ಮಂಗಳೂರು: ಪ್ರಧಾನ ಧರ್ಮಗುರು ಫಾ.ಮ್ಯಾಥ್ಯೂ ವಾಸ್ ವಿಧಿವಶ

ಕಿನ್ನಿಗೋಳಿ: ಇಲ್ಲಿನ ಕೊಸೆಸಾಂವ್ ಅಮ್ಮನವರ ಚರ್ಚ್ ನಲ್ಲಿ ಧರ್ಮ ಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದ ರೆವರೆಂಡ್ ಫಾದರ್ ಮ್ಯಾಥ್ಯೂ ವಾಸ್ (62) ಶುಕ್ರವಾರ ಮುಂಜಾವ 4 ಗಂಟೆ ವೇಳೆಗೆ ನಿಧನರಾಗಿದ್ದಾರೆ.

ಹೃದಯಾಘಾತಕ್ಕೊಳಗಾದ ಪರಿಣಾಮ ಅವರು ಇಹಲೋಕ ತ್ಯಜಿಸಿದ್ದಾಗಿ ಚರ್ಚ್ ಆಡಳಿತ ಸಮಿತಿ ತಿಳಿಸಿದೆ‌. ಕಳೆದ ಮೂರು ವರುಷಗಳಿಂದ ಅವರು ಕೊಸೆಸಾಂವ್ ಅಮ್ಮನವರ ಚರ್ಚ್ ನಲ್ಲಿ ಧರ್ಮ ಗುರುಗಳಾಗಿ ಸೇವಾ ನಿರತರಾಗಿದ್ದರು‌. 

ಮೂಲತಃ ಮೂಡಬಿದ್ರಿಯ ಸಿದ್ಧಕಟ್ಟೆಯವರಾದ ರೆ.ಫಾ. ಮ್ಯಾಥ್ಯೂ ವಾಸ್ 1987 ರಲ್ಲಿ ಧರ್ಮ ಗುರು ದೀಕ್ಷೆ ಪಡೆದು ಕಿನ್ನಿಗೋಳಿ ಚರ್ಚ್ ನಲ್ಲಿಯೇ ಸಹಾಯಕ ಧರ್ಮ ಗುರುಗಳಾಗಿ ಸೇವೆ ಆರಂಭಿಸಿದ್ದರು‌. ಬಳಿಕ ಕುಲಶೇಖರದಲ್ಲಿ ಸಹಾಯಕ ಧರ್ಮ ಗುರುಗಳಾಗಿ, ನಂತರ ಬೇಳ, ಉಡುಪಿ, ಮಂಗಳೂರಿನ ಚರ್ಚ್ ಗಳಲ್ಲಿ ಧರ್ಮ ಗುರುಗಳಾಗಿ ಸೇವೆ ಸಲ್ಲಿಸಿದ್ದರು‌.ರೆ.ಫಾ. ಮ್ಯಾಥ್ಯೂ ವಾಸ್ ಅವರು 1994 ನಲ್ಲಿ ತೆರೆ ಕಂಡ ಏಸು ಕ್ರಿಸ್ತ ಜೀವನಾಧಾರಿತ ‘ಭುವನ ಜ್ಯೋತಿ’ ಸಿನೆಮಾವನ್ನು ನಿರ್ಮಿಸಿದ್ದರು‌.

ಉಡುಪಿಯ ಕನ್ನರ್ಪಾಡಿ ಸೇಂಟ್ ಮೇರಿಸ್ ಶಾಲೆ ಅಭಿವೃದ್ಧಿಯಲ್ಲಿ ಮುಂಚೂಣಿಯ ಪಾತ್ರ ವಹಿಸಿದ್ದರು. ಹಾಗೂ ಯುವ ಸಮುದಾಯದ ಚಟುವಟಿಕೆಗೆ ಸದಾ ಸ್ಫೂರ್ತಿ ತುಂಬುತ್ತಿದ್ದ ಅವರು, ಪ್ರಸಕ್ತ ಮಂಗಳೂರು ಕೆಥೋಲಿಕ್ ಸಭಾದ ಆಧ್ಯಾತ್ಮಿಕ ನಿರ್ದೇಶಕರೂ ಆಗಿದ್ದರು. ಮೃತರ ಅಂತ್ಯ ಸಂಸ್ಕಾರವು ಶನಿವಾರ (ಅಕ್ಟೋಬರ್ 23) ಬೆಳಿಗ್ಗೆ ನಡೆಯಲಿರುವುದಾಗಿ ಆಡಳಿತ ಸಮಿತಿ ತಿಳಿಸಿದೆ.

ಇವರ ನಿಧನಕ್ಕೆ ಸರ್ವ ಧರ್ಮದ ಗಣ್ಯರು, ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಮುಂದಾಳುಗಳು ಸಂತಾಪ ಸೂಚಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!