ವಿತ್ತೀಯ ವರ್ಷದಲ್ಲಿ 500 ರೂ.ಮುಖ ಬೆಲೆಯ 79,669 ನಕಲಿ ನೋಟು ಪತ್ತೆ- ಆರ್’ಬಿಐ ಮಾಹಿತಿ!

ಬೆಂಗಳೂರು: ನಕಲಿ ನೋಟು ದಂಧೆ, ಕಪ್ಪು ಹಣ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಮಾಡಿದ್ದ ನೋಟು ರದ್ದತಿ ವಿಫಲವಾಯಿತೇ.. ಇಂತಹುದೊಂದು ಪ್ರಶ್ನೆ ಭಾರತೀಯ ರಿಸರ್ವ್ ಬ್ಯಾಂಕ್ ನೀಡಿರುವ ಮಾಹಿತಿಯಿಂದ ಉದ್ಭವಿಸಿದೆ.

ನಕಲಿ ನೋಟುಗಳ ಚಲಾವಣೆಗೆ ಬ್ರೇಕ್ ಹಾಕು ನಿಟ್ಟಿನಲ್ಲಿ ಕೇಂದ್ರ ಸರ್ಕಾರ ನೋಟು ರದ್ದತಿ ಮಾಡಿ ಹೊಸ ನೋಟುಗಳನ್ನುಚಲಾವಣೆಗೆ ತಂದಿತ್ತು. 2016ರಲ್ಲಿ ಚಾಲ್ತಿಯಲ್ಲಿದ್ದ ರೂ.500 ಮತ್ತು ರೂ.1,000 ನೋಟುಗಳ ಅಮಾನ್ಯೀಕರಣದ ಪ್ರಮುಖ ಉದ್ದೇಶವೆಂದರೆ ನಕಲಿ ಕರೆನ್ಸಿ ನೋಟುಗಳ ಚಲಾವಣೆ ತಡೆಯುವುದಾಗಿತ್ತು. ಇದರಿಂದ ನಕಲಿ ನೋಟು ತಯಾರಿಕೆಗೆ ಬ್ರೇಕ್ ಬಿದ್ದಿದೆ ಎಂದೇ ಹೇಳಲಾಗಿತ್ತು. ಆದರೆ ಈ ವಾದಕ್ಕೆ ತದ್ವಿರುದ್ಧ ಎಂಬಂತೆ ಭಾರತೀಯ ರಿಸರ್ವ್ ಬ್ಯಾಂಕ್  ಮಾಹಿತಿಯೊಂದನ್ನು ಹಂಚಿಕೊಂಡಿದ್ದು, 2022 ವಿತ್ತೀಯ ವರ್ಷದಲ್ಲಿ 500 ರೂ ಮುಖ ಬೆಲೆಯ 79,669 ನಕಲಿ ನೋಟುಗಳು ಪತ್ತೆಯಾಗಿದೆ ಎಂದು ಹೇಳಿದೆ.

2022 ವಿತ್ತೀಯ ವರ್ಷದಲ್ಲಿ 500 ರೂ ಮುಖ ಬೆಲೆಯ 79,669 ನಕಲಿ ನೋಟುಗಳ ಪತ್ತೆಯಾಗಿದ್ದು, ಹಿಂದಿನ ಹಣಕಾಸು ವರ್ಷದಲ್ಲಿ (2020–21) ಒಟ್ಟು 2.08 ಲಕ್ಷ ನಕಲಿ ನೋಟುಗಳು ಪತ್ತೆಯಾಗಿದ್ದವು. ಅದರಂತೆ ಮಾರ್ಚ್‌ 31ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ದೇಶದಲ್ಲಿ ಒಟ್ಟು 2.30 ಲಕ್ಷ ನಕಲಿ ನೋಟುಗಳು ಪತ್ತೆಯಾಗಿವೆ. 

ದ್ವಿಗುಣಗೊಂಡ 500ರೂ ಮುಖಬೆಲೆಯ ನಕಲಿ ನೋಟುಗಳ ಪ್ರಮಾಣ
2019–20ನೆಯ ಹಣಕಾಸು ವರ್ಷದಲ್ಲಿ ಪತ್ತೆಯಾದ ನಕಲಿ ನೋಟುಗಳ ಒಟ್ಟು ಸಂಖ್ಯೆಗೆ ಹೋಲಿಸಿದರೆ ಇದು ಕಡಿಮೆ. ಆ ವರ್ಷದಲ್ಲಿ ಒಟ್ಟು 2.96 ಲಕ್ಷ ನಕಲಿ ನೋಟುಗಳು ಪತ್ತೆಯಾಗಿದ್ದವು. 100ರೂ ಮುಖಬೆಲೆಯ 92,237 ನಕಲಿ ನೋಟುಗಳು 2021–22ನೇ ಹಣಕಾಸು ವರ್ಷದಲ್ಲಿ ಪತ್ತೆಯಾಗಿವೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ನ (ಆರ್‌ಬಿಐ) ವಾರ್ಷಿಕ ವರದಿಯು ತಿಳಿಸಿದೆ.

