ಖರ್ಚು, ವೆಚ್ಚ, ಪ್ರಸ್ತಾವನೆ ಮಂಜೂರಾತಿ ಗೊತ್ತಿಲ್ಲದೆ 13 ಬಜೆಟ್ ಮಂಡಿಸಿದ್ದೇನೆಯೇ?: ಸಿದ್ದರಾಮಯ್ಯ ತಿರುಗೇಟು

ಬೆಂಗಳೂರು: ವೈದ್ಯಕೀಯ ಉಪಕರಣಗಳ ಬಗ್ಗೆ ನ್ಯಾಯಾಂಗ ತನಿಖೆ ನಡೆಸಲು ಸರ್ಕಾರಕ್ಕೆ ಭಯವೇಕೆ?. ಸಚಿವರು ಸತ್ಯವಂತರು ಏನ್ನುವುದಾದರೆ ತನಿಖೆ ಬೇಡ ಎನ್ನುವುದೇಕೆ ? ಇದು ಭಂಡತನದ ಪರಮಾವಧಿ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ತಮ್ಮ ನಿವಾಸದಲ್ಲಿಂದು ತಮ್ಮನ್ನು ಭೇಟಿಯಾಗಿದ್ದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. 

ಸರ್ಕಾರ ಅಂದರೆ ಸಾಮೂಹಿಕ ಜವಾಬ್ದಾರಿ. ಹೀಗಾಗಿ ನಿನ್ನೆ ಐವರು ಸಚಿವರು ಸುದ್ದಿಗೋಷ್ಠಿ ಮಾಡಿದ್ದಾರೆ. ನಾವು ನಿನ್ನೆ ಸುದ್ದಿಗೋಷ್ಠಿ ನಡೆಸಿ ಅವ್ಯವಹಾರದ ಬಗ್ಗೆ 14 ದಾಖಲೆಗಳನ್ನು ಕೊಟ್ಟಿದ್ದೇವೆ. ಆದರೂ ಆ ದಾಖಲೆಗಳನ್ನು ಸಚಿವರು ನಿರಾಕರಿಸುತ್ತಾರೆ ಎಂದರೆ ಅವರು ಭಂಡರಿದ್ದಾರೆ. ಜನರಿಗೆ ಸತ್ಯಾಸತ್ಯತೆ ಗೊತ್ತಾಗಬೇಕು ಎಂದರೆ ಈ ಬಗ್ಗೆ ನ್ಯಾಯಾಂಗ ತನಿಖೆಯಾಗಲಿ. ಅದಕ್ಕೆ ಭಯವೇಕೆ ? ಸತ್ಯ ಹೊರ ಬಂದರೆ ಜನರೇ ತೀರ್ಮಾನ ಮಾಡುತ್ತಾರೆ. ನಮ್ಮ ಮತ್ತು ಅವರ ದಾಖಲೆಗಳು ನ್ಯಾಯಾಂಗ ತನಿಖೆಯ ಮುಂದೆ ಬರಲಿ ಎಂದು ಅವರು ಸವಾಲು ಹಾಕಿದ್ದಾರೆ.

