ಮಾಜಿ ಶಾಸಕರಿಗೆ ಒಂದು ಅವಧಿಗೆ ಮಾತ್ರ ಪಿಂಚಣಿ: ಪಂಜಾಬ್ ಸಿಎಂ ಮಹತ್ವದ ಆದೇಶ

ಚಂಡೀಗಢ: ಪಂಜಾಬ್ ಮಾಜಿ ಶಾಸಕರು ಇನ್ನು ಮುಂದೆ ಒಂದು ಅವಧಿಗೆ ಮಾತ್ರ ಪಿಂಚಣಿ ಪಡೆಯಲಿದ್ದಾರೆ ಮತ್ತು ಅವರು ಸೇವೆ ಸಲ್ಲಿಸಿದ ಪ್ರತಿ ಅವಧಿಗೆ ಪಿಂಚಣಿ ಪಡೆಯುವ ಅಭ್ಯಾಸವನ್ನು ತೆಗೆದುಹಾಕಲಾಗುವುದು ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಶುಕ್ರವಾರ ಹೇಳಿದ್ದಾರೆ.

“ಪಂಜಾಬ್‌ನ ಮಾಜಿ ಶಾಸಕರು, ಅವರು ಎರಡು ಬಾರಿ, ಐದು ಬಾರಿ ಅಥವಾ ಹತ್ತು ಬಾರಿ ಗೆದ್ದಿದ್ದರೂ ಅವರು ಇನ್ನು ಮುಂದೆ ಒಂದು ಅವಧಿಗೆ ಮಾತ್ರ ಪಿಂಚಣಿ ಪಡೆಯುತ್ತಾರೆ” ಎಂದು ವೀಡಿಯೊ ಸಂದೇಶದಲ್ಲಿ ಮಾನ್ ತಿಳಿಸಿದ್ದಾರೆ. ಅಲ್ಲದೆ ಈ ಹಿಂದೆ ಶಾಸಕರಾಗಿದ್ದ ಹಲವಾರು ಸಂಸದರು ಸಹ ಪಿಂಚಣಿ ಪಡೆಯುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಇದರಿಂದ ಉಳಿತಾಯವಾಗುವ ಹಣವನ್ನು ಜನರ ಕಲ್ಯಾಣಕ್ಕೆ ವಿನಿಯೋಗಿಸಲಾಗುವುದು ಎಂದಿರುವ ಪಂಜಾಬ್ ಸಿಎಂ, “ನಮ್ಮ ರಾಜಕೀಯ ನಾಯಕರು, ಶಾಸಕರು ಸೇರಿದಂತೆ, ನಿಮ್ಮ ಸೇವೆ ಮಾಡಲು ನಮಗೆ ಅವಕಾಶ ನೀಡಿ ಎಂದು ಕೈ ಜೋಡಿಸಿ ಹೇಳುವ ಮೂಲಕ ನಿಮ್ಮಿಂದ ಮತ ಪಡೆದು ಗೆಲ್ಲುತ್ತಾರೆ. ಆದರೆ ಮೂರು ಬಾರಿ, ನಾಲ್ಕು ಬಾರಿ ಅಥವಾ ಐದು ಬಾರಿ ಗೆದ್ದ ಹಲವಾರು ಶಾಸಕರು ಚುನಾವಣೆಯಲ್ಲಿ ಸೋತ ನಂತರ ಅಥವಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಸಿಗದಿದ್ದರೂ ತಿಂಗಳಿಗೆ ಲಕ್ಷಾಂತರ ರೂಪಾಯಿ ಪಿಂಚಣಿ ಪಡೆಯುತ್ತಾರೆ. ಇದು ರಾಜ್ಯದ ಬೊಕ್ಕಸಕ್ಕೆ ದೊಡ್ಡ ಹೊಡೆತ ನೀಡುತ್ತಿದೆ” ಎಂದು ಮಾನ್ ಜನರನ್ನು ಉದ್ದೇಶಿಸಿ ಹೇಳಿದ್ದಾರೆ.

ಚುನಾವಣೆಯಲ್ಲಿ ಸೋತರೋ ಕೆಲವರು 3.50 ಲಕ್ಷ, ಇನ್ನು ಕೆಲವರು 4.50 ಲಕ್ಷ, 5.25 ಲಕ್ಷ ರೂಪಾಯಿ ಪಿಂಚಣಿ ಯಾಗಿ ಪಡೆಯುತ್ತಾರೆ. ಇದು ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿಗಳ ಆರ್ಥಿಕ ಹೊರೆಯಾಗುತ್ತಿದೆ ಎಂದು ಮಾನ್ ಹೇಳಿದ್ದಾರೆ. ಕೇವಲ ಒಂದು ಅವಧಿಗೆ ಮಾತ್ರ ಶಾಸಕರಾಗಿ ಆಯ್ಕೆಯಾದರೂ ಕೂಡ ಅವರಿಗೆ ಜೀವನ ಪರ್ಯಂತ ಪಿಂಚಣಿ ಹಣ ನೀಡಲಾಗುತ್ತದೆ. ಬಹುತೇಕ ಎಲ್ಲ ರಾಜ್ಯಗಳಲ್ಲೂ ಈ ಸಂಪ್ರದಾಯ ಜಾರಿಯಲ್ಲಿದೆ. ಆದರೆ, ಪಂಜಾಬ್​ನಲ್ಲಿ ಭಗವಂತ್ ಮಾನ್​ ಸರ್ಕಾರ ಈ ಯೋಜನೆಗೆ ಕಡಿವಾಣ​ ಹಾಕಲು ಮುಂದಾಗಿದೆ. ಇನ್ಮುಂದೆ, ಶಾಸಕರು ಎಷ್ಟು ಬಾರಿ ಗೆದ್ದರೂ ಕೂಡ ಒಂದೇ ಅವಧಿಗೆ ಪಿಂಚಣಿ ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ

Leave a Reply

Your email address will not be published. Required fields are marked *

error: Content is protected !!