ಪತ್ರಿಕಾ ಧರ್ಮ ಎತ್ತಿ ಹಿಡಿಯುವ ಕೆಲಸ ಪತ್ರಕರ್ತರಿಂದಾಗಲಿ: ಡಿಸಿಪಿ ಹರಿರಾಮ್ ಶಂಕರ್

ಮಂಗಳೂರು*: ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನೀಡಲ್ಪಡುವ 2021ನೆಯ ಸಾಲಿನ ಪ್ರತಿಷ್ಠಿತ ಪ.ಗೋ. ಪ್ರಶಸ್ತಿಯನ್ನು ‘ಹೊಸ ದಿಗಂತ’ ಪತ್ರಿಕೆಯ ವರದಿಗಾರ ಮಿಥುನ ಕೊಡೆತ್ತೂರು ಅವರಿಗೆ ಪ್ರದಾನ ಮಾಡಲಾಯಿತು.

ಮಿಥುನ್ ಅವರ ‘ಈಗ ಕೈ ಮಗ್ಗಗಳತ್ತ ಪದವೀಧರರ ಚಿತ್ತ… ಸೀರೆಗಳಲ್ಲಿ ನೇಕಾರರ ಚಿತ್ರ!’ ವರದಿಗೆ ಪ್ರಶಸ್ತಿ ಲಭಿಸಿದ್ದು, ಪ್ರಶಸ್ತಿಯು 10,001 ರೂ.ನಗದು, ಪ್ರಶಸ್ತಿ ಫಲಕ, ಸ್ಮರಣಿಕೆಯನ್ನು ಒಳಗೊಂಡಿದೆ. ಮಂಗಳವಾರ ನಗರದ ಪ್ರೆಸ್ ಕ್ಲಬ್‌ನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಡಿಸಿಪಿ ಹರಿರಾಮ್ ಶಂಕರ್ ಪ್ರಶಸ್ತಿ ಪ್ರದಾನ ಮಾಡಿದರು.

ಬಳಿಕ ಮಾತನಾಡಿದ ಅವರು, ಗ್ರಾಮೀಣ ಭಾಗದ ಸಮಸ್ಯೆ, ಸವಾಲುಗಳನ್ನು ತಮ್ಮ ಬರಹಗಳ ಮೂಲಕ ಪರಿಚಯಿಸುವುದರೊಂದಿಗೆ ಆಡಳಿತವನ್ನು ಎಚ್ಚರಿಸುವ ಕೆಲಸವನ್ನು ಪತ್ರಕರ್ತರು ಬದ್ಧತೆಯಿಂದ ನಿರ್ವಹಿಸಬೇಕು. ಪತ್ರಿಕಾ ಧರ್ಮಕ್ಕೆ ಅಪಚಾರವಾಗದೆ, ಆಡಳಿತದ ಪಥ ತಪ್ಪಿದಾಗ ಎಚ್ಚರಿಸುವ ಕೆಲಸ ಮಾಡಬೇಕು ಎಂದರು. ಉತ್ತಮ ಕೆಲಸಗಳನ್ನು ಮಾಡಿದಾಗ ಅಂತಹ ಪತ್ರಕರ್ತರನ್ನು ಗುರುತಿಸಿ ಗೌರವಿಸುವ ಕೆಲಸ ನಿರಂತರವಾಗಿ ಆಗಲಿ.