ನಾವು ಸುಳ್ಳು ಹೇಳುತ್ತೇವೆ, ಅವರೇ ಸತ್ಯವಂತರು ಎನ್ನುವುದಾದರೆ ತನಿಖೆ ಬೇಡ ಎನ್ನುವುದೇಕೆ ? ಅದು ಭಂಡತನ ಅಲ್ಲವೇ ?. ಹೀಗಾಗಿ ಹೈಕೋರ್ಟ್‍ನ ಹಾಲಿ ನ್ಯಾಯಮೂರ್ತಿಗಳಿಂದ ತನಿಖೆಯಾಗಲಿ ಎಂದು ಮತ್ತೆ ಒತ್ತಾಯಿಸುತ್ತೇನೆ. ತನಿಖೆಗೆ ಸರ್ಕಾರ ಆದೇಶ ಮಾಡುವುದಿಲ್ಲ ಎಂದಾದರೆ ಅವರು ಕಳ್ಳತನ ಮಾಡಿದ್ದಾರೆ ಎಂದರ್ಥ. ನಾವು ತನಿಖೆಗೆ ಆಗ್ರಹಿಸಿದ ಮೇಲೆ ಕೆಲ ಉಪಕರಣಗಳ ಖರೀದಿಗೆ ನೀಡಿದ್ದ ಆದೇಶ ರದ್ದು ಮಾಡಲಾಗಿದೆ ಎಂಬುದರ ಬಗ್ಗೆ ನನಗೆ ತಿಳಿಯದು ಎಂದು ಸಿದ್ದರಾಮಯ್ಯ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸುದ್ದಿಗೋಷ್ಠಿಯಲ್ಲಿ ನಿನ್ನೆ ನಾವು ಕೊಟ್ಟಿರುವುದೂ ಸರ್ಕಾರಿ ದಾಖಲೆಗಳೇ ಆಗಿವೆ. ಅದು ಸುಳ್ಳು ಎನ್ನುವುದಾದರೆ ನಿನ್ನೆ ಸರ್ಕಾರದ ಪರವಾಗಿ ಸುದ್ದಿಗೋಷ್ಠಿ ನಡೆಸಿದವರೂ ಮಂತ್ರಿಗಳಾಗಿರುವುದೇ ಸುಳ್ಳಾ ? ಸರ್ಕಾರದಲ್ಲಿ ಇರುವ ದಾಖಲೆಗಳೇ ಸುಳ್ಳಾ?. ನಾವು ಕೊಟ್ಟಿರುವ ದಾಖಲೆಗಳನ್ನು ನಾನು ಸೃಷ್ಟಿ ಮಾಡಿದ್ದಲ್ಲ. ಉದಾಹರಣೆಗೆ ಕೇಂದ್ರ ಸರ್ಕಾರ ಪಿಎಂಒ ಕಚೇರಿಯಿಂದ ಹೊರಡಿಸಿರುವ ಪ್ರಕಟಣೆಯಲ್ಲಿ 50 ಸಾವಿರ ವೆಂಟಿಲೇಟರ್‌ಗಳನ್ನು ತಲಾ ನಾಲ್ಕು ಲಕ್ಷ ರೂ. ವೆಚ್ಚದಲ್ಲಿ ಖರೀದಿಸಲಾಗಿದೆ. ಇದಕ್ಕಾಗಿ ಎರಡು ಸಾವಿರ ಕೋಟಿ ರೂ.ವೆಚ್ಚ ಮಾಡಲಾಗಿದೆ ಎಂದು ತಿಳಿಸಿದೆ. 

