ಹೇಗೆ ಮೈ ಸ್ಪರ್ಷಿಸಿದರೂ ಲೈಂಗಿಕ ದೌರ್ಜನ್ಯವಾಗುತ್ತದೆ- ಸುಪ್ರೀಂ ಕೋರ್ಟ್ ಮಹತ್ವದ ಆದೇಶ

ನವದೆಹಲಿ ನ.19: ಹೇಗೆ ಮೈ ಸ್ಪರ್ಷಿಸಿದರೂ ಲೈಂಗಿಕ ದೌರ್ಜನ್ಯವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. 

ನ್ಯಾಯಮೂರ್ತಿ ಯು ಲಲಿತ್, ಎಸ್ ರವೀಂದ್ರ ಭಟ್, ಬೇಲಾ ತ್ರಿವೇದಿ ಒಳಗೊಂಡ ತ್ರಿಸದಸ್ಯ ಪೀಠ ಈ ಮಹತ್ವದ ಆದೇಶ ನೀಡಿದೆ. ಚರ್ಮಕ್ಕೆ ಚರ್ಮ ಸ್ಪರ್ಶಿಸಿದರೆ ಅನ್ನೋ ವ್ಯಾಖ್ಯಾನ ಸಂಪೂರ್ಣವಾಗಿ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಯ ಉದ್ದೇಶವನ್ನೇ ಮರೆ ಮಾಚುತ್ತಿದೆ. ಕೆಟ್ಟ ಉದ್ದೇಶದಿಂದ, ಕಾಮದಿಂದ ಸ್ಪರ್ಶಿಸುವುದು ಲೈಂಗಿಕ ಅಪರಾಧವಾಗಿದೆ. ಪೋಕ್ಸೋ ಕಾಯ್ದೆಯಡಿ ಮಗುವಿನ ಮೇಲಿನ ಲೈಂಗಿಕ ದೌರ್ಜನ್ಯವನ್ನು ಸಾಬೀತುಪಡಿಸುವಲ್ಲಿ ಆರೋಪಿಯ ಲೈಂಗಿಕ ಉದ್ದೇಶ ಮುಖ್ಯವೇ ಹೊರತು ಚರ್ಮಕ್ಕೆ ಚರ್ಮತಾಗುವುದಲ್ಲ’ ಎಂದು ನ್ಯಾಯಪೀಠ ಸ್ಪಷ್ಟವಾಗಿ ಹೇಳಿದೆ.

ಮಗುವಿನ ಮೇಲಿನ ಲೈಂಗಿಕ ದೌರ್ಜನ್ಯದ ಪ್ರಕರಣವೊಂದರಲ್ಲಿ ‘ಚರ್ಮಕ್ಕೆ ಚರ್ಮತಾಗಿಲ್ಲ’ ಎಂಬ ಕಾರಣ ನೀಡಿ ಆರೋಪಿ ಯನ್ನು ಖುಲಾಸೆಗೊಳಿಸಿದ್ದ ಬಾಂಬೆ ಹೈಕೋರ್ಟ್‌ನ ಬಹುಚರ್ಚಿತ ವಿವಾದಿತ ತೀರ್ಪನ್ನು ರದ್ದುಪಡಿಸಿದ ಸುಪ್ರೀಂಕೋರ್ಟ್‌ ಈ ಆದೇಶ ನೀಡಿದೆ.ಗುಪ್ತಾಂಗಗಳನ್ನು ಸ್ಪರ್ಶಿಸುವುದು ಅಥವಾ ಇನ್ನಾವುದೇ ರೀತಿಯ ದೈಹಿಕ ಸ್ಪರ್ಶವು ಲೈಂಗಿಕ ಉದ್ದೇಶದಿಂದ ಕೂಡಿದ್ದಾಗಿದ್ದರೆ ಅದು ಪೋಕ್ಸೋ ಕಾಯ್ದೆಯ ಸೆಕ್ಷನ್‌ 7ರಡಿ ಲೈಂಗಿಕ ದೌರ್ಜನ್ಯವಾಗುತ್ತದೆ. ಕಾಯ್ದೆಯ ಉದ್ದೇಶವು ಸ್ಪಷ್ಟವಾಗಿದ್ದು, ಅದರಲ್ಲಿ ಕೋರ್ಟ್‌ಗಳು ಗೊಂದಲ ಹುಡುಕಬಾರದು ಎಂದೂ ಸುಪ್ರೀಂಕೋರ್ಟ್‌ ಸೂಚನೆ ನೀಡಿದೆ.

