ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷರ ಈದುಲ್ ಫಿತ್ರ್ ಸಂದೇಶ

ಉಡುಪಿ: ಜಿಲ್ಲೆಯ ಸಮಸ್ತ ನಾಗರೀಕ ಬಂಧುಗಳಿಗೆ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಪರವಾಗಿ ಈದುಲ್ ಫಿತ್ರ್ ಹಬ್ಬದ ಹಾರ್ದಿಕ ಶುಭಾಶಯಗಳು. ಯಾವುದೇ ಧರ್ಮದ ಹಬ್ಬಗಳಿರಲಿ, ಅವು ಪರಸ್ಪರ ಸಂತಸ- ಪ್ರೀತಿ ಹಂಚಿಕೊಳ್ಳಲು, ಕಾಳಜಿ ವ್ಯಕ್ತಪಡಿಸಲು, ನಮ್ಮ ನಡುವೆ ಉಂಟಾಗಿರಬಹುದಾದ ಅಂತರಗಳನ್ನು ಹೋಗಲಾಡಿಸಲು, ಬಾಂಧವ್ಯದ ಬೆಸುಗೆಯನ್ನು ಬಲಪಡಿಸಲು ಅತ್ಯುತ್ತಮ ಅವಕಾಶಗಳಾಗಿವೆ. ಈದುಲ್ ಫಿತ್ರ್ ಇಡೀ ಮನುಕುಲಕ್ಕಾಗಿ  ಕುರ್ ಆನ್ ಗ್ರಂಥ ಅವತೀರ್ಣಗೊಂಡ  ಪವಿತ್ರ ರಮಝಾನ್ ತಿಂಗಳ ಮುಕ್ತಾಯಗೊಳ್ಳುವಾಗ ಆಚರಿಸುವ ಹಬ್ಬ. ಮುಸ್ಲಿಮರಿಗೆ ಮೂವತ್ತು ದಿನಗಳ ಉಪವಾಸ ಹಾಗು ವಿಶೇಷ ಆರಾಧನೆಗಳ  ಬಳಿಕ ಉಡುಗೊರೆಯಾಗಿ ಬರುವ ಅತ್ಯಂತ ವಿಶಿಷ್ಟ, ಅಷ್ಟೇ ಪ್ರಮುಖ ಹಬ್ಬ ಇದು. ಹಾಗಾಗಿ ಈದುಲ್ ಫಿತ್ರ್ ಎಂದರೆ ಪ್ರತಿಯೊಬ್ಬ ಮುಸ್ಲಿಮನ ಪಾಲಿಗೆ ಅತ್ಯಂತ ಸಂಭ್ರಮದ ದಿನ. ಫಿತ್ರ್ ಎಂದರೆ ಉಪವಾಸ ಮುರಿಯುವುದು ಎಂದರ್ಥ. ಹಬ್ಬದ ನಮಾಜ್ ಮಾಡುವ ಮೊದಲೇ ಧವಸಧಾನ್ಯಗಳನ್ನು ವಿತರಿಸಿ ನಮ್ಮ ಸುತ್ತಮುತ್ತಲಲ್ಲಿ ಆ ದಿನ ಯಾರೂ ಉಪವಾಸ ಇಲ್ಲ ಎಂದು ಖಾತರಿ ಪಡಿಸಿ ಆ ಬಳಿಕವೇ ತನ್ನ ಮನೆಯಲ್ಲಿ ಹಬ್ಬ ಆಚರಿಸುವುದು ಈದುಲ್ ಫಿತ್ರ್ ನ ವೈಶಿಷ್ಟ್ಯ.

