ತೀವ್ರ ಸಂಘರ್ಷಕ್ಕೆ ಎಡೆಮಾಡಿದ್ದ ಆ ಮೂರು ತಿದ್ದುಪಡಿ ಕೃಷಿ ಕಾಯ್ದೆಗಳು ಯಾವುವು?

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಮೂರು ಕೃಷಿ ಕಾಯ್ದೆಗಳ ವಿರುದ್ಧ ರೈತರಿಂದ, ವಿರೋಧ ಪಕ್ಷಗಳಿಂದ ತೀವ್ರ ಆಕ್ರೋಶ ವ್ಯಕ್ತವಾದ ಬಳಿಕ ಕೇಂದ್ರ ಸರ್ಕಾರ ಶುಕ್ರವಾರ ವಿವಾದಿತ ಕೃಷಿ ಕಾನೂನುಗಳನ್ನು ವಾಪಸ್​ ಪಡೆದಿದೆ.ಖುದ್ದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೇ ಮೂರು ತಿದ್ದುಪಡಿ ಕೃಷಿ ಕಾಯ್ದೆಗಳನ್ನು ಇದೇ ತಿಂಗಳ ಸಂಸತ್ತಿನ ಚಳಿಗಾಲ ಅಧಿವೇಶನದಲ್ಲಿ ಹಿಂಪಡೆಯಲಾಗುವುದು ಎಂದು ಘೋಷಿಸಿದ್ದಾರೆ. 

ಇಂದು ಬೆಳಗ್ಗೆ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿದ ಅವರು , ಎಲ್ಲಾ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಿಲು ನಾವು ನಿರ್ಧರಿಸಿದ್ದೇವೆ. ತಿದ್ದುಪಡಿ ರೈತರ ಮಸೂದೆಗಳ ಬಗ್ಗೆ ಒಂದು ವರ್ಗದ ರೈತರ ಮನವೊಲಿಸಲು ಸಾಧ್ಯವಾಗಿಲ್ಲ, ಹೀಗಾಗಿ ಹಿಂಪಡೆಯುತ್ತಿದ್ದೇವೆ. ಪ್ರತಿಭಟನಾನಿರತ ರೈತರು ಮನೆಗಳಿಗೆ ತೆರಳುವಂತೆ ಪ್ರಧಾನಿ ಇದೇ ಸಂದರ್ಭದಲ್ಲಿ ಮನವಿ ಮಾಡಿಕೊಂಡಿರು.

ಮೂರು ತಿದ್ದುಪಡಿ ಮಸೂದೆಗಳು: ಕೇಂದ್ರ ಸರ್ಕಾರ ತಂದಿದ್ದ ಮೂರು ಕೃಷಿ ತಿದ್ದುಪಡಿ ಕಾಯ್ದೆಗಳು: ಬೆಲೆ ಖಾತರಿ ಮತ್ತು ಕೃಷಿ ಸೇವೆಗಳಿಗೆ ರೈತರ(ಸಬಲೀಕರಣ ಮತ್ತು ರಕ್ಷಣೆ) ಒಪ್ಪಿಗೆ ಕಾಯ್ದೆ, ಕೃಷಿ ಉತ್ಪನ್ನಗಳ ವ್ಯಾಪಾರ ಮತ್ತು ಮಾರಾಟ(ಉತ್ತೇಜನ ಮತ್ತು ನೆರವು)ಕಾಯ್ದೆ, ಅಗತ್ಯ ವಸ್ತುಗಳ (ತಿದ್ದುಪಡಿ)ಕಾಯ್ದೆಗಳು.

ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಅನುಕೂಲ) ಕಾಯಿದೆಯು ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ (ಎಪಿಎಂಸಿ) ಹೊರಗೆ ಮಾರಾಟ ಮಾಡಲು ಅನುವು ಮಾಡಿಕೊಡಲಾಗಿತ್ತು. ರೈತರ (ಸಬಲೀಕರಣ ಮತ್ತು ರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯಿದೆಯು ರೈತರಿಗೆ ಗುತ್ತಿಗೆ ಕೃಷಿ ಮಾಡಲು ಮತ್ತು ತಮ್ಮ ಉತ್ಪನ್ನಗಳನ್ನು ಮುಕ್ತವಾಗಿ ಮಾರಾಟ ಮಾಡಲು ಅನುವು ಮಾಡಿಕೊಡುವುದು ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯಿದೆಯು ಅಗತ್ಯ ವಸ್ತುಗಳ ಕಾಯಿದೆಗೆ ತಿದ್ದುಪಡಿಯಾಗಿತ್ತು.

ಪಂಜಾಬ್, ಹರಿಯಾಣ ಮತ್ತು ಪಶ್ಚಿಮ ಉತ್ತರ ಪ್ರದೇಶದ ಸಾವಿರಾರು ರೈತರು ಕಳೆದ ವರ್ಷ ನವೆಂಬರ್ 26 ರಿಂದ ದೆಹಲಿಯ ಹಲವಾರು ಗಡಿ ಕೇಂದ್ರಗಳಲ್ಲಿ ಕ್ಯಾಂಪ್ ಗಳನ್ನು ಮಾಡಿಕೊಂಡು, ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿಕೊಂಡು ಬಂದಿದ್ದರು. ಕಳೆದ ಜನವರಿ 26ರಂದು ಗಣರಾಜ್ಯೋತ್ಸವ ಸಂದರ್ಭದಲ್ಲಿ ದೆಹಲಿಯ ಕೆಂಪುಕೋಟೆ ಬಳಿಯಲ್ಲಿನ ರೈತರ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿ ಸಾವು ನೋವು ಸಂಭವಿಸಿದ್ದವು. 

ಪಂಜಾಬ್ ಮತ್ತು ಹರಿಯಾಣದ ರೈತ ಸಂಘಗಳು ಕೇಂದ್ರ ಜಾರಿಗೆ ತಂದ ಕಾನೂನುಗಳು ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ವ್ಯವಸ್ಥೆಯನ್ನು ಕಿತ್ತುಹಾಕುತ್ತವೆ. ಇದು ದೊಡ್ಡ ದೊಡ್ಡ ಉದ್ಯಮಿಗಳು, ಕಾರ್ಪೊರೇಟರ್ ಗಳ ಪರವಾಗಿದೆ. ರೈತರು ತಮ್ಮ ಬೆಳೆಗಳಿಗೆ ಕಡಿಮೆ ಬೆಲೆ ಪಡೆಯುತ್ತಾರೆ, ತಮ್ಮ ಬೆಳೆಗಳಿಗೆ ಖಚಿತವಾದ ಬೆಲೆಯನ್ನು ಪಡೆಯುವುದಿಲ್ಲ ಎಂದು ರೈತರ ವಿರೋಧವಾಗಿತ್ತು.

Leave a Reply

Your email address will not be published. Required fields are marked *

error: Content is protected !!