ಕಾರ್ಕಳ: ಕಾಡುಕೋಣ ಡಿಕ್ಕಿ – ಬೈಕ್ ಸವಾರ ಸಾವು ಇನ್ನೋರ್ವನಿಗೆ ಗಾಯ

ಕಾರ್ಕಳ ಜೂ.1 (ಉಡುಪಿ ಟೈಮ್ಸ್ ವರದಿ): ತಾಲೂಕಿನ ಮಾಳ ಗ್ರಾಮದ ಹುಕ್ರಟ್ಟೆ-ಬಜಗೋಳಿಯ ರಸ್ತೆಯಲ್ಲಿ ನಿನ್ನೆ ರಾತ್ರಿ ಕಾಡುಕೋಣವೊಂದಕ್ಕೆ ಬೈಕ್ ಡಿಕ್ಕಿ ಹೊಡೆದು ಸವಾರನೋರ್ವ ಮೃತಪಟ್ಟು ಸಹಸವಾರ  ಗಂಭೀರ ಗಾಯಗೊಂಡ ಘಟನೆ ನಡೆದಿದೆ.

 ರೋಹಿತ್ ಡಿಮೆಲ್ಲೋ(25) ಮೃತಪಟ್ಟ ಬೈಕ್ ಸವಾರ, ರೋಲ್ಸನ್ ಡಿಸೋಜಾ ಗಂಭೀರ ಗಾಯಗೊಂಡಿರುವ ಸಹಸವಾರ ನಿನ್ನೆ ರಾತ್ರಿ  7.45 ರ ಸುಮಾರಿಗೆ ಹುಕ್ರಟ್ಟೆ ಕಡೆಯಿಂದ ಬಜಗೋಳಿ ಕಡೆಗೆ ರೋಹಿತ್ ಡಿಮೆಲ್ಲೋ ಹಾಗೂ ರೋಲ್ಸನ್ ಡಿಸೋಜಾ ಅವರು ಬೈಕ್ ನಲ್ಲಿ ಹೋಗುತ್ತಿದ್ದರು. ಈ  ವೇಳೆ  ಕಾಡುಕೋಣ ಹಿಂಡು ಬಂದ ಪರಿಣಾಮ ಬೈಕ್ ಕಾಡುಕೋಣವೊಂದಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಸವಾರರಿಬ್ಬರು ಬೈಕ್ ಸಮೇತ ರಸ್ತೆಗೆ ಬಿದ್ದಿದ್ದಾರೆ. ಅಪಘಾತದಲ್ಲಿ ಗಂಭೀರ ಗಾಯಗೊಂಡ ಇಬ್ಬರನ್ನು ಕಾರ್ಕಳದ ಸಿಟಿ ಆಸ್ಪತ್ರೆಗೆ ದಾಖಲಿಸಲಾಯಿತು.

ಆಸ್ಪತ್ರೆಯಲ್ಲಿ ಗಾಯಾಳುಗಳನ್ನು ಪರೀಕ್ಷಿಸಿದ ವೈದ್ಯರು ಹೆಚ್ಚಿನ ಚಿಕಿತ್ಸೆ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದಾರೆ. ಅದರಂತೆ ರೋಹಿತ್ ಡಿಮೆಲ್ಲೋ ಅವರನ್ನು ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಅವರನ್ನು ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಇನ್ನು ಸಹ ಸವಾರ ರೋಲ್ಸನ್ ಡಿಸೋಜಾ ರವರನ್ನು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದು ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!