ಮಿಥುನ್ ಕೊಡೆತ್ತೂರು ಅವರು ತಮ್ಮ ಉತ್ತಮ ವರದಿಯಿಂದ ಇಂದು ಪ್ರಶಸ್ತಿಗೆ ಪಾತ್ರರಾಗುತ್ತಿದ್ದು, ಇಂತಹವರ ಸಂಖ್ಯೆ ಹೆಚ್ಚಾಗಲಿ ಎಂದು ಹರಿರಾಮ್ ಶಂಕರ್ ಶುಭ ಹಾರೈಸಿದರು. ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ದ.ಕ. ಜಿಲ್ಲಾ ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ  ಮಾತನಾಡಿ ದ‌.ಕ.ಜಿಲ್ಲೆಯ ಪತ್ರಕರ್ತರು ಅತ್ಯಂತ ಪರಿಣಾಮಕಾರಿಯಾಗಿ  ಕೆಲಸ‌‌ ಮಾಡುತ್ತಿದ್ದಾರೆ.‌ ತಮ್ಮ ವರದಿಗಳ ಮೂಲಕ ಪತ್ರಕರ್ತರು ಆಡಳಿತ ವ್ಯವಸ್ಥೆಯನ್ನು ಎಚ್ಚರಿಸುವುದರ ಜೊತೆಗೆ ಆಡಳಿತಕ್ಕೆ ಬೇಕಾದ ಪೂರಕ ವಾತಾವರಣ ಸೃಷ್ಠಿಸುತ್ತಾರೆ. ಯಾವುದೇ ಭದ್ರತೆ ಇಲ್ಲದಿದ್ದರೂ  ಜೀವನವನ್ನು ಮುಡಿಪಾಗಿಟ್ಟು ವರದಿ ಮಾಡುತ್ತಿರುವ ಪತ್ರಕರ್ತರ ಕಾರ್ಯ ಶ್ಲಾಘನೀಯ ಎಂದರು.

ಸಾಧಕ ಪತ್ರಕರ್ತರ ಸ್ಮರಿಸುವ ಕಾರ್ಯವಾಗಲಿ: ಹಿರಿಯ ಪತ್ರಕರ್ತ ಕೆ.ಆನಂದ ಶೆಟ್ಟಿ ಮಾತನಾಡಿ, ಪದ್ಯಾಣ ಗೋಪಾಲಕೃಷ್ಣ ಅವರು ಗ್ರಾಮೀಣ ಭಾಗದ ವರದಿಗಳ ಬಗ್ಗೆ ವಿಶೇಷ ಒಲವು ತೋರುತ್ತಿದ್ದರು. ನೇರ ನುಡಿಯ ಉತ್ತಮ ಪತ್ರಕರ್ತರಾಗಿದ್ದ ಅವರು ಯುವ ಪತ್ರಕರ್ತರಿಗೆ ಮಾದರಿಯಾಗಿದ್ದರು. ಅವರ ಹೆಸರಿನಲ್ಲಿ ಕಳೆದ ೨೩ ವರ್ಷಗಳಿಂದ ಪ.ಗೋ ಪ್ರಶಸ್ತಿ ನೀಡಲಾಗುತ್ತಿದ್ದು, ಇದೊಂದು ಪ್ರತಿಷ್ಠಿತ ಪ್ರಶಸ್ತಿಯಾಗಿ ಗುರುತಿಸಿಕೊಂಡಿದೆ. ಹಿರಿಯ ಪತ್ರಕರ್ತರಾಗಿದ್ದ ಎನ್.ಆರ್.ಉಭಯ, ನರಸಿಂಹ ರಾವ್, ಎ.ವಿ.ಮಯ್ಯ ಇವರು ಕೂಡ ಜಿಲ್ಲೆಯಲ್ಲಿ ಉತ್ತಮ ಪತ್ರಕರ್ತರಾಗಿ ಕೆಲಸ ಮಾಡಿದವರು. ಇವರ ಬದುಕು-ಸಾಧನೆಯನ್ನು ಸ್ಮರಿಸುವ ಕಾರ್ಯ ಪತ್ರಕರ್ತರ ಸಂಘದಿಂದ ಆಗಲಿ ಎಂದು ಸಲಹೆ ನೀಡಿದರು. ಪ್ರಶಸ್ತಿ ಸ್ವೀಕರಿಸಿದ ಮಿಥುನ ಕೊಡೆತ್ತೂರು ಅನಿಸಿಕೆ ವ್ಯಕ್ತಪಡಿಸಿದರು. ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್, ಪದ್ಯಾಣ ಗೋಪಾಲಕೃಷ್ಣ ಅವರ ಹಿರಿಯ ಪುತ್ರ ವಿಶ್ವೇಶ್ವರ ಪದ್ಯಾಣ ಉಪಸ್ಥಿತರಿದ್ದರು.ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ವಂದಿಸಿದರು. ಕಾರ್ಯಕಾರಿ ಸಮಿತಿ ಸದಸ್ಯ ಮುಹಮ್ಮದ್ ಆರಿಫ್ ಪಡುಬಿದ್ರೆ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!