ಆರ್‌ಬಿಐ ವಾರ್ಷಿಕ ವರದಿಯ ಪ್ರಕಾರ, ಬ್ಯಾಂಕಿಂಗ್ ವ್ಯವಸ್ಥೆಯಿಂದ ಪತ್ತೆಯಾದ 500 ರೂಪಾಯಿ ಮುಖಬೆಲೆಯ ನಕಲಿ ನೋಟುಗಳ ಸಂಖ್ಯೆಯು ಹಿಂದಿನ ವರ್ಷಕ್ಕಿಂತ 2021-22ನೇ ಹಣಕಾಸು ವರ್ಷದಲ್ಲಿ ದ್ವಿಗುಣಗೊಂಡಿದ್ದು, ಅಂದರೆ 79,669 ನಕಲಿ ನೋಟುಗಳು ಪತ್ತೆಯಾಗಿವೆ. ಬ್ಯಾಕಿಂಗ್ ವ್ಯವಸ್ಥೆಯಲ್ಲಿ ಪತ್ತೆಯಾದ 2,000 ರೂ ಮುಖಬೆಲೆಯ ನಕಲಿ ನೋಟುಗಳ ಸಂಖ್ಯೆಯು 2021-22ರ ಅವಧಿಯಲ್ಲಿ 13,604ಗಳಾಗಿದ್ದು, ಹಿಂದಿನ ಹಣಕಾಸು ವರ್ಷಕ್ಕಿಂತ 54.6 ಶೇಕಡಾ ಹೆಚ್ಚಾಗಿದೆ. 2020-21 ರಲ್ಲಿ ಇಳಿಕೆಯಾದ ನಂತರ, ಬ್ಯಾಂಕಿಂಗ್ ವಲಯದಲ್ಲಿ ಪತ್ತೆಯಾದ ಎಲ್ಲಾ ಮುಖಬೆಲೆಯ ನಕಲಿ ಭಾರತೀಯ ಕರೆನ್ಸಿ ನೋಟುಗಳ (ಎಫ್‌ಐಸಿಎನ್) ಒಟ್ಟು ಸಂಖ್ಯೆಯು ಹಿಂದಿನ ಹಣಕಾಸು ವರ್ಷದಲ್ಲಿ 2,08,625 ತುಣುಕುಗಳಿಂದ 2,30,971 ತುಣುಕುಗಳಿಗೆ ಹೆಚ್ಚಿದೆ. 2019-29ರಲ್ಲಿ, ಪತ್ತೆಯಾದ ಎಫ್‌ಐಸಿಎನ್‌ಗಳು (ನಕಲಿ ನೋಟುಗಳ ತುಣುಕುಗಳು) 2,96,695ರಷ್ಟಾಗಿದೆ ಎಂದು ವರದಿಯಲ್ಲಿ ಹೇಳಿದೆ.

‘‘ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.16.4, ಶೇ.16.5, ಶೇ.11.7, ಶೇ.101.9 ಮತ್ತು ಶೇ.54.6ರಷ್ಟು, 10, 20, 200, 200 ರೂ. ಮುಖಬೆಲೆಯ ನಕಲಿ ನೋಟು ಪತ್ತೆಯಾಗಿದೆ.  ಆದರೆ 50 ಮತ್ತು 100 ರೂಪಾಯಿ ಮುಖಬೆಲೆಯಲ್ಲಿ ಪತ್ತೆಯಾದ ನಕಲಿ ನೋಟುಗಳು ಕ್ರಮವಾಗಿ ಶೇ.28.7 ಮತ್ತು ಶೇ.16.7ರಷ್ಟು ಇಳಿಕೆ ಕಂಡಿವೆ. 2021-22ರ ಅವಧಿಯಲ್ಲಿ ಬ್ಯಾಂಕಿಂಗ್ ವಲಯದಲ್ಲಿ ಪತ್ತೆಯಾದ ಒಟ್ಟು ಎಫ್‌ಐಸಿಎನ್‌ಗಳಲ್ಲಿ ಶೇಕಡಾ 6.9 ರಷ್ಟು ರಿಸರ್ವ್ ಬ್ಯಾಂಕ್‌ನಲ್ಲಿ ಮತ್ತು ಶೇಕಡಾ 93.1 ರಷ್ಟು ಇತರೆ ಬ್ಯಾಂಕ್‌ಗಳಲ್ಲಿ ಪತ್ತೆಯಾಗಿದೆ ಎಂದು ವರದಿ ತಿಳಿಸಿದೆ.

ಏಪ್ರಿಲ್ 1, 2021 ರಿಂದ ಮಾರ್ಚ್ 31, 2022 ರ ಅವಧಿಯಲ್ಲಿ ಭದ್ರತಾ ಮುದ್ರಣಕ್ಕಾಗಿ ಮಾಡಿದ ಒಟ್ಟು ವೆಚ್ಚವು ರೂ 4,984.8 ಕೋಟಿಯಾಗಿದ್ದು, ಹಿಂದಿನ ವರ್ಷದಲ್ಲಿ (ಜುಲೈ 1, 2020 ರಿಂದ ಮಾರ್ಚ್ 31, 2021 ರವರೆಗೆ) 4,012.1 ಕೋಟಿ ರೂ.ಗಳಾಗಿವೆ. ಅಲ್ಲದೆ, ಹಿಂದಿನ ವರ್ಷದಲ್ಲಿ 997.02 ಕೋಟಿ ನೋಟುಗಳಿಂದ 2021-22ರಲ್ಲಿ ಕೊಳೆತ ನೋಟುಗಳ ವಿಲೇವಾರಿ 1,878.01 ಕೋಟಿ ತುಣುಕುಗಳಿಗೆ 88.4 ರಷ್ಟು ಹೆಚ್ಚಾಗಿದೆ ಎಂದು ಆರ್ ಬಿಐ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!