‘ಪಾಕ್ ಎದುರು ಭಾರತದ ಸೋಲು- ಅಪಹಾಸ್ಯ ಮಾಡಿದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್’
ರಿಯಾದ್: ಭಾರತದ ಜೊತೆ ಮಾತುಕತೆ ಹಾಗೂ ಪಾಕ್ ಗೆಲುವು ಹೋಲಿಸಿ ಅಲ್ಲಿನ ಪ್ರಧಾನಿ ಇಮ್ರಾನ್ ಖಾನ್ ಅಪಹಾಸ್ಯ ಮಾಡಿದ್ದಾರೆ. ಇಮ್ರಾನ್ ಖಾನ್ ಸದ್ಯ ಅರಬ್ ರಾಷ್ಟ್ರಗಳ ಪ್ರವಾಸದಲ್ಲಿದ್ದಾರೆ.
ರಿಯಾದ್ ನಲ್ಲಿ ಸೌದಿ ಅರೇಬಿಯಾ-ಪಾಕಿಸ್ತಾನ ಬಂಡವಾಳ ಹೂಡಿಕೆ ವೇದಿಕೆ ಉದ್ದೇಶಿಸಿ ಮಾತನಾಡಿದ ಇಮ್ರಾನ್ ಖಾನ್, ಕ್ರಿಕೆಟ್ ಅನ್ನು ಮಧ್ಯದಲ್ಲಿ ತಂದರು. ನಾವು ಅಫ್ಘಾನಿಸ್ತಾನದ ಮೂಲಕ ಮಧ್ಯ ರಾಷ್ಟ್ರಗಳೊಂದಿಗೆ ಹೆಚ್ಚಿನ ಸಂಪರ್ಕ ಸಾಧಿಸಬೇಕಿದೆ. ಇದರಿಂದ ಪಾಕಿಸ್ತಾನ ಮಾರುಕಟ್ಟೆ ವಿಸ್ತರಣೆಯಾಗಲಿದೆ. ನಮ್ಮ ನೆರೆ-ಹೊರೆಯಲ್ಲಿ ಎರಡು ಬೃಹತ್ ರಾಷ್ಟ್ರಗಳಿದ್ದು, ಅಲ್ಲಿ ದೊಡ್ಡ ಮಾರುಕಟ್ಟೆ ಇದೆ. ಇದರ ಸದುಪಯೋಗ ಪಡೆಯಬೇಕಿದೆ.
ಚೀನಾದೊಂದಿಗೆ ಈಗಾಗಲೇ ಪಾಕಿಸ್ತಾನ ಉತ್ತಮ ಸಂಬಂಧ ಹೊಂದಿದೆ. ಆದ್ರೆ, ಹೇಗಾದರೂ ಮಾಡಿ ಭಾರತದೊಂದಿಗೆ ಉತ್ತಮ ಸಂಬಂಧ ಹೊಂದಬೇಕಿದೆ. ಇದರಿಂದ ಪಾಕಿಸ್ತಾನದ ಆರ್ಥಿಕತೆಗೆ ತುಂಬಾ ಪ್ರಯೋಜನಕಾರಿಯಾಗಲಿದೆ. ಆದರೆ ಸದ್ಯ ಇದು ಸಾಧ್ಯವಿಲ್ಲ. ಏಕೆಂದರೆ ಭಾನುವಾರ ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಪಾಕಿಸ್ತಾನ, ಭಾರತವನ್ನು ಸೋಲಿಸಿದೆ. ಈ ಸಮಯದಲ್ಲಿ ಮಾತುಕತೆ ಹಾಗೂ ಸಂಬಂಧ ಸುಧಾರಿಸುವ ಬಗ್ಗೆ ಮಾತನಾಡುವುದು ತಪ್ಪು ಅಂತಾ ಹೇಳಿದ್ದಾರೆ.