ಆದರೆ ಈ ಬಾರಿ ಈದುಲ್ ಫಿತ್ರ್ ಬಂದಿರುವ ಸಂದರ್ಭ ಅತ್ಯಂತ ವಿಭಿನ್ನವಾಗಿದೆ. ಕಳೆದ  ಹಲವು ಪೀಳಿಗೆಗಳಲ್ಲೇ ಕಂಡು ಕೇಳರಿಯದ ಅತ್ಯಂತ ವಿಷಮ ಪರಿಸ್ಥಿತಿಯಲ್ಲಿ ಇಡೀ ವಿಶ್ವ ಹಾದುಹೋಗುತ್ತಿರುವಾಗಲೇ ಈದ್ ನಮ್ಮ ಮುಂದೆ ಬಂದಿದೆ. ಸಂಭ್ರಮದ ಸೆಲೆ ಇರಬೇಕಾದಲ್ಲಿ ಸಂಕಟ ಮನೆಮಾಡಿದೆ. ಕೊರೊನ ಎಂಬ ಕಣ್ಣಿಗೆ ಕಾಣದ ವೈರಸ್ ಒಂದು ಇಡೀ ಮನುಕುಲದ ನೆಮ್ಮದಿ ಕೆಡಿಸಿಬಿಟ್ಟಿದೆ. ಸರಕಾರಗಳು, ವಿಜ್ಞಾನ, ವೈದ್ಯಕೀಯ ರಂಗ , ತಂತ್ರಜ್ಞಾನ ಸಹಿತ ಒಟ್ಟು ಜಾಗತಿಕ ವ್ಯವಸ್ಥೆ ಇಂದು ಕೊರೊನವನ್ನು ಎದುರಿಸುವಲ್ಲಿ ಏದುಸಿರು ಬಿಡುತ್ತಿವೆ. ಎಲ್ಲ ಶಕ್ತಿಶಾಲಿಗಳು ಅದರ ಮುಂದೆ ಮಂಡಿಯೂರಿ ನಾವು ಮಾಡುವುದನ್ನೆಲ್ಲಾ ಮಾಡಿಯಾಯಿತು, ಇನ್ನು ಜನರೇ ಜಾಗರೂಕರಾಗಿರಬೇಕು ಎಂದು ಹೇಳುವಂತಹ ಪರಿಸ್ಥಿತಿ ಎದುರಾಗಿದೆ. ಈ ಮಹಾಮಾರಿಯ ಬಹುದೊಡ್ಡ ಬಲಿಪಶುಗಳು ಎಲ್ಲ ದೇಶಗಳ ಬಡವರು. ಕಾರ್ಮಿಕರು, ರೈತರು,  ಮಹಿಳೆಯರು, ಮಕ್ಕಳು. ದುಡಿದು ತಿನ್ನುವ ವರ್ಗ, ಸಣ್ಣಪುಟ್ಟ ವ್ಯಾಪಾರಿಗಳು, ಸ್ವಉದ್ಯೋಗಿಗಳು, ಉದ್ಯೋಗಿಗಳು ಎಲ್ಲರೂ ಈಗ ಕಂಗಾಲಾಗಿದ್ದಾರೆ. ಕಾರ್ಮಿಕರಂತೂ ಅಕ್ಷರಶ ಬೀದಿಪಾಲಾಗಿದ್ದಾರೆ. ಅದೆಷ್ಟೋ ಮಂದಿ ಹೊಟ್ಟೆಗಿಲ್ಲದೆ ಬೀದಿಯಲ್ಲಿ ಪ್ರಾಣ ಬಿಡುತ್ತಿದ್ದಾರೆ. ನಾವೆಲ್ಲರೂ ಅಸಹಾಯಕರಾಗಿ ನೋಡುತ್ತಿದ್ದೇವೆ. ಆರ್ಥಿಕ ವ್ಯವಸ್ಥೆ ಸರ್ವನಾಶವಾಗುವ ಹಂತಕ್ಕೆ ಬಂದು ತಲುಪಿದೆ.

