ಟಿಎಂಸಿ ಮುಖಂಡನ ಹತ್ಯೆ- ಉದ್ರಿಕ್ತರ ದಾಳಿಗೆ 10 ಮಂದಿ ಸಜೀವ ದಹನ

ಕೋಲ್ಕತ್ತ ಮಾ.22: ಟಿಎಂಸಿ ಮುಖಂಡನ ಹತ್ಯೆ ಬೆನ್ನಲ್ಲೇ ಉದ್ರಿಕ್ತ ಗೊಂಡ ಗುಂಪೊಂದು ಪಶ್ಚಿಮ ಬಂಗಾಳದ ಬಿರ್‌ಭುಮ್‌ನಲ್ಲಿರುವ ವಿರೋಧಿ ಗುಂಪಿನ ಮನೆಗಳ ಮೇಲೆ ನಡೆಸಿದ ದಾಳಿಯಲ್ಲಿ ಮನೆಗಳಿಗೆ ಬೆಂಕಿ ಬಿದ್ದ ಪರಿಣಾಮ 10 ಮಂದಿ ಸಜೀವ ದಹನವಾಗಿರುವ ಘಟನೆ ನಡೆದಿದೆ.

ದಾಳಿಯಿಂದ 10 ರಿಂದ 12 ಮಂದಿಗೆ ಬೆಂಕಿ ತಗುಲಿ 10 ಮಂದಿ ಸಜೀವ ದಹನವಾಗಿದ್ದಾರೆ. ಸುಟ್ಟು ಕರಕಲಾದ 10 ಮೃತದೇಹವನ್ನು ಹೊರತೆಗೆಲಾಗಿದ್ದು, ಒಂದೇ ಮನೆಯಿಂದ 7 ಮೃತದೇಹಗಳನ್ನು ಹೊರತೆಗೆಯಲಾಗಿದೆ. ದೇಹಗಳು ಸಂಪೂರ್ಣ ಸುಟ್ಟಿರುವುದರಿಂದ ವ್ಯಕ್ತಿಗಳ ಗುರುತು ಪತ್ತೆಯಾಗಿಲ್ಲ. ಎಲ್ಲ ದೇಹಗಳನ್ನು ಸಮೀಪದ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕಳುಹಿಸಲಾಗಿದೆ. 

ದಾಳಿಯಲ್ಲಿ ಮೂವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇಲ್ಲಿನ ರಾಮಪುರಹಾಟ್‌ನ ಬಗುಟಿ ಗ್ರಾಮ ಪಂಚಾಯಿತಿ ಮುಖಂಡ ಭಾದು ಶೇಖ್ ಅವರ ಮೇಲೆ ನಿನ್ನೆ ರಾತ್ರಿ ದಾಳಿ ನಡೆದಿತ್ತು. ರಾಷ್ಟ್ರೀಯ ಹೆದ್ದಾರಿ-60ರ ಅಂಗಡಿಯೊಂದರಲ್ಲಿ ಇರುವಾಗ ಶೇಖ್ ಅವರ ಮೇಲೆ ಬಾಂಬ್ ದಾಳಿ ನಡೆಸಲಾಗಿತ್ತು. ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸುವ ಮುನ್ನವೇ ಅವರು ಮೃತಪಟ್ಟಿದ್ದರು. ಮುಖಂಡನ ಸಾವಿನ ಸುದ್ದಿ ತಿಳಿದು ರೊಚ್ಚಿಗೆದ್ದ ಗುಂಪೊಂದು ಅವರ ಗ್ರಾಮದಲ್ಲಿನ ವಿರೋಧಿ ಗುಂಪಿನ ಕೆಲವು ಮನೆಗಳ ಮೇಲೆ ದಾಳಿ ನಡೆಸಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಡಿಜಿಪಿ ಮಾಳವೀಯ ಅವರು, ಮುಖಂಡ ಶೇಖ್ ಅವರ ಹತ್ಯೆಯ ಸಂಬಂಧ ಈವರೆಗೂ ಪೊಲೀಸರು ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಮನೆಗೆ ಬೆಂಕಿಯಿಟ್ಟ ಗುಂಪಿನ ಬಗ್ಗೆ ರಾಜ್ಯ ಸರ್ಕಾರವು ಎಡಿಜಿ (ಸಿಐಡಿ) ಜ್ಞಾನವಂತ್ ಸಿಂಗ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಿದೆ ಎಂದು  ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!