60 ಕಿ.ಮೀ.ವ್ಯಾಪ್ತಿಯೊಳಗೆ ಎರಡು ಟೋಲ್ ಪ್ಲಾಜಾ ಇದ್ದಲ್ಲಿ ಒಂದು ರದ್ದು- ಸಚಿವ ಗಡ್ಕರಿ
ನವದೆಹಲಿ: ರಾಷ್ಟ್ರೀಯ ಹೆದ್ದಾರಿಗಳಲ್ಲಿರುವ ಟೋಲ್ ಗೇಟ್’ಗಳು ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಮಹತ್ವದ ನಿರ್ಧಾರಕ್ಕೆ ಬಂದಂತಿದೆ. 60 ಕಿ. ಮೀ. ವ್ಯಾಪ್ತಿಯೊಳಗೆ ಎರಡು ಟೋಲ್ ಬೂತ್‌ಗಳಿದ್ದರೆ ಆ ಪೈಕಿ ಒಂದನ್ನು ಮುಚ್ಚುವ ಪ್ರಸ್ತಾಪವಿದೆ ಎಂದು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಎರಡು ಟೋಲ್ ಗೇಟ್ ಗಳ ಪೈಕಿ ಒಂದನ್ನು ಮೂರು ತಿಂಗಳಿನಲ್ಲಿ ಮುಚ್ಚಲಾಗುತ್ತದೆ ಎಂದು ಲೋಕಸಭೆಯಲ್ಲಿ ಸಚಿವರು ಮಾಹಿತಿ ನೀಡಿದ್ದಾರೆ. ಮಂಗಳವಾರ ಲೋಕಸಭೆಯಲ್ಲಿ ರಸ್ತೆ ಮತ್ತು ಸಾರಿಗೆ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಡೆದ ಚರ್ಚೆಯಲ್ಲಿ ಸಚಿವರು ಈ ವಿಚಾರ ತಿಳಿಸಿದ್ದಾರೆ. 60 ಕಿ.ಮೀ. ವ್ಯಾಪ್ತಿಯಲ್ಲಿ ಕೇವಲ ಒಂದು ಟೋಲ್ ಬೂತ್ ಇರಬೇಕು. ಎರಡು ಟೋಲ್ ಬೂತ್ ಇರುವ ಕಡೆ ಅವುಗಳನ್ನು ಮೂರು ತಿಂಗಳಿನಲ್ಲಿ ತೆರವುಗೊಳಿಸಲಾಗುತ್ತದೆ ಎಂದರು. ಸಚಿವರು ನೀಡಿದ ಮಾಹಿತಿಯಂತೆ ಇದೀಗ ದ.ಕ. ಜಿಲ್ಲೆಯ ಸುರತ್ಕಲ್ ಟೋಲ್ ಗೇಟ್ ಕೂಡ ರದ್ದಾಗುವ ಸಾಧ್ಯತೆ ಇದೆ. ತಲಪಾಡಿಯ ಬಳಿಕ ಸುರತ್ಕಲ್ ಹೆಜಮಾಡಿಗಳಲ್ಲಿ ಟೋಲ್ ಬೂತ್ ಗಳಿರುವುದು ಸಾರ್ವಜನಿಕರಿಗೆ ತೊಂದರೆಯನ್ನುಟ್ಟು ಮಾಡಿದೆ.