ಸಿದ್ದರಾಮಯ್ಯ ಲೆಕ್ಕಕೊಡಿ ಅಭಿಯಾನಕ್ಕೆ ಪ್ರತಿಯಾಗಿ ಡಿಕೆಶಿಯಿಂದ ‘ಉತ್ತರ ಕೊಡಿ’ ಅಭಿಯಾನ!
ಬೆಂಗಳೂರು: ಕೊರೋನಾ ಚಿಕಿತ್ಸಾ ಉಪಕರಣ ಖರೀದಿಯಲ್ಲಿ ಭಾರೀ ಹಗರಣ ನಡೆದಿದೆ ಎಂದು ಗಂಭೀರ ಆರೋಪ ಮಾಡಿರುವ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ರಾಜ್ಯ ಸರ್ಕಾರದ ವಿರುದ್ಧ ಲೆಕ್ಕಕೊಡಿ ಅಭಿಯಾನ ಆರಂಭಿಸಿದ್ದರೆ, ಇತ್ತ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ “ಉತ್ತರ ಕೊಡಿ-ಬಿಜೆಪಿ” ಎನ್ನುವ ಘೋಷಣೆ ಮೊಳಗಿಸಿದ್ದಾರೆ.
ವೆಂಟಿಲೇಟರ್ ಖರೀದಿಯಲ್ಲಿ ಭಾರೀ ಅಕ್ರಮ ನಡೆಸಲಾಗಿದೆ. ತಮಿಳುನಾಡು ಸರ್ಕಾರ ತಲಾ 4.78 ಲಕ್ಷ ರೂ.ಗೆ ಖರೀದಿಸಿದ ವೆಂಟಿಲೇಟರ್ ಗೆ ರಾಜ್ಯ ಸರಕಾರ 18.20 ಲಕ್ಷ ರುಪಾಯಿ ಕೊಟ್ಟಿದೆ. ಈ ಕೊರೋನಾ ಭ್ರಷ್ಟಾಚಾರದ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉತ್ತರ ಕೊಡಬೇಕಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ವೆಂಟಿಲೇಟರ್ ಸಿಗದೆ ಕರ್ನಾಟಕದ ಕೊರೋನಾ ಸೋಂಕಿತರು ಸಾವನ್ನಪ್ಪುತ್ತಿದ್ದರೆ, ಬಿಜೆಪಿ ಮಂತ್ರಿಗಳು ಪಿಪಿಇ ಕಿಟ್ ಗಳಿಂದ ಹಿಡಿದು ಬೆಡ್ ಗಳವರೆಗೆ ಎಲ್ಲ ಕೊರೋನಾ ಚಿಕಿತ್ಸೆ ಸಲಕರಣೆಗಳ ಖರೀದಿಯಲ್ಲಿ ಭ್ರಷ್ಟಾಚಾರ ನಡೆಸಿದ್ದು, ಭ್ರಷ್ಟತೆಯಲ್ಲಿ ಮುಳುಗಿ ಹೋಗಿದ್ದಾರೆ. ಬಿಜೆಪಿ ಸರಕಾರ ಕೊರೋನಾ ಸಂಕಷ್ಟ ಸಂದರ್ಭವನ್ನೂ ಲೂಟಿ ಮಾಡಲು ಬಳಸಿಕೊಂಡಿದೆ ಎಂದು ಆರೋಪಿಸಿರುವ ಶಿವಕುಮಾರ್ “#ಉತ್ತರಕೊಡಿಬಿಜೆಪಿ ” ಟ್ವಿಟ್ಟರ್ ಅಭಿಯಾನ ಆರಂಭಿಸಿದ್ದಾರೆ.
ಸಿದ್ದರಾಮಯ್ಯ ಆರಂಭಿಸಿರುವ ಲೆಕ್ಕಕೊಡಿ ಆಂದೋಲನಕ್ಕೆ ಡಿ.ಕೆ.ಶಿವಕುಮಾರ್ ತನ್ನದೇ ಆದ ಮೊತ್ತೊಂದು ರೂಪದಲ್ಲಿನ ಹೋರಾಟಕ್ಕೆ ಇಳಿದಿದ್ದಾರೆ. ಲೆಕ್ಕಕೊಡಿ ಎಂದು ಸಿದ್ದರಾಮಯ್ಯ ಹಾಗೂ ಅವರ ಆಪ್ತರು ಕೇಳುತ್ತಿದ್ದಾರಷ್ಟೆ. ಶಿವಕುಮಾರ್ ಈಗ ಲೆಕ್ಕಕೇಳುವ ಸಮಯವಲ್ಲ. ಜನರ ರಕ್ಷಣೆಯ ಸಮಯ ಎನ್ನುವ ಮೂಲಕ ಸಿದ್ದರಾಮಯ್ಯ ಲೆಕ್ಕಕೊಡಿ ಅಭಿಯಾನವನ್ನು ನಿರ್ಲಕ್ಷಿಸಿದ್ದರು.
ಇದೀಗ ತಮಿಳುನಾಡಿನ ವೆಂಟಿಲೇಟರ್ ಖರೀದಿ ದಾಖಲೆಗಳನ್ನು ಮುಂದಿಟ್ಟುಕೊಂಡು ರಾಜ್ಯದಲ್ಲಿ ಅಕ್ರಮ ನಡೆದಿದೆ. ಹೀಗಾಗಿ ಉತ್ತರ ಕೊಡಿ ಎಂದು ಡಿ.ಕೆ. ಶಿವಕುಮಾರ್ ಹೇಳುತ್ತಿದ್ದಾರೆ.