ಅಧಿಕ ಕೀಟನಾಶಕ, ರಾಸಾಯನಿಕ ಬಳಕೆ: ಭಾರತದ ಚಹಾ ತಿರಸ್ಕಾರ

ನವದೆಹಲಿ: ನಿಗದಿತ ಪ್ರಮಾಣಕ್ಕಿಂತಲೂ ಅತಿಯಾದ ಕೀಟನಾಶಕ ಮತ್ತು ರಾಸಾಯನಿಕ ಇರುವ ಹಿನ್ನೆಲೆಯಲ್ಲಿ ಅಂತರರಾಷ್ಟ್ರೀಯ ಮತ್ತು ದೇಶೀಯ ಖರೀದಿದಾರರು ಭಾರತದ ಚಹಾವನ್ನು ತಿರಸ್ಕರಿಸಿದ್ದಾರೆ ಎಂದು ‘ಭಾರತೀಯ ಚಹಾ ರಫ್ತುದಾರರ ಸಂಘ’ದ (ಐಟಿಇಎ) ಅಧ್ಯಕ್ಷ ಅಂಶುಮಾನ್ ಕನೋರಿಯಾ ಶುಕ್ರವಾರ ಹೇಳಿದ್ದಾರೆ.

ನೆರೆಯ ಶ್ರೀಲಂಕಾ ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿ, ವಿದೇಶಿ ಮಾರುಕಟ್ಟೆಯಲ್ಲಿ ಸಮಸ್ಯೆ ಎದುರಿಸುತ್ತಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಸೃಷ್ಟಿಯಾಗಿರುವ ನಿರ್ವಾತದ ಲಾಭ ಪಡೆದು, ಚಹಾದ ರಫ್ತನ್ನು ಹೆಚ್ಚಿಸುವತ್ತ ಭಾರತದ ‘ಟೀ ಬೋರ್ಡ್’ ಕಣ್ಣಿಟ್ಟಿದೆ. ಆದರೆ, ಕೀಟನಾಶಕ ಮತ್ತು ರಾಸಾಯನಿಕಗಳು ಹೆಚ್ಚಾಗಿರುವ ಕಾರಣದಿಂದಾಗಿ ಚಹಾ ತಿರಸ್ಕಾರಗೊಳ್ಳುತ್ತಿದ್ದು, ‘ಟೀ ಬೋರ್ಡ್‌’ನ ನಿರೀಕ್ಷೆಗೆ ತಣ್ಣೀರೆರಚಿದಂತಾಗಿದೆ.

‘ದೇಶದಲ್ಲಿ ಮಾರಾಟವಾಗುವ ಎಲ್ಲಾ ಬಗೆಯ ಚಹಾ ‘ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (ಎಫ್‌ಎಸ್‌ಎಸ್‌ಎಐ)’ ಮಾನದಂಡಗಳಿಗೆ ಅನುಗುಣವಾಗಿರಬೇಕು. ಆದರೆ, ಹೆಚ್ಚಿನ ಖರೀದಿದಾರರು ರಾಸಾಯನಿಕ ಅಂಶ ಅಧಿಕವಾಗಿರುವ ಚಹಾವನ್ನು ಖರೀದಿಸುತ್ತಿದ್ದಾರೆ‘ ಎಂದು ಕನೋರಿಯಾ ತಿಳಿಸಿದರು.

2021 ರಲ್ಲಿ ಭಾರತವು 195.90 ದಶಲಕ್ಷ ಕೆ.ಜಿ ಚಹಾವನ್ನು ರಫ್ತು ಮಾಡಿದೆ. ಭಾರತದ ಚಹಾಕ್ಕೆ ಕಾಮನ್‌ವೆಲ್ತ್ ರಾಷ್ಟ್ರಗಳು ಮತ್ತು ಇರಾನ್ ಪ್ರಮುಖ ಗ್ರಾಹಕ. ಈ ವರ್ಷ 300 ದಶಲಕ್ಷ ಕೆ.ಜಿ ಚಹಾವನ್ನು ರಫ್ತು ಮಾಡುವ ಗುರಿಯನ್ನು ‘ಟೀ ಮಂಡಳಿ’ ಹೊಂದಿದೆ.

ಅನೇಕ ದೇಶಗಳು ಚಹಾದ ಆಮದಿಗೆ ಕಟ್ಟುನಿಟ್ಟಾದ ನಿಯಮಗಳನ್ನು ಅನುಸರಿಸುತ್ತಿವೆ. ಹೆಚ್ಚಿನ ದೇಶಗಳು ಯೂರೋಪ್‌ (ಇಯು) ಮಾನದಂಡಗಳನ್ನು ಅನುಸರಿಸುತ್ತವೆ. ಇದು ಎಫ್‌ಎಸ್‌ಎಸ್‌ಎಐಗಿಂತಲೂ ಹೆಚ್ಚು ಕಠಿಣವಾಗಿವೆ ಎಂದು ಕನೋರಿಯಾ ಹೇಳಿದ್ದಾರೆ. ‘ಕಾನೂನು ಅನುಸರಿಸುವ ಬದಲು, ಎಫ್‌ಎಸ್‌ಎಸ್‌ಎಐ ಮಾನದಂಡಗಳನ್ನು ಉದಾರಗೊಳಿಸುವಂತೆ ಅನೇಕರು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಇದು ತಪ್ಪು ಸಂದೇಶ ರವಾನಿಸುತ್ತದೆ‘ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕೀಟನಾಶಕ ಮತ್ತು ರಾಸಾಯನಿಕದ ಬಗ್ಗೆ ಟೀ ಪ್ಯಾಕರ್‌ಗಳು ಮತ್ತು ರಫ್ತುದಾರರಿಂದ ದೂರುಗಳು ಬಂದಿವೆ ಎಂದು ಟೀ ಬೋರ್ಡ್‌ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ‘ಉತ್ಪಾದಕರು ಎಫ್ಎಸ್ಎಸ್ಎಐ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಪುನರುಚ್ಚರಿಸಲಾಗಿದೆ. ರಫ್ತಾಗುವ ನಮ್ಮ ವಸ್ತುಗಳು ಆಮದು ಮಾಡಿಕೊಳ್ಳುವ ದೇಶಗಳಲ್ಲಿ ಅಸ್ತಿತ್ವದಲ್ಲಿರುವ ಮಾನದಂಡಗಳಿಗೆ ಬದ್ಧವಾಗಿರಬೇಕು ಎಂಬುದು ಸ್ಪಷ್ಟವಾಗಿರುವ ವಿಚಾರ’ ಎಂದು ಕನೋರಿಯಾ ಹೇಳಿದ್ದಾರೆ.

ಭಾರತವು 2021 ರಲ್ಲಿ ₹5,246.89 ಕೋಟಿ ಮೌಲ್ಯದ ಚಹಾವನ್ನು ರಫ್ತು ಮಾಡಿದೆ. 

Leave a Reply

Your email address will not be published. Required fields are marked *

error: Content is protected !!