ಕೇಂದ್ರ ಸರ್ಕಾರ ಹೇಳಿರುವುದು ಸುಳ್ಳು. ನಮಗೆ ಕೊಟ್ಟಿರುವ ವೆಂಟಿಲೇಟರ್‌ಗಳೂ ಕಳಪೆ ಎಂದು ಮಂತ್ರಿಗಳು ಹೇಳಲಿ ಎಂದು ಸವಾಲು ಹಾಕಿದರು. ಗುಣಮಟ್ಟದ ವಿಚಾರಕ್ಕೆ ಬರುವುದಾದರೆ ಕಾರುಗಳಲ್ಲಿ ಐಷಾರಾಮಿಯೂ ಇರುತ್ತದೆ. ಸಾಮಾನ್ಯದ್ದೂ ಇರುತ್ತದೆ. ಕೇಂದ್ರ ಸರ್ಕಾರ ಸಹ 18 ಲಕ್ಷ ರೂ. ವೆಚ್ಚದಲ್ಲಿಯೇ ವೆಂಟಿಲೇಟರ್ ಖರೀದಿ ಮಾಡಬಹುದಿತ್ತು. ಕೇಂದ್ರ ಸಕಾರ 4 ಲಕ್ಷ ರೂ. ವೆಚ್ಚದಲ್ಲಿ ಖರೀದಿ ಮಾಡಿರುವುದು ಸುಳ್ಳೇ ? ಇದಕ್ಕೆ ಮಂತ್ರಿಗಳು ನೀಡುವ ಉತ್ತರ ಏನು ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಕಾರ್ಮಿಕ ಇಲಾಖೆಯಲ್ಲಿ ಒಂದು ಸಾವಿರ ಕೋಟಿ ರೂ.ಗಳ ಅವ್ಯವಹಾರ ಆಗಿದೆ ಎಂದು ಹೇಳಿಲ್ಲ. ಅಷ್ಟು ಖರ್ಚಾಗಿದೆ ಎಂದಿದ್ದೇನೆ. ಆದರೆ ಫುಡ್ ಪ್ಯಾಕೇಟ್ ಕೊಡುವಲ್ಲಿ ಅವ್ಯವಹಾರ ಆಗಿದೆ. ಒಂದು ಸಾವಿರ ಕೋಟಿ ಖರ್ಚಾಗಿದೆ ಅದಕ್ಕೆ ಲೆಕ್ಕ ಕೊಡಿ ಎಂದು ಕೇಳಿದ್ದೇನೆ. ಇವರು 324 ಕೋಟಿ ರೂ.ಮಾತ್ರ ಖರ್ಚು ಆಗಿದೆ ಎನ್ನುತ್ತಾರೆ. ಆದರೆ ನಿನ್ನೆ ಮಂತ್ರಿಗಳೇ 2118 ಕೋಟಿ ರೂ. ವೆಚ್ಚ ಆಗಿದೆ ಎಂದಿದ್ದು ಏಕೆ? ಅವರೇ ಸುಳ್ಳು ಲೆಕ್ಕ ಕೊಡುತ್ತಿದ್ದಾರೆ ಎಂಬುದು ಇದರ ಅರ್ಥವಲ್ಲವೇ ? ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ವೈದ್ಯಕೀಯ ಶಿಕ್ಷಣ ಇಲಾಖೆಯ ಕಡತದಲ್ಲಿ ಇರುವ ವಿಚಾರದ ಬಗ್ಗೆ ಪ್ರಸ್ತಾಪಿಸುವಾಗ, 815 ಕೋಟಿಗೆ ಪ್ರಸ್ತಾವನೆ ಕಳುಹಿಸಿರುವುದು ನಿಜ. ತಜ್ಞರ ಶಿಫಾರಸು ಇಲ್ಲದೆ ಉಪಕರಣಗಳ ಖರೀದಿಗೆ ಮುಂದಾಗಿರುವುದಾಗಿ ಟಿಪ್ಪಣಿ ಬರೆಯಲಾಗಿದೆ ಎಂದು ಹೇಳಿದ್ದೇನೆ. ಖರ್ಚು, ವೆಚ್ಚ, ಪ್ರಸ್ತಾವನೆ ಮಂಜೂರಾತಿ, ಹಣ ಬಿಡುಗಡೆ ಏನು ಎಂಬುದು ಗೊತ್ತಿಲ್ಲದೆ ನಾನು 13 ಬಜೆಟ್ ಮಂಡಿಸಿದ್ದೇನೆಯೇ ಎಂದು ಸುಧಾಕರ್ ಗೆ ತಿರುಗೇಟು ನೀಡಿದರು. ಸುಧಾಕರ್ ಅವರು ಮಂತ್ರಿಯಾಗಿ ಎಷ್ಟು ವರ್ಷ ಆಯಿತು. ನಾನು ಮೊದಲ ಬಾರಿಗೆ ಮಂತ್ರಿಯಾಗಿದ್ದು ಯಾವಾಗ. ಅವರಿಗೆ ಸ್ವಲ್ಪ ಉಪಕಾರ ಸ್ಮರಣೆ ಇರಬೇಕು. ನಾನು ರಾಜ್ಯ ಮಂತ್ರಿ, ಸಂಪುಟ ದರ್ಜೆ ಮಂತ್ರಿ, ಉಪ ಮುಖ್ಯಮಂತ್ರಿ, ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ್ದೇನೆ. 13 ಬಾರಿ ಬಜೆಟ್ ಮಂಡಿಸಿದ್ದೇನೆ. ಹೀಗಿರುವಾಗ ಸುಧಾಕರ್ ಅವರೇ ನನಗೇ ಪಾಠ ಹೇಳಿಕೊಟ್ಟರೆ ಹೇಗೆ ? ಎಂದು ತಿರುಗೇಟು ನೀಡಿದ್ದಾರೆ.

