ಯ ಭವಿಷ್ಯದಲ್ಲಿ ಚಡ್ಡಿ ಲಂಗೋಟಿ ಸುಡುವ ಕಾಯಕವನ್ನು ಆಯ್ದುಕೊಂಡಿರುವುದು ಹಾಸ್ಯಾಸ್ಪದ ಎಂದು ಟೀಕಿಸಿದ್ದಾರೆ.

ಸಿದ್ಧರಾಮಯ್ಯ ಹೆಸರಿಗೆ ಮಾತ್ರ ಸಮಾಜವಾದಿ, ಆಚರಣೆಯಲ್ಲಿ ಬರೇ ಮಜಾವಾದಿ. ನನ್ನ ಹೆಸರಲ್ಲೂ ರಾಮನಿದ್ದಾನೆ ಎಂಬ ಬೂಟಾಟಿಕೆಯ ಮಾತನ್ನಾಡುವ ಸಿದ್ಧರಾಮಯ್ಯ ವಾಸ್ತವಿಕವಾಗಿ ಹಿಂದುವೇ ಅಲ್ಲ. ಬೇಲ್ ಮೇಲೆ ತಿರುಗಾಡುತ್ತಿರುವ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಹಗರಣಗಳ ಸರಮಾಲೆಯಲ್ಲಿ ಸಿಲುಕಿ ಕಾನೂನಾತ್ಮಕ ಇ.ಡಿ. ವಿಚಾರಣೆಯನ್ನು ಎದುರಿಸುತ್ತಿರುವುದು ಕಾಂಗ್ರೆಸ್ಸಿಗೆ ನುಂಗಲಾರದ ತುತ್ತೆನಿಸಿದೆ. ಸಿದ್ದರಾಮಯ್ಯ ವರ್ತನೆಯು ಅವಕಾಶದ ಸದುಪಯೋಗವನ್ನು ಪಡೆದು ಕಾಂಗ್ರೆಸ್ ಪಕ್ಷವನ್ನು ಮುಗಿಸಿಯೇ ತೀರುತ್ತೇನೆ ಎಂಬಂತಿದೆ ಎಂದಿದ್ದಾರೆ.

ಕಾಂಗ್ರೆಸ್ ಪಕ್ಷದ ನಿರಂತರ ಸೋಲಿನಿಂದ ಕಂಗೆಟ್ಟು, ಡಿಕೆಶಿ ಜೊತೆಗಿನ ಒಳ ಜಗಳದಿಂದ ಮೂಲೆ ಗುಂಪಾಗುವ ಭಯದಿಂದ ಹತಾಶೆಗೊಂಡು ಮಾನಸಿಕ ಸ್ಥಿಮಿತ ಕಳೆದುಕೊಂಡಿರುವ ಸಿದ್ಧುಗೆ ತುರ್ತು ಚಿಕಿತ್ಸೆಯ ಅವಶ್ಯಕತೆ ಇದ್ದು, ಅದರ ವೆಚ್ಚವನ್ನು ಭರಿಸಲು ಜಿಲ್ಲಾ ಬಿಜೆಪಿ ಸಿದ್ದವಿದೆ ಎಂದಿರುವ ಕುಯಿಲಾಡಿ, ಕೇಸರಿ ಕಂಡರೆ ಮಾರುದ್ದ ಓಡುವ ಹಿಂದೂ ವಿರೋಧಿ ಸಿದ್ಧರಾಮಯ್ಯಗೆ ಆರ್.ಎಸ್.ಎಸ್ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ ಎಂದು ಪ್ರಶ್ನಿಸಿದ್ದಾರೆ.

ಜನರ ತೆರಿಗೆ ಹಣದಿಂದ ಒಂದೇ ವರ್ಗದ ಓಲೈಕೆಗಾಗಿ ಬಿಟ್ಟಿ ಭಾಗ್ಯಗಳನ್ನು ನೀಡಿ, ಖಜಾನೆಯನ್ನು ಬರಿದಾಗಿಸಿ ಅತಿ ಹೆಚ್ಚು ಸಾಲ ಮಾಡಿದ ಮುಖ್ಯಮಂತ್ರಿ ಎಂಬ ಕುಖ್ಯಾತಿಗೆ ಪಾತ್ರವಾಗಿರುವ ಸಿದ್ಧರಾಮಯ್ಯ ಒಡೆದು ಆಳುವ ನೀತಿಯಲ್ಲೂ ನಿಸ್ಸೀಮರು. ಸದಾ ಧರ್ಮ ಜಾತಿಗಳನ್ನು ಒಡೆಯುವ ಹುನ್ನಾರದಲ್ಲಿ ನಿರತರಾಗಿರುವ ಸಿದ್ಧರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಹೀನಾಯವಾಗಿ ಸೋತು ಬಾದಾಮಿಯಲ್ಲಿ ಬೆರಳೆಣಿಕೆ ಮತಗಳಿಂದ ಗೆದ್ದು ಕೊಂಚ ಮರ್ಯಾದೆ ಉಳಿಸಿಕೊಂಡಿದ್ದರೂ ತನ್ನ ಅಧಿಕ ಪ್ರಸಂಗಿತನದಿಂದಾಗಿ ಶಾಶ್ವತವಾಗಿ ಮೂಲೆಗುಂಪಾಗುವ ದಿನ ದೂರವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!