ಬಾಂಬೈ ಹೈಕೋರ್ಟ್ ತೀರ್ಪಿನಲ್ಲಿ ಉಲ್ಲೇಖಿಸಿರುವ ಸ್ಪರ್ಶ ಎಂಬ ಪದ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಯ ವ್ಯಾಖ್ಯಾನವನ್ನೇ ಬದಲಿಸುತ್ತಿದೆ. ಇದರಿಂದ ಲೈಂಗಿಕ ಅಪರಾಧಗಳಿಂದ ಮಕ್ಕಳನ್ನು ರಕ್ಷಿಸುವ ಬದಲು ಅವರನ್ನೇ ಶಿಕ್ಷಿಸಿದಂತಾಗುತ್ತದೆ. ಲೈಂಗಿಂಗ ಉದ್ದೇಶದಿಂದ ಸ್ಪರ್ಶಿಸುವ ಯಾವುದೇ ಸ್ಪರ್ಶ ಕಾನೂನು ಉಲ್ಲಂಘನೆಯಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. 2016ರಲ್ಲಿ ಮಹಾರಾಷ್ಟ್ರದ ನಾಗ್ಪುರದಲ್ಲಿ 12 ವರ್ಷದ ಬಾಲಕಿಯೊಬ್ಬಳನ್ನು 39 ವರ್ಷದ ವ್ಯಕ್ತಿ ತನ್ನ ಮನೆಗೆ ಕರೆದೊಯ್ದು ಬಟ್ಟೆಯ ಮೇಲಿನಿಂದಲೇ ಆಕೆಯ ಗುಪ್ತಾಂಗಗಳನ್ನು ಸ್ಪರ್ಶಿಸಿ ದೌರ್ಜನ್ಯ ಎಸಗಿದ್ದ. ಸ್ಥಳೀಯ ಕೋರ್ಟ್‌ ಪೋಕ್ಸೋ ಕಾಯ್ದೆ ಹಾಗೂ ಐಪಿಸಿ 354ರ ಪ್ರಕಾರ ಆತನಿಗೆ 3 ವರ್ಷ ಜೈಲುಶಿಕ್ಷೆ ವಿಧಿಸಿತ್ತು. ಆದರೆ, ಬಾಂಬೆ ಹೈಕೋರ್ಟ್‌ ಆ ಆದೇಶ ರದ್ದುಪಡಿಸಿ, ಪ್ರಕರಣದಲ್ಲಿ ಚರ್ಮಕ್ಕೆ ಚರ್ಮ ತಾಗಿಲ್ಲ, ಹೀಗಾಗಿ ಲೈಂಗಿಕ ದೌರ್ಜನ್ಯ ನಡೆದಿಲ್ಲ ಎಂದು ವ್ಯಕ್ತಿಯನ್ನು ಖುಲಾಸೆಗೊಳಿಸಿತ್ತು. ಆ ಆದೇಶ ದೇಶಾದ್ಯಂತ ವಿವಾದಕ್ಕೆ ಕಾರಣವಾಗಿತ್ತು. ಅದನ್ನು ಪ್ರಶ್ನಿಸಿ ಮಹಾರಾಷ್ಟ್ರ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳು ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದವು.

ಕೇಂದ್ರ ಸರ್ಕಾರ ಹಾಗೂ ಮಹಾರಾಷ್ಟ್ರ ಸರ್ಕಾರ ಬಾಂಬೈ ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್‌ನಲ್ಲಿ ಪಶ್ನೆ ಮಾಡಿತ್ತು.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸುಪ್ರೀಂ ಕೋರ್ಟ್ ಪೋಕ್ಸೋ ಕಾಯ್ದೆಯಡಿ ಬಾಂಬೈ ಹೈಕೋರ್ಟ್ ಆದೇಶಕ್ಕೆ ತಡೆ ನೀಡಿತ್ತು. ಚರ್ಮಕ್ಕೆ ಚರ್ಮ ತಾಗಿಲ್ಲ ಎಂದು ಖುಲಾಸೆಗೊಳಿಸಿದ ಬಾಂಬೆ ಹೈಕೋರ್ಟ್ ತೀರ್ಪು ತಡೆಹಿಡಿದು ವಿಚಾರಣೆ ಆರಂಭಿಸಿತ್ತು.ಇದೀಗ ಸುಪ್ರೀಂ ಕೋರ್ಟ್ ಮಹತ್ವದ ಆದೇಶದ ಮೂಲಕ ಸ್ಪಷ್ಟತೆ ನೀಡಿದ್ದು, ಅತ್ಯಾಚಾರಿಗಳ ವಿರುದ್ಧ ನಿಯಮ ಕಠಿಣಗೊಳ್ಳುತ್ತಿದೆ. ಇಷ್ಟೇ ಅಲ್ಲ ಯಾವುದೇ ರೀತಿಯ ಲೈಂಗಿಕ ದೌರ್ಜನ್ಯ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಅನ್ನೋದನ್ನು ಹೇಳಿದೆ.

Leave a Reply

Your email address will not be published. Required fields are marked *

error: Content is protected !!