ಅಧಿಕಾರದ ಅಹಂನಿಂದ ಅವರು ಈ ರೀತಿ ಮಾತನಾಡುತ್ತಾರೆ. ಉಪಕಾರ ಸ್ಮರಣೆ ಮರೆತು ಬಾಯಿಗೆ ಬಂದಂತೆ ಮಾತನಾಡಬಾರದು. ಅಧಿಕಾರ ಬಂದ ಬಳಿಕ ಎಲ್ಲವನ್ನೂ ಮರೆಯಬಾರದು. ನಿನ್ನೆ ದಾಖಲಾತಿಗಳ ಮೂಲಕ ನಾನು ಮಾತನಾಡಿದ್ದೇನೆ. ಅವರು ಏನಾದರೂ ದಾಖಲೆಗಳನ್ನು ಕೊಟ್ಟಿದ್ದಾರೆಯೇ? ಸಮ್ಮಿಶ್ರ ಸರ್ಕಾರ ಇದ್ದಾಗ ಖರೀದಿ
ಮಾಡಿರುವ ವೆಂಟಿಲೇಟರ್ ಗಳ ಬಗ್ಗೆ ಅವರು ಮಾತನಾಡಿದ್ದಾರೆ. ನಾನು ಆಗ ಅಧಿಕಾರದಲ್ಲಿ ಇರಲಿಲ್ಲ. ಮುಖ್ಯಮಂತ್ರಿಯೂ ಆಗಿರಲಿಲ್ಲ. ದಾಖಲೆಗಳು ಅವರ ಬಳಿಯೇ ಇದೆ ಅಲ್ಲವೇ ? ಆ ಬಗ್ಗೆಯೂ ತನಿಖೆ ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳಲಿ. ಯಾರು ತಪ್ಪು ಮಾಡಿದರೂ, ಯಾವಾಗ ತಪ್ಪು ಮಾಡಿದರೂ ತಪ್ಪೇ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಸಚಿವರು ಪಾಂಡವರು, ಕೌರವರ ಬಗ್ಗೆ ಮಾತನಾಡಿದ್ದೇನೆ. ಅವರು ಕೌರವರು ಆಗಲಿಕ್ಕೂ ಲಾಯಕ್ಕಿಲ್ಲ. ಮಹಾಭಾರತದ ಪಾಂಡವರು, ಕೌರವರ ವಿಚಾರ ಈಗ ಏಕೆ. ದ್ವಾಪರ ಯುಗದಲ್ಲಿ ನಡೆದಿದ್ದನ್ನು ಈಗ ಈ ವಿಚಾರದಲ್ಲಿ ಎಳೆದು ತರುವುದೇಕೆ ? ಎಂದು ವ್ಯಂಗ್ಯವಾಡಿದರು. ಸಿದ್ದರಾಮಯ್ಯ ಈಸ್ ಸಿದ್ದರಾಮಯ್ಯ: ಸಿದ್ದರಾಮಯ್ಯ ಈಸ್ ಸಿದ್ದರಾಮಯ್ಯ. ನಾನು ನನ್ನನ್ನು ಬೇರೆಯವರಿಗೆ ಹೋಲಿಕೆ ಮಾಡಿಕೊಳ್ಳುವುದಿಲ್ಲ. ನಾನು ಪಾಂಡವನೂ ಅಲ್ಲ, ಕೌರವನೂ ಅಲ್ಲ, ಐಯಾಮ್ ಸಿದ್ದರಾಮಯ್ಯ  ಓನ್ಲಿ ಎಂದು ತಮ್ಮ ಎಂದಿನ ಶೈಲಿಯಲ್ಲಿ ಮಾಜಿ ಮುಖ್ಯಮಂತ್ರಿ ಹೇಳಿದರು.


ಈವತ್ತು ಏನಾದರೂ ನೀತಿ, ನಿಯಮಗಳು ಇದ್ದರೆ ರಾಮಾಯಣ, ಮಹಾಭಾರತವೇ ಅದನ್ನು ಹೇಳಿಕೊಡುವುದು. ನಮಗೆ ರಾಜಕೀಯ ಹೇಳಿಕೊಡುವುದು ರಾಮಾಯಣ, ಮಹಾಭಾರತವೇ ಎಂದು ಸಿದ್ದರಾಮಯ್ಯ ಅವರು ಹೇಳಿದರು.

Leave a Reply

Your email address will not be published. Required fields are marked *

error: Content is protected !!