| ಬೆಂಗಳೂರು ಜ.25: ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಮಾಜಿ ಸಚಿವ ಎಂ.ಬಿ.ಪಾಟೀಲ್ ಅವರನ್ನು ನೇಮಿಸಿ ಕಾಂಗ್ರೆಸ್ ಹೈಕಮಾಂಡ್ ಮಹತ್ವದ ಆದೇಶ ಹೊರಡಿಸಿದೆ.
ಈ ಬಗ್ಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಆದೇಶ ಹೊರಡಿಸಿದ್ದು, ಚುನಾವಣಾ ವರ್ಷದಲ್ಲಿ ಕಾಂಗ್ರೆಸ್ ಲಿಂಗಾಯಿತ ಮತಬ್ಯಾಂಕ್ ಓಲೈಕೆಗೆ ಮುಂದಾಗಿದೆ.ಚುನಾವಣಾ ವರ್ಷದಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಮಹತ್ವದ ಸ್ಥಾನವಿದೆ. ಪ್ರಬಲ ಲಿಂಗಾಯಿತ ಸಮುದಾಯಕ್ಕೆ ಸೇರಿದ ಎಂ.ಬಿ.ಪಾಟೀಲ್ ಗೆ ಈ ಸ್ಥಾನ ನೀಡಿರುವುದರಿಂದ ಈಗ ಉತ್ತರ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಗೆ ಚಲನಶಕ್ತಿ ದೊರೆತಂತಾಗಿದೆ ಎಂದು ತಿಳಿಸಲಾಗಿದೆ.
ಇದೀಗ ಕಾಂಗ್ರೆಸ್ ಹೈಕಮಾಂಡ್ ಆದೇಶ ಕಾಂಗ್ರೆಸ್ ವಲಯದಲ್ಲಿ ಸಂಚಲನ ಮೂಡಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಡಿಕೆ ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಪಕ್ಷದ ಚಟುವಟಿಕೆಗಳಿಂದ ಎಂ.ಬಿ.ಪಾಟೀಲ್ ಅವರು ಬಹುಪಾಲು ದೂರ ಉಳಿದಿದ್ದರು. ಇದೀಗ ಸಿದ್ದರಾಮಯ್ಯ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ಎಂ.ಬಿ. ಪಾಟೀಲ್ ಅವರಿಗೆ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ ನೀಡಲಾಗಿದ್ದು, ಕಾಂಗ್ರೆಸ್ ಒಳ ರಾಜಕೀಯದ ಸ್ವರೂಪ ಇನ್ನಷ್ಟು ಬಿಗಡಾಯಿಸುತ್ತದೆಯೇ ? ಅಥವಾ ಎಲ್ಲರೂ ಒಟ್ಟಿಗೆ ಚುನಾವಣೆ ಎದುರಿಸುತ್ತಾರೆಯೋ ಎಂಬ ಕುತೂಹಲ ಸೃಷ್ಟಿಸಿದೆ. ಸದ್ಯ ಈ ಆದೇಶ ಕಾಂಗ್ರೆಸ್ ಅಂಗಳದಲ್ಲಿ ಯಾವ ರೀತಿ ತಿರುವು ಪಡೆದುಕೊಳ್ಳಲಿದೆ ಎನ್ನುವುದು ಕಾದುನೋಡಬೇಕಿದೆ. | |