ಪರೀಕ್ಷೆ ತ್ವರಿತಗೊಳಿಸಿ ಸೋಂಕು ಹರಡುವುದನ್ನು ತಪ್ಪಿಸಿ: ಕರ್ನಾಟಕ ಸೇರಿ 8 ರಾಜ್ಯಗಳಿಗೆ ಕೇಂದ್ರ ಸೂಚನೆ

ಬೆಂಗಳೂರು:ಕೋವಿಡ್-19 ಕರ್ನಾಟಕದಲ್ಲಿ ಮತ್ತು ಇತರ 8 ರಾಜ್ಯಗಳಲ್ಲಿ ಹೇಗೆ ನಿರ್ವಹಿಸಲಾಗುತ್ತಿದೆ ಎಂದು ಕೇಂದ್ರ ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ ನಿನ್ನೆ ಪರಿಶೀಲನೆ ನಡೆಸಿದರು.

ಕೊರೋನಾ ಶಂಕಿತರ ಪರೀಕ್ಷೆಯನ್ನು ಹೆಚ್ಚಿಸಿ, ಕಂಟೈನ್ ಮೆಂಟ್ ಯೋಜನೆಗಳನ್ನು ಕಡ್ಡಾಯವಾಗಿ ಜಾರಿಗೆ ತಂದು, ಆರೋಗ್ಯ ಮೂಲಸೌಕರ್ಯಗಳನ್ನು ಹೆಚ್ಚಿಸಿ, ಪ್ರಾಯೋಗದ ನಿರ್ವಹಣೆಯನ್ನು ಪರಿಣಾಮಕಾರಿಯಾಗಿ ಮಾಡಬೇಕೆಂದು ಕೇಂದ್ರ ಸರ್ಕಾರ ರಾಜ್ಯಕ್ಕೆ ಸಲಹೆ ನೀಡಿದೆ.

ಕರ್ನಾಟಕದ ಜೊತೆಗೆ ತೆಲಂಗಾಣ, ಆಂಧ್ರ ಪ್ರದೇಶ, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಒಡಿಶಾ, ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ರಾಜ್ಯಗಳಲ್ಲಿನ ಕೋವಿಡ್-19 ಸ್ಥಿತಿಗತಿಯನ್ನು ಪರಿಶೀಲನೆ ನಡೆಸಲಾಯಿತು. ಸೋಂಕನ್ನು ಪರಿಣಾಮಕಾರಿಯಾಗಿ ತಡೆಯುವುದು ಮತ್ತು ನಿರ್ವಹಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮನ್ವಯದಿಂದ ಕಾರ್ಯತಂತ್ರ ರೂಪಿಸಲು 9 ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಮತ್ತು ಆರೋಗ್ಯ ಕಾರ್ಯದರ್ಶಿಗಳ ಜೊತೆಗೆ ಗೌಬಾ ಉನ್ನತ ಮಟ್ಟದ ವರ್ಚುವಲ್ ಪರಾಮರ್ಶೆ ಸಭೆ ನಡೆಸಿದರು.

ಪರೀಕ್ಷೆ ಪತ್ತೆ ಚಿಕಿತ್ಸೆ ಕಾರ್ಯತಂತ್ರದ ಭಾಗವಾಗಿ ರಾಜ್ಯಗಳಲ್ಲಿ ಕೊರೋನಾ ಶಂಕಿತರ ತಪಾಸಣೆಯನ್ನು ವೇಗವಾಗಿ ಮಾಡುವಂತೆ ಅದರಲ್ಲೂ ವಿಶೇಷವಾಗಿ ಕಂಟೈನ್ ಮೆಂಟ್ ವಲಯಗಳ ಮೇಲೆ ಪ್ರಮುಖ ಗಮನ ಕೇಂದ್ರೀಕರಿಸುವಂತೆ ಸಭೆಯಲ್ಲಿ ಸೂಚಿಸಲಾಯಿತು. ಕೆಲವು ರಾಜ್ಯಗಳಲ್ಲಿ ತಪಾಸಣೆ, ಪರೀಕ್ಷೆ ಕುಂಠಿತವಾಗಿ ಸಾಗುತ್ತಿದೆ, ಸೋಂಕು ವ್ಯಾಪಕವಾಗಿ ಹರಡುವುದನ್ನು ತಡೆಗಟ್ಟಲು ಆರಂಭದಲ್ಲಿಯೇ ತಪಾಸಣೆಯನ್ನು ವೇಗವಾಗಿ ಮಾಡಬೇಕು ಎಂಬ ಸಲಹೆ ಕೇಳಿಬಂತು.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮಾರ್ಗಸೂಚಿ ಪ್ರಕಾರ ಕಂಟೈನ್ ಮೆಂಟ್ ವಲಯಗಳಲ್ಲಿ ಸೂಕ್ತ ಮತ್ತು ಸರಿಯಾದ ತಪಾಸಣೆ, ಮನೆ ಮನೆಗಳಲ್ಲಿ ಹೋಗಿ ಕೊರೋನಾ ಶಂಕಿತರನ್ನು ಪತ್ತೆಹಚ್ಚುವುದು, ಸೋಂಕು ಹರಡುವುದನ್ನು ತಪ್ಪಿಸುವುದು, ಕಂಟೈನ್ ಮೆಂಟ್ ವಲಯಗಳ ಅಕ್ಕಪಕ್ಕದ ಪ್ರದೇಶಗಳಲ್ಲಿ ಕೂಡ ಸೂಕ್ತ ನಿಗಾವಹಿಸುವುದು ಮೊದಲಾದವುಗಳನ್ನು ಪಾಲಿಸಬೇಕು ಎಂದು ಕಾರ್ಯದರ್ಶಿಗಳು ಚರ್ಚೆ ಮಾಡಿದರು.

Leave a Reply

Your email address will not be published. Required fields are marked *

error: Content is protected !!