ಈ ಸ್ಥಿತಿಯಲ್ಲಿ ಈದುಲ್ ಫಿತ್ರ್ ಆಚರಣೆ ಹೇಗೆ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಈ ಸಂದರ್ಭದಲ್ಲಿ ನಮ್ಮೊಳಗಿನ ಮಾನವೀಯ ಕಳಕಳಿಯನ್ನು ಇನ್ನಷ್ಟು ಬಲಪಡಿಸಲು ಈ ಬಾರಿಯ ಈದ್ ಕಾರಣವಾಗಬೇಕಾಗಿದೆ. ಕೊರೊನ ವಿರುದ್ಧ ಆಡಳಿತ  , ವೈದ್ಯಕೀಯ ವ್ಯವಸ್ಥೆ ತನ್ನ ಮಿತಿಯನ್ನು ಮೀರಿ ಹೋರಾಟ ನಡೆಸುತ್ತಿದೆ. ಸರಕಾರ, ಅಧಿಕಾರಿಗಳು, ಪೊಲೀಸರು, ವೈದ್ಯರು, ಅರೋಗ್ಯ ಸಿಬ್ಬಂದಿಗಳು, ಪೌರ ಕಾರ್ಮಿಕರು ಇವರೆಲ್ಲರೂ ತಮ್ಮ ಜೀವ ಪಣಕ್ಕಿಟ್ಟು ಈ ಮಾರಕ ಸಾಂಕ್ರಾಮಿಕಕ್ಕೆ ಕಡಿವಾಣ ಹಾಕಲು ದುಡಿಯುತ್ತಿದ್ದಾರೆ. ಜನರು ಈ ಹೋರಾಟಕ್ಕೆ  ಸಂಪೂರ್ಣ ಸಹಕಾರ ನೀಡಿ ತಮ್ಮ ಪಾಲಿಗೆ ಬಂದ ಕಷ್ಟನಷ್ಟಗಳನ್ನೆಲ್ಲ ಸಹಿಸಿಕೊಂಡಿದ್ದಾರೆ. ಅದೆಷ್ಟೋ ಸಂಘ ಸಂಸ್ಥೆಗಳು ಹಾಗು ವೈಯಕ್ತಿಕವಾಗಿ ಜನರು ಕಷ್ಟದಲ್ಲಿರುವವರ ಕಣ್ಣೀರೊರೆಸುವ ಸೇವಾ ಕಾರ್ಯ ಮಾಡುತ್ತಿದ್ದಾರೆ. ಇವೆಲ್ಲವೂ ನಾವಿನ್ನೂ ಸೋಲೊಪ್ಪಿಕೊಂಡಿಲ್ಲ, ನಾವು ಇದರ ವಿರುದ್ಧ ಹೋರಾಡಿ ಜಯಿಸುತ್ತೇವೆ ಎಂಬುದರ ಸಂಕೇತವಾಗಿದೆ. ಇವು ನಮ್ಮ ಪಾಲಿಗೆ ಭರವಸೆಯ ಆಶಾಕಿರಣಗಳಾಗಿವೆ.

ಈ ಬಾರಿಯ ಈದ್ ನಮಗೆಲ್ಲರಿಗೂ ಪರಸ್ಪರರಿಗಾಗಿ ಜೀವಿಸುವ, ನೆರೆಯವರ ಸಂಕಟಗಳಿಗೆ ಮಿಡಿಯುವ, ಇನ್ನೊಬ್ಬರ ಕಷ್ಟಗಳಿಗೆ ಸ್ಪಂದಿಸುವ, ಇರುವುದಕ್ಕೆ ಖುಷಿಪಟ್ಟು ಅದನ್ನು ಹಂಚಿಕೊಳ್ಳುವ , ಇಲ್ಲದ್ದಕ್ಕೆ ವ್ಯಥೆ ಪಡದ,  ಉತ್ತಮ ಮನುಷ್ಯರಾಗಿಸಲಿ. ನೆರೆಯವರ  ಹಸಿವು ತಣಿಸಿದ ಬಳಿಕವೇ ಹಬ್ಬ ಆಚರಿಸು ಎಂಬ ಶ್ರೇಷ್ಠ ಸಂದೇಶ ನೀಡುವ ಈದುಲ್ ಫಿತ್ರ್ ನಮಗೆ ಈ ಅತ್ಯಂತ ಕಠಿಣ ಹಾಗು ಅಷ್ಟೇ ಸವಾಲಿನ ಸಂದರ್ಭಕ್ಕೆ ಅತ್ಯುತ್ತಮ ಪಾಠವಾಗಿದೆ. ಅದರಿಂದ ಕಲಿಯೋಣ, ಅದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ. ಪರರಿಗಾಗಿ ಜೀವಿಸೋಣ, ನಮ್ಮ ಬಾಳು ಸಾರ್ಥಕವಾಗಿಸೋಣ.

ಮುಹಮ್ಮದ್ ಯಾಸೀನ್ ಮಲ್ಪೆ, ಅಧ್ಯಕ್ಷರು, ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ

Leave a Reply

Your email address will not be published. Required fields are marked *

error: Content is protected !!