‘ಬದುಕನ್ನೇ ಕಸಿಯುತ್ತಿರುವ ಸಮಯದಲ್ಲಿ ಅಕ್ರಮ ನಡೆದಿದ್ದರೇ, ಅದು ಮನುಷ್ಯ ಹೀನ ಕೃತ್ಯವೇ ಸರಿ’

ಬೆಂಗಳೂರು: ಕೊರೋನಾದಿಂದಾಗಿ ಜನ, ಜೀವನಕ್ಕೆ ಬೆದರಿಕೆ ಎದುರಾಗಿರುವ ಹೊತ್ತಿನಲ್ಲಿ ಹಳೇ ಪಕ್ಷ ಮತ್ತು ಆಡಳಿತಾರೂಢ ಪಕ್ಷ ಕೆಸರೆರಚಾಟದಲ್ಲಿ ತೊಡಗಿರುವುದು ಬೇಸರ ತರಿಸಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಅವರು ಹೆಸರು ಹೇಳದೇ ಕಾಂಗ್ರೆಸ್‌ ಮತ್ತು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. 

ಕೋವಿಡ್ 19 ನಿಯಂತ್ರಣ ಸಂಬಂಧ ವೈದ್ಯಕೀಯ ಪರಿಕರ ಖರೀದಿಯಲ್ಲಿ ರಾಜ್ಯ ಸರ್ಕಾರ 2 ಸಾವಿರ ಕೋಟಿ ಅವ್ಯವಹಾರ ನಡೆಸಿದೆ ಎಂದು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಆರೋಪ ಮಾಡಿದ್ದರು. ಈ ಆರೋಪಕ್ಕೆ ರಾಜ್ಯ ಸರ್ಕಾರದ ಸಚಿವರುಗಳು ನಾವು ಯಾವುದೇ ಅವ್ಯವಹಾರ ಎಸಗಿಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಆರೋಪ-ಪ್ರತ್ಯಾರೋಪ ಸಂಬಂಧ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಟ್ವೀಟ್ ಮಾಡಿ, ಎರಡು ಪಕ್ಷಗಳಿಗೂ ಕಿವಿಹಿಂಡಿದ್ದಾರೆ.

ಕೋವಿಡ್-19 ಪರಿಕರಗಳ ಖರೀದಿ ಅಕ್ರಮದ ಬಗೆಗಿನ ಅತ್ಯಂತ ಹಳೇ ರಾಷ್ಟ್ರೀಯ ಪಕ್ಷವೊಂದರ ಆರೋಪ, ಅದಕ್ಕೆ ಪ್ರತಿಯಾಗಿ ಆಡಳಿತ ಪಕ್ಷದ ಪ್ರತ್ಯಾರೋಪ, ಕಸರೆರಚಾಟವನ್ನು ಗಮನಿಸಿದೆ. ಕೋವಿಡ್‌ ಈ ರಾಜ್ಯದ ಪ್ರತಿಯೊಬ್ಬನ ಜೀವ, ಜೀವನಕ್ಕೆ ಬೆದರಿಕೆಯೊಡ್ಡಿರುವಾಗ, ಬದುಕನ್ನೇ ಕಸಿಯುತ್ತಿರುವಾಗ ಎರಡೂ ಪಕ್ಷಗಳ ಬೇಜವಾಬ್ದಾರಿ ವರ್ತನೆ ಕಂಡು ಬೇಸರವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪರಿಕರಗಳ ಖರೀದಿಯಲ್ಲಿ ಸರ್ಕಾರ ಅಕ್ರಮ ಎಸಗಿದ್ದರೆ ಅದು ನಿಜಕ್ಕೂ ಹೀನ ಕೃತ್ಯವೇ ಸರಿ. ಇಲ್ಲವೇ ಕೇವಲ ಸುದ್ದಿಯಲ್ಲಿ ಇರುವ ಸಲುವಾಗಿ ಕಾಂಗ್ರೆಸ್ ಈ ಆರೋಪ ಮಾಡಿದ್ದರೆ ಅದು ಆ ಪಕ್ಷದ ನಾಯಕರ ರಾಜಕೀಯ ದಾಹದ ಸೂಚಕ ಎಂದು ಎರಡು ಪಕ್ಷಗಳ ನಾಯಕರ ಕಾಲೆಳೆದಿದ್ದಾರೆ.

Leave a Reply

Your email address will not be published. Required fields are marked *

error: